ನವದೆಹಲಿ (ಅ.23): ಕೊರೋನಾ ವೈರಸ್‌ನಿಂದ ರಕ್ಷಣೆ ನೀಡುವ ಲಸಿಕೆ ಬಂದ ತಕ್ಷಣ ದೇಶದ ಪ್ರತಿಯೊಬ್ಬ ಪ್ರಜೆಗೂ ಅದನ್ನು ನೀಡಲು ಭಾರತ ಸರ್ಕಾರ ಈಗಾಗಲೇ 50,000 ಕೋಟಿ ರು. ತೆಗೆದಿರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಒಬ್ಬ ವ್ಯಕ್ತಿಗೆ ಕೊರೋನಾ ಲಸಿಕೆ ನೀಡಲು ಸುಮಾರು 500 ರು. ತಗಲಬಹುದು ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ಅದರಂತೆ 130 ಕೋಟಿ ಜನರಿಗೆ ಲಸಿಕೆ ನೀಡಲು ಸುಮಾರು 65,000 ಕೋಟಿ ರು. ಬೇಕಾಗುತ್ತದೆ. ಅದರಲ್ಲಿ 50,000 ಕೋಟಿ ರು.ಗಳನ್ನು ಈಗಿನಿಂದಲೇ ಕಾಯ್ದಿರಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೊರೋನಾ ಸೋಂಕಿತ ಶವ ಪರೀಕ್ಷೆ : ಹೊರಬಿತ್ತು ಆತಂಕಕಾರಿ ಸಂಗತಿ

ಮಾಚ್‌ರ್‍ 31ಕ್ಕೆ ಅಂತ್ಯಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಇಷ್ಟುಹಣ ತೆಗೆದಿರಿಸಲಾಗಿದೆ. ನಂತರ ಅಗತ್ಯಬಿದ್ದರೆ ಮುಂದಿನ ಬಜೆಟ್‌ನಲ್ಲಿ ಮತ್ತೆ ಹಣ ನೀಡಲಾಗುತ್ತದೆ. ಒಟ್ಟಿನಲ್ಲಿ ಲಸಿಕೆಗೆ ಯಾವ ರೀತಿಯಲ್ಲೂ ಹಣದ ಕೊರತೆಯಾಗದಂತೆ ನೋಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಒಂದು ಲಸಿಕೆಗೆ 500 ರು. ಹೇಗೆ?:  ಸದ್ಯದ ಅಂದಾಜಿನ ಪ್ರಕಾರ ಕೊರೋನಾ ಲಸಿಕೆಯ ಒಂದು ಡೋಸ್‌ಗೆ ಸುಮಾರು 150 ರು. ತಗಲಬಹುದು. ಪ್ರತಿ ವ್ಯಕ್ತಿಗೂ ಎರಡು ಡೋಸ್‌ ನೀಡಬೇಕಾಗುತ್ತದೆ. ಹಾಗೆಯೇ ಒಬ್ಬ ವ್ಯಕ್ತಿಗೆ ನೀಡಬೇಕಾದ ಲಸಿಕೆಯನ್ನು ಸಂರಕ್ಷಿಸಿಡಲು, ಸಾಗಾಟ ಮಾಡಲು ಮಾಡುವ ಹಾಗೂ ಅದನ್ನು ಆತನಿಗೆ ನೀಡಲು ಹೀಗೆ ಮೂಲಸೌಕರ್ಯ ಸಂಬಂಧಿ ವೆಚ್ಚಕ್ಕೆಂದು 150-200 ರು. ಬೇಕಾಗುತ್ತದೆ. ಹೀಗಾಗಿ ಒಂದು ಲಸಿಕೆಯ ವೆಚ್ಚ 500 ರು. ಎಂದು ಅಂದಾಜಿಸಲಾಗಿದೆ.