ಡೆಲ್ಲಿ ಮಂಜು

ನವದೆಹಲಿ(ಜೂ.  21)  ಮಹಾರಾಷ್ಟ್ರದ ಕೊರೋನಾ ನಾಗಾಲೋಟಕ್ಕೆ ಹೋಲಿಸಿದರೆ ಒಂದು ಹೆಜ್ಜೆ ಅಷ್ಟೆ ಹಿಂದೆ ಇದೆ ಡೆಲ್ಲಿ. ನೋಯ್ಡಾದ ಮಾರುಮೂಲೆಯಲ್ಲಿದ್ದ ಆತಂಕ, ಲೂಟಿಯಾನ್ಸ್ ಜೋನ್ ನ  ಗಲ್ಲಿಯೂ ತಲುಪಿಯಾಗಿದೆ. ಹತ್ತಾರು ಅಂತಸ್ತಿಗಳ ಅಪಾಟ್೯ಮೆಂಟ್,  ಜೋಪಡಿ, ಪಾರ್ಲಿಮೆಂಟ್ ಕಾಂಪ್ಲೆಕ್ಸ್, ರಾಷ್ಟ್ರಪತಿ ಭವನ ಹೀಗೆ ಯಾವುದು ಬಿಟ್ಟಿಲ್ಲ ಕೊರೊನಾ ಹನಿಜ್ವರದ ವೈರಸ್. ಮೊದಲ ದಿನದಿಂದ ದೆಹಲಿಯ ಹನ್ನೊಂದೂ ಜಿಲ್ಲೆಗಳು ರೆಡ್ ಜೋನ್ ನಲ್ಲಿವೆ. 

243 ಕಂಟೈನ್ಮೆಂಟ್ ಜೋನ್ ಗಳನ್ನು ಮಾಡಿದ್ರೂ ನಿಲ್ಲುತ್ತಿಲ್ಲ ಕರೋನಾ ಪೀಕಲಾಟ.. ಜನರ ತಾಕಲಾಟ.. !

ಎರಡು ಸಾವಿರದ ದಾಟಿದ ಸಾವು..!

ಬಹುಶಃ ಮನುಷ್ಯ ಎಷ್ಟೇ ಧೈರ್ಯ ಶಾಲಿ ಅಂದ್ರು ಆತನ ಅಳಕು ಅಥವಾ ಎದೆ ಬಡಿತ ಹೆಚ್ಚಿಸುವುದು ಸಾವು ಮಾತ್ರ. ಇಂಥ ಸಾವು ಹಠಕ್ಕೆ ಬಿದ್ದಂತೆ ಓಟಕ್ಕೆ ನಿಂತಿದೆ. ಮಹಾರಾಷ್ಟ್ರದಲ್ಲಿ ಐದು ಸಾವಿರ ದಾಟಿದ್ರೆ, ಡೆಲ್ಲಿಯಲ್ಲಿ ಎರಡು ಸಾವಿರ ದಾಟಿದೆ. ಇನ್ನು ಸೋಂಕಿತರ ಸಂಖ್ಯೆ ಮಹಾರಾಷ್ಟ್ರ ನಂತರ ದೆಹಲಿಯಲ್ಲಿ  ಹೆಚ್ಚುತ್ತಿದೆ. ದೆಹಲಿಯಲ್ಲಿ ಸೂರ್ಯ ಒಂದು ದಿನದ ಡ್ಯೂಟಿ ಮುಗಿಸುವ ಹೊತ್ತಿಗೆ ಎರಡರಿಂದ ಮೂರು ಸಾವಿರ ಸೋಂಕಿತರು ಸೇರ್ಪಡೆ ಯಾಗುತ್ತಿದ್ದಾರೆ.  ಸೋಂಕಿತರ ಈ ಸರಣಿಯ ಭಯ, ದೆಹಲಿಯ ಪ್ರತಿಮನೆಯ ಪಡಸಾಲೆ ತಲುಪಿದೆ. ಒಂದು ಕಡೆ ಸೂರ್ಯ ತನ್ನ ಕಿರಣಗಳ ಮೂಲಕ ಕತ್ತಿ ಝಳಪಿಸುತ್ತಿದ್ದರೇ, ಮತ್ತೊಂದು ಕಡೆ 'ಆ' ವೈರಸ್ ಎಲ್ಲರ ಜೊತೆ ಜೂಟಾಟಕ್ಕೆ ನಿಂತಿದೆ. 

ಬೆಚ್ಚಿಬೀಳಿಸುತ್ತಿರುವ ಬೆಳವಣಿಗೆ ದರ

ದೆಹಲಿಯ ಒಂದು ತಿಂಗಳ ಕೊರೊನಾ ಬೆಳವಣಿಗೆ ದರ ನೋಡಿದ್ರೆ ಎಂಥವರಿಗೂ ಎದೆ ಝಲ್ ಎನ್ನುತ್ತಿದೆ. ಮೇ 17 ರಂದು ಇದರ ಬೆಳವಣಿಗೆ ದರ ಶೇ.7 ಇತ್ತು. ಜೂನ್ 17 ಕ್ಕೆ ನೋಡಿದ್ರೆ ಶೇ.31.6 ಕ್ಕೆ ಬಂದು ತಲುಪಿದೆ. ಕಳೆದ ತಿಂಗಳಲ್ಲಿ ನೂರು ಮಂದಿಯ ಸ್ಯಾಂಪಲ್ ಟೆಸ್ಟ್ ಮಾಡಿದ್ರೆ ಏಳು ಮಂದಿಗೆ ಪಾಸಿಟಿವ್ ಸೋಂಕು ಪತ್ತೆ ಆಗುತ್ತಿತ್ತು. ಆದ್ರೆ ಈಗ ಪ್ರತಿ 100 ಮಂದಿಯಲ್ಲಿ 31 ಮಂದಿಗೆ ಸೋಂಕು ಹರಡಿದೆ ಎನ್ನುತ್ತಿವೆ ಸರ್ಕಾರಿ ಅಂಕಿ-ಅಂಶಗಳು.

ಭಾರತದಲ್ಲಿ ಕೊರೊನಾ ಬೆಳವಣಿಗೆ ದರ ಮೇ ತಿಂಗಳಲ್ಲಿ ಶೇ.4.6 ಇತ್ತು. ಜೂನ್ 17ರ ಹೊತ್ತಿಗೆ ಅದು ಶೇ.7.8ಕ್ಕೆ ತಲುಪಿದೆ.

ಕೊರೋನಾ ನಮಗೆ ಕಲಿಸಿದ ಜೀವನ ಪಾಠಗಳು

ಆಸ್ಪತ್ರೆಗಳು ಮಾತುಕೇಳುತ್ತಿಲ್ಲ..!

ಅರ್ಧ ರಾಜ್ಯತ್ವ ಅನುಭವಿಸುತ್ತಿರುವ ದೆಹಲಿಯ ಆಪ್ ಸರ್ಕಾರಕ್ಕೆ ಇದು ಪ್ರಾಣ ಸಂಕಟದ ವಿಷ್ಯವಾಗಿದೆ. ಪ್ರಮುಖ ಏಮ್ಸ್, ಸಫ್ಥರ್ ಜಂಗ್, ಎಲ್ ಎನ್ ಜೆ ಪಿ ಅಂಥ ಆಸ್ಪತ್ರೆಗಳು ಕೇಂದ್ರದ ಅಡಿ ಬರುತ್ತವೆ. ಉಳಿದ ಕೆಲವು ಆಸ್ಪತ್ರೆಗಳು ದೆಹಲಿಯ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಯಾವ ಆದೇಶ ಹೊರಡಿಸಿದ್ರು ಒಬ್ಬರ ಮಾತು ಒಬ್ಬರು ಕೇಳದಂತ ಸ್ಥಿತಿ ಇದೆ. ಬೆಡ್ ಇಲ್ಲ, ಚಿಕಿತ್ಸೆ ಇಲ್ಲ ಅನ್ನುವ ಕೂಗು ಕೇಜ್ರಿವಾಲ್ ಸರ್ಕಾರವನ್ನು ಸಂಕಷ್ಟಕ್ಕೆ ದೂಡಿರುವುದು ಸುಳ್ಳಲ್ಲ.

ಇತ್ತ ನಿತ್ಯ  ಎರಡು,ಮೂರು ಸಾವಿರ ಸೋಂಕಿತರ ಸರಣಿ ಶುರುವಾದ ಕೂಡಲೇ ಕೇಂದ್ರ ಹೋಂಮಂತ್ರಿ ಅಮಿತ್ ಶಾ ನೇರವಾಗಿ ಅಖಾಡಕ್ಕೆ ಇಳಿಯಬೇಕಾಯ್ತು. ಸ್ಮಶಾನ ದಿಂದ ಹಿಡಿದು ಆಸ್ಪತ್ರೆಗಳಿಗೆ ಭೇಟಿ ನೀಡುವ ತನಕ ಹೋಗಬೇಕಾಯ್ತು.. ಡೆಲ್ಲಿಗೆ 'ಕೊರೊನಾ ಡೆಲ್ಲಿ' ಅನ್ನೋ ಅಡ್ಡ ಹೆಸರು ಬಂದು ಬಿಡುತ್ತದೆ ಅನ್ನೋಕೆ ಶುರುವಾಗಿತ್ತು. 

ಒಂದು ಸೂರು.. 10 ಸಾವಿರ ಸೋಂಕಿತರು..!

ಜುಲೈ ಅಂತ್ಯಕ್ಕೆ ಡೆಲ್ಲಿಯಲ್ಲಿ ಸೋಂಕಿತರ ಸಂಖ್ಯೆ ಐದು ಲಕ್ಷ ತಲುಪುತ್ತದೆ ಅಂಥ ಖುದ್ದು ಸಿಎಂ ಕೇಜ್ರಿವಾಲ್ ಹೇಳಿದಾಗ ಡೆಲ್ಲಿ ಜನರಲ್ಲಿ ಆತಂಕ ಇಮ್ಮಡಿಯಾಯ್ತು. ಡೆಲ್ಲಿ ಆಸ್ಪತ್ರೆಗಳು ಡೆಲ್ಲಿಯ ಜನಕ್ಕೆ ಎಂದಾಗ ಲೆಫ್ಟಿನೆಂಟ್ ಜನರಲ್ ಸಾಬ್ ನೋ ಎಂದ್ರು.

ಕೊರೋನಾ ಬಂದೇ ಇಲ್ಲ, ಆದರೂ ಡಬಲ್ ಕ್ವಾರಂಟೈನ್.ಏನಿದು ಕತೆ ವ್ಯಥೆ

ಅತ್ತ ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾದಿಯಾಗಿಯೂ ಡೆಲ್ಲಿ ಸರ್ಕಾರದ ಕ್ರಮಗಳಿಗೆ ಚಾಟಿ ಬೀಸಿದವು.ಇದರ ಬೆನ್ನಲೆ ಕೇಜ್ರಿವಾಲ್ ಸರ್ಕಾರ, ಸೌತ್ ಡೆಲ್ಲಿಯ ಬಾಟಿ ಮೈನ್ಸ್ ಪ್ರದೇಶದಲ್ಲಿರುವ ರಾಧಾಸ್ವಾಮಿ ಆಧ್ಯಾತ್ಮಿಕ ಕೇಂದ್ರದಲ್ಲಿ ದೊಡ್ಡದೊಂದು ಶೆಡ್ ಹುಡುಕಿದೆ. ಒಂದೇ ಸ್ಥಳದಲ್ಲಿ 10 ಸಾವಿರ ಮಂದಿಗೆ ಚಿಕಿತ್ಸೆ ಕೊಡಬಹುದಾಗಿದೆ. 
ಖುದ್ದು ಸ್ಥಳ ಪರಿಶೀಲನೆ ಮಾಡಿದ ಕೇಜ್ರಿವಾಲ್ ಸಾಹೇಬ್ರು ಒಂದು ವಾರ ಅಥವಾ 10 ದಿನದಲ್ಲಿ ಸಿದ್ದಗೊಳಿಸುವ ಭರವಸೆ ನೀಡಿದ್ದಾರೆ.

ಖುಷಿ ಸಂಗತಿ ಅಂದ್ರೆ ಕೊರೊನಾ ನಿಯಂತ್ರಣಕ್ಕೆ ಫ್ಯಾಬಿಫ್ಲ್ಯೂ ಮಾತ್ರೆ ಬಂದಿದೆ ಎನ್ನುವುದು. ನೋಡೋಣ 103 ರೂಪಾಯಿಯ ಈ ಮಾತ್ರೆ ಡೆಲ್ಲಿಯ ಎಷ್ಟು ಜನರ ಪ್ರಾಣ ಉಳಿಸುತ್ತೆ ಅಂತ.