ಡೆಲ್ಲಿ ಮಂಜು

ಕೋವಿಡ್ ಹುಟ್ಟು ಹಾಕಿದ ಕೊರಂಟೈನ್ ಅನ್ನೋ ಪದ ಈಗ ನಾನಾ ರೀತಿಯಲ್ಲಿ ಸದ್ದು ಮಾಡುತ್ತಿದೆ. ಒಂದು ಟ್ರೈನ್ ಇಳಿದ್ರೆ ಸಾಕು ಮೊದಲು ಸ್ವಾಗತಿಸೋದೆ ಕೊರಂಟೈನ್, ಒಂದು ಬಸ್ ಇಳಿದ್ರೆ ಬಂದು ಮಾತಾಡಿಸೋ ಪದವೇ ಕೊರಂಟೈನ್  (ಹೋಂ ಕೊರಂಟೈನ್).

ಇಂಥ ಹೊತ್ತಲ್ಲಿ ವಿಮಾನ ಇಳಿದ್ರೆ ಅದರಲ್ಲೂ ವಿದೇಶಿ ವಿಮಾನ ಇಳಿದ್ರೆ ಒಂದಲ್ಲ ಎರಡೆರಡು ಕೊರಂಟೈನ್ ಸ್ವಾಗತಿಸುವಂತ ಪರಿಸ್ಥಿತಿ ಕೆಲವರಿಗೆ ಎದುರಾಗಿದೆ.

ಬಿಜಿನೆಸ್, ಪ್ರಾಜೆಕ್ಟ್, ಟ್ರೈನಿಂಗ್ ಅಂಥ ವಿದೇಶಿಗಳಿಗೆ ಹೋದವರಿಗೆ ಕೊರೊನಾ ಇನ್ನಿಲ್ಲದ ಪಜೀತಿ ತಂದಿಟ್ಟಿರುವುದು ಸುಳ್ಳಲ್ಲ.ಅದರಲ್ಲೂ ಕೊಲ್ಲಿ ರಾಷ್ಟ್ರ ಗಳಿಂದ ಬಂದು ದೆಹಲಿಯಲ್ಲಿ ಇಳಿದವರಿಗೆ ಈ ಅನುಭವ ಆಗಿದೆ.

ರೈಲೊಂದು ಕತೆ ನೂರು,ಕೊರೋನಾ ನಡುವೆ ನೂರಾರು ಕಣ್ಣೀರ ಕತೆಗಳು

ಧಾರವಾಡ ಮೂಲದ ನಿವಾಸಿ, ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಸೈಯದ್ ನವೀದ್ ಜುವೇದ್ ಸುವರ್ಣ ನ್ಯೂಸ್ ಜೊತೆ ಮಾತಾಡಿ, ಸೌದಿಯಿಂದ ನೇರವಾಗಿ ನಮ್ಮನ್ನು ದೆಹಲಿಗೆ ತಂದು ಇಳಿಸಿದ್ರು. ಇಲ್ಲಿ 14 ದಿನ ಕೊರಂಟೈನ್ ಇವತ್ತಿಗೆ ಮುಗಿತು. ಸೋಮವಾರ ಬೆಂಗಳೂರು ತಲುಪಿ ಅಲ್ಲಿಂದ ಧಾರವಾಡ ಮಾರ್ಗ ಹಿಡಿಯುತ್ತೇನೆ. ಅಲ್ಲಿಗೆ ಹೋದ ಮೇಲೆ ನಾನೇ ಕೊರಂಟೈನ್ ಆಗಿಬಿಡ್ತಿನಿ ಅಂದ್ರು.

ವಿಮಾನದ ಮೂಲಕ ಯಾರೇ ಬರಲಿ ಕರ್ನಾಟಕದ ತಲುಪಿದ ಕೂಡಲೇ ಏಳು ದಿನ ಕೊರಂಟೈನ್ ಆಗಬೇಕು ಅನ್ನೋ ನಿಯಮ ಇದೆ. ಇಷ್ಟರ ನಡುವೆ ಒಮ್ಮೆ ಕರ್ನಾಟಕಕ್ಕೆ ಬಂದು ಯಾವುದೇ ಜಿಲ್ಲೆಗೆ ಓಡಾಡಿದ್ರು ಒಮ್ಮೆ ಮಾತ್ರ ಕೊರಂಟೈನ್ ಅಂಥ ರೂಲ್ಸ್ ಮಾಡಿದ್ದಾರೆ. ಇಲ್ಲ ಅಂದ್ರೆ ನವೀದ್ ಅಂಥವರು ಮೂರು ಮೂರು ಕೊರಂಟೈನ್ ಎದುರಿಸಬೇಕಿತ್ತು.

ನಾನು ಪ್ರಾಜೆಕ್ಟ್ ಕೆಲಸದ ಮೇಲೆ ಸೌದಿ ಹೋಗಿದ್ದೆ. ಅಲ್ಲಿ ಕೊರೊನಾ ಕಟ್ಟಿ ಹಾಕಿತು. ಎರಡು ತಿಂಗಳ ಬಳಿಕ ಇಂಡಿಯಾ ಸರ್ಕಾರ ವಿಮಾನದಲ್ಲಿ ಕರೆತಂತು. ದೆಹಲಿಗೆ ಬಂದ ಮೇಲೆ ನಮ್ಮೂರು ಅನ್ನೋ ಫೀಲಿಂಗ್ ಬಂತು.  ಅದರಲ್ಲೂ ಖಾಸಗಿ ಕೊರಂಟೈನ್ ಆಯ್ಕೆ ಮಾಡಿದ್ದರಿಂದ ಸೌದಿಯಲ್ಲಿ ಕೆಲಸದಿಂದ ಗಳಿಸಿದ ದುಡ್ಡು ಕೊರಂಟೈನ್ ನಲ್ಲಿ ಹೋಯ್ತು ಎನ್ನುವಂತಾಯ್ತು ಅಂತಾರೆ. ಏನೇ ಆಗಲಿ ಕೊರೊನಾ ಸೋಂಕು ಇಲ್ಲದೇ ಎರಡೆರಡೂ, ಮೂರು ಕೊರಂಟೈನ್ ಎದುರಿಸೋದು ಬಹಳ ಕಷ್ಟದ ಸಂಗತಿ.