ನವದೆಹಲಿ(ನ.08): ದೇಶದಲ್ಲೇ ಅತಿ ಹೆಚ್ಚು ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗುತ್ತಿದ್ದ ರಾಜ್ಯಗಳ ಪೈಕಿ ಮೊದಲೆರಡು ಸ್ಥಾನದಲ್ಲಿದ್ದ ಮಹಾರಾಷ್ಟ್ರ ಹಾಗೂ ಕರ್ನಾಟಕವನ್ನು ಹಿಂದಿಕ್ಕಿ ದೆಹಲಿ ಮತ್ತು ಕೇರಳ ದೇಶದ ಕೊರೋನಾ ಹಾಟ್‌ಸ್ಪಾಟ್‌ ಆಗಿ ಬದಲಾಗಿವೆ. ಶನಿವಾರ ಬೆಳಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು 50,356 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ದೆಹಲಿಯೊಂದರಲ್ಲೇ ಅತ್ಯಧಿಕ 7,178 ಕೊರೋನಾ ಪ್ರಕರಣಗಳು ಹಾಗೂ ಕೇರಳದಲ್ಲಿ 7,002 ಹೊಸ ಪ್ರಕರಣಗಳು ಕಂಡುಬಂದಿವೆ.

ಜೂ.23ರಂದು ದೆಹಲಿಯಲ್ಲಿ ದೇಶದಲ್ಲೇ ಅತ್ಯಧಿಕ ಕೊರೋನಾ ವೈರಸ್‌ ಪ್ರಕರಣಗಳು ಅಂದರೆ 3,947 ಕೇಸ್‌ಗಳು ದಾಖಲಾಗಿದ್ದವು. ಆ ಬಳಿಕ ದೆಹಲಿಯಲ್ಲಿ ಮೊದಲ ಅಲೆ ಇಳಿಕೆ ಕಂಡಿತ್ತು. ದೈನಂದಿನ ಕೊರೋನಾ ವೈರಸ್‌ ಪ್ರಕರಣಗಳು 1000ಕ್ಕೆ ಇಳಿಕೆ ಕಂಡಿದ್ದವು. ಅದೇ ರೀತಿ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತಲೂ ಕಡಿಮೆ ಆಗಿತ್ತು. ಈಗ ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 40 ಸಾವಿರಕ್ಕೆ ಏರಿಕೆ ಆಗಿದೆ.

ಇನ್ನು ಕೊರೋನಾ ವೈರಸ್‌ ಪ್ರಕರಣಗಳ ಪೈಕಿ ಅತಿ ಹೆಚ್ಚು ಕೊಡುಗೆ ನೀಡುತ್ತಿದ್ದ ರಾಜ್ಯಗಳಾದ ಮಹಾರಾಷ್ಟ್ರದಲ್ಲಿ ಸರಾಸರಿ ದೈನಂದಿನ ಪ್ರಕರಣಗಳು 6 ಸಾವಿರಕ್ಕಿಂತ ಕಡಿಮೆ ಇದ್ದರೆ, ಕರ್ನಾಟಕದಲ್ಲಿ 3 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿವೆ.