ಒಡಿಶಾದಲ್ಲಿ ಕೋರಮಂಡಲ್ ರೈಲು ದುರಂತ: ಮೃತರ ಸಂಖ್ಯೆ 233ಕ್ಕೆ ಏರಿಕೆ
ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆ ಆಗಿದೆ.
ಒಡಿಶಾ: ಇಲ್ಲಿನ ಬಾಲಸೋರ್‌ನಲ್ಲಿ ನಡೆದ ಕೋರಮಂಡಲ್ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆ ಆಗಿದೆ. ನಿನ್ನೆ ಸಂಜೆ ಹೌರಾದಿಂದ ಚೆನ್ನೈಗೆ ಬರುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ ಕೋಲ್ಕತ್ತಾಗೆ ಹೋಗುತ್ತಿದ್ದ ಮತ್ತೊಂದು ರೈಲಿನ ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಈ ಭೀಕರ ರೈಲು ದುರಂತ ಸಂಭವಿಸಿದೆ. ಘಟನೆಯಲ್ಲಿ 900 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆದ ಅತ್ಯಂತ ಮಾರಣಾಂತಿಕ ರೈಲು ಅಪಘಾತ ಎನಿಸಿದೆ. ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಈ ಮೂರು ರೈಲುಗಳು ಅಪಘಾತಕ್ಕೀಡಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ವಾಯುಸೇನೆಯ ಹೆಲಿಕಾಪ್ಟರ್‌ಗಳು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಈಗಾಗಲೇ ಘಟನಾ ಸ್ಥಳಕ್ಕೆ ಹೆಲಿಕಾಪ್ಟರ್‌ಗಳು ಬಂದಿಳಿದಿವೆ. 2016ರ ನಂತರ ನಡೆದ ಭೀಕರ ಅಪಘಾತ ಇದಾಗಿದೆ. 2016ರಲ್ಲಿ ಇಂದೋರ್-ಪಟನಾ ಎಕ್ಸ್‌ಪ್ರೆಸ್ ರೈಲು (19321) ಕಾನ್ಪುರ ಬಳಿ ಅಪಘಾತಕ್ಕೀಡಾಗಿ 150 ಮಂದಿ ಸಾವಿಗೀಡಾಗಿದ್ದರು. ಇದಾದ ಬಳಿಕ ಹಲವು ಅಪಘಾತಗಳು ಸಂಭವಿಸಿದ್ದರೂ ಸಹ ಈ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿರಲಿಲ್ಲ. ಈಗ ಒಡಿಶಾದ ತ್ರಿವಳಿ ರೈಲು ದುರಂತ ಸುಮಾರು 200ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಒಡಿಶಾ ರೈಲು ದುರಂತದಲ್ಲಿ ಬೆಂಗಳೂರಿನ ಇಬ್ಬರು ಸಾವು
10 ವರ್ಷಗಳ ಭೀಕರ ಅಪಘಾತಗಳು
ಕಳೆದ 10 ವರ್ಷಗಳಲ್ಲಿ ನಡೆದ ಭೀಕರ ರೈಲು ಅಪಘಾತಗಳ ಪಟ್ಟಿ ಹೀಗಿದೆ.
2012: ಆಂಧ್ರಪ್ರದೇಶದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಹಂಪಿ ಎಕ್ಸ್‌ಪ್ರೆಸ್, 25 ಸಾವು, 43 ಮಂದಿಗೆ ಗಾಯ
2014: ಉತ್ತರ ಪ್ರದೇಶದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಗೋರಖ್‌ಧಾಮ್ ಎಕ್ಸ್‌ಪ್ರೆಸ್, 25 ಸಾವು, 50 ಮಂದಿಗೆ ಗಾಯ
2016: ಕಾನ್ಪುರದಲ್ಲಿ ಹಳಿ ತಪ್ಪಿದ ಇಂದೋರ್ ಪಟನಾ ಎಕ್ಸ್‌ಪ್ರೆಸ್, 150 ಸಾವು, 150 ಮಂದಿಗೆ ಗಾಯ
2017: ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ಕೈಫಿಯಾತ್ ಎಕ್ಸ್‌ಪ್ರೆಸ್, 70 ಮಂದಿಗೆ ಗಾಯ
2017: ಮುಜಾಫರ್‌ನಗರದಲ್ಲಿ ಹಳಿ ತಪ್ಪಿದ ಪುರಿ-ಹರಿದ್ವಾರ ಉತ್ಕಲ್ ಎಕ್ಸ್‌ಪ್ರೆಸ್, 23 ಸಾವು, 60 ಮಂದಿಗೆ ಗಾಯ
2022: ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ಬಿಕಾನೇರ್-ಗುವಾಹಟಿ ಎಕ್ಸ್‌ಪ್ರೆಸ್, 9 ಸಾವು, 36 ಮಂದಿಗೆ ಗಾಯ
ಯಶವಂತಪುರ- ಕೊರೊಮಂಡೆಲ್ ಎಕ್ಸ್‌ಪ್ರೆಸ್ ರೈಲು ಭೀಕರ ಅಪಘಾತ, ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಸಾವಿನ ಸಂಖ್ಯೆ!
ಇತ್ತೀಚಿನ ವರದಿಯನ್ನು ಉಲ್ಲೇಖಿಸಿ, ಒಡಿಶಾ ಮುಖ್ಯ ಕಾರ್ಯದರ್ಶಿ ಟ್ವಿಟ್ ಮಾಡಿದ್ದು, ಸಾವಿನ ಸಂಖ್ಯೆ 233ಕ್ಕೆ ಏರಿಕೆ ಆಗಿದೆ ಎಂದು ತಿಳಿಸಿದ್ದಾರೆ. ಕೋಲ್ಕತ್ತಾದಿಂದ ದಕ್ಷಿಣಕ್ಕೆ 250 ಕಿಮೀ ದೂರ ಮತ್ತು ಭುವನೇಶ್ವರದಿಂದ 170 ಕಿಮೀ ಉತ್ತರದಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಬಾಲಸೋರ್ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುಮಾರು 900 ಜನರು ಗಾಯಗೊಂಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಮೀಪದ ಜಿಲ್ಲೆಗಳ ಎಲ್ಲಾ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೂರು ಎನ್‌ಡಿಆರ್‌ಎಫ್ ಘಟಕಗಳು, 4 ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳು, 15 ಕ್ಕೂ ಹೆಚ್ಚು ಅಗ್ನಿಶಾಮಕ ರಕ್ಷಣಾ ತಂಡಗಳು, 30 ವೈದ್ಯರು, 200 ಪೊಲೀಸ್ ಸಿಬ್ಬಂದಿ ಮತ್ತು 60 ಆಂಬ್ಯುಲೆನ್ಸ್‌ಗಳನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ತಿಳಿಸಿದ್ದಾರೆ. ಭೀಕರ ರೈಲು ದುರಂತದ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಇತ್ತ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ವಾಯುಪಡೆಯನ್ನು ಸ್ಥಳಕ್ಕೆ ಕರೆಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.