ನವದೆಹಲಿ(ಆ.15): ಭಾಷಾ ಸಮಾನತೆಗಾಗಿ ಹೋರಾಡುತ್ತಿರುವ ದಕ್ಷಿಣದ ರಾಜ್ಯಗಳ ಭಾವನೆಯನ್ನು ಎತ್ತಿಹಿಡಿಯುವ ಮಹತ್ವದ ಬೆಳವಣಿಗೆಯೊಂದರಲ್ಲಿ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ದೇಶದ ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲಾ 22 ಅನುಸೂಚಿತ ಭಾಷೆಗಳಿಗೂ ಅಧಿಕೃತ ಭಾಷೆಯ ಸ್ಥಾನ ನೀಡುವ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದೆ.

ಕೇಂದ್ರ ಸರ್ಕಾರದ ಆದೇಶ ಅಥವಾ ಮಾಹಿತಿಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟಿಸಿದರೆ ಕರ್ನಾಟಕ, ಮಹಾರಾಷ್ಟ್ರ, ನಾಗಾಲ್ಯಾಂಡ್‌ನಂತಹ ರಾಜ್ಯಗಳ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಹೇಗೆ ಅರ್ಥವಾಗುತ್ತದೆ? ಈಗ ತಂತ್ರಜ್ಞಾನ ಸಾಕಷ್ಟುಮುಂದುವರೆದಿದೆ. ಹಿಂದಿ, ಇಂಗ್ಲಿಷ್‌ನಲ್ಲಿರುವುದನ್ನು ಎಲ್ಲಾ 22 ಅನುಸೂಚಿತ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವುದು ಕಷ್ಟವಲ್ಲ. ಆದ್ದರಿಂದ 1963ರ ಅಧಿಕೃತ ಭಾಷೆಗಳ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಪರಿಶೀಲಿಸಿ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಅವರ ಪೀಠ ಸಲಹೆ ನೀಡಿದೆ.

ನ್ಯಾಯಾಂಗ ನಿಂದನೆ; ಪ್ರಶಾಂತ್ ಭೂಷಣ್ ದೋಷಿ, ಆ. 20 ರಂದು ಶಿಕ್ಷೆ ಪ್ರಕಟ

ಕಳೆದ ಮಾಚ್‌ರ್‍ ತಿಂಗಳಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ಪ್ರಕಟಿಸಿದ ಪರಿಸರ ಪರಿಣಾಮ ಅಧ್ಯಯನ ವರದಿಯು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಇತ್ತು. ಅದನ್ನು ಎಲ್ಲಾ 22 ಅನುಸೂಚಿತ ಭಾಷೆಗಳಲ್ಲೂ ಪ್ರಕಟಿಸಬೇಕೆಂದು ಕೆಲವರು ದೆಹಲಿ ಹೈಕೋರ್ಟ್‌ಗೆ ಹೋಗಿದ್ದರು. ಆ ಕುರಿತು ತೀರ್ಪು ನೀಡಿದ್ದ ದೆಹಲಿ ಹೈಕೋರ್ಟ್‌, ಈ ವರದಿಯನ್ನು ಎಲ್ಲಾ 22 ಅನುಸೂಚಿತ ಭಾಷೆಗಳಲ್ಲಿ ಪ್ರಕಟಿಸುವಂತೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅದು ಗುರುವಾರ ವಿಚಾರಣೆಗೆ ಬಂದಿದ್ದು, ಈ ವೇಳೆ ಕೇಂದ್ರ ಸರ್ಕಾರದ ಪ್ರತಿನಿಧಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಸುಪ್ರೀಂಕೋರ್ಟ್‌ ಮೇಲಿನಂತೆ ಸೂಚನೆ ನೀಡಿತು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ, ಸಂವಿಧಾನದ 343ನೇ ಪರಿಚ್ಛೇದದ ಪ್ರಕಾರ ಭಾರತ ಸರ್ಕಾರದ ಅಧಿಕೃತ ಭಾಷೆಗಳು ಹಿಂದಿ ಮತ್ತು ಇಂಗ್ಲಿಷ್‌ ಆಗಿವೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲಾ 22 ಅನುಸೂಚಿತ ಭಾಷೆಗಳನ್ನೂ ಭಾರತ ಸರ್ಕಾರದ ಅಧಿಕೃತ ಆಡಳಿತ ಭಾಷೆಯಾಗಿ ಬಳಸಬೇಕೆಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ. ಮೇಲಾಗಿ, ಅಧಿಕೃತ ಭಾಷೆಗಳ ಕಾಯ್ದೆಯ ಸೆಕ್ಷನ್‌ 3ರಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಆದೇಶ, ನಿರ್ಣಯ ನಿಯಮ, ಅಧಿಸೂಚನೆ ಹಾಗೂ ಆಡಳಿತಾತ್ಮಕ ಮಾಹಿತಿಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟಿಸಬೇಕು ಎಂದಿದೆ ಎಂದು ತಿಳಿಸಿತು.

ನಾಲ್ಕುವರೆ ತಿಂಗಳ ಬಳಿಕ ಸುಪ್ರೀಂ ಬಾಗಿಲು ಮುಂದಿನ ವಾರ ಓಪನ್

ಆಗ, ಈ ವಾದವನ್ನು ದೆಹಲಿ ಹೈಕೋರ್ಟ್‌ನ ಮುಂದೆ ಏಕೆ ಮಂಡಿಸಲಿಲ್ಲ ಎಂದು ಕೇಳಿದ ಸುಪ್ರೀಂಕೋರ್ಟ್‌, ಕೇಂದ್ರ ಸರ್ಕಾರ ತನ್ನ ಅರ್ಜಿಯನ್ನು ವಾಪಸ್‌ ಪಡೆದು ದೆಹಲಿ ಹೈಕೋರ್ಟ್‌ನಲ್ಲಿ ಪುನರ್‌ಪರಿಶೀಲಾ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿತು.

ಪರಿಸರ ಪರಿಣಾಮ ವರದಿ ಹಿಂದಿ, ಇಂಗ್ಲಿಷ್‌ನಲ್ಲಿ ಪ್ರಕಟಿಸಿದರೆ ಸಾಲದು

ಕರ್ನಾಟಕ, ಮಹಾರಾಷ್ಟ್ರ ಅಥವಾ ನಾಗಾಲ್ಯಾಂಡ್‌ನ ಗ್ರಾಮೀಣ ಪ್ರದೇಶಗಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅಲ್ಲಿನ ಜನಸಾಮಾನ್ಯರು ಕೇಂದ್ರ ಸರ್ಕಾರ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹೊರಡಿಸಿದ ಆದೇಶವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ? ಆದ್ದರಿಂದ ಎಲ್ಲಾ ಆದೇಶಗಳನ್ನು ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸಲು ಅನುಕೂಲವಾಗುವಂತೆ ಅಧಿಕೃತ ಭಾಷಾ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಬೇಕು. ಈಗ ಗೂಗಲ್‌ನಲ್ಲೇ ಅನುವಾದ ಮಾಡಲು ಸಾಧ್ಯವಿದೆ. ಸಂಸತ್ತಿನಲ್ಲೂ ಸಮರ್ಥ ಅನುವಾದಕರಿದ್ದಾರೆ.

- ನ್ಯಾ| ಎಸ್‌.ಎ.ಬೋಬ್ಡೆ, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ