ನವದೆಹಲಿ (ಆ. 14)   ಹಿರಿಯ ನ್ಯಾಯವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರಿಗೆ ನ್ಯಾಯಾಂಗ ವ್ಯವಸ್ಥೆ ವಿರುದ್ಧ ಮಾಡಿದ್ದ ಎರಡು ಟ್ವಿಟ್ ಗಳು ಇಕ್ಕಟ್ಟು ತಂದಿವೆ.  ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಹಿಂದಿನ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಮಾಡಿರುವ ಟ್ವೀಟ್ ನ್ಯಾಯಾಂಗ ನಿಂದನೆಯಾಗಿದೆ. ಈ ಕಾರಣಕ್ಕೆ ಪ್ರಶಾಂತ್ ಭೂಷಣ್ ದೋಷಿ ಎಂದು ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.

ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಆಗಸ್ಟ್ 20ರಂದು ಪ್ರಕಟಿಸಲಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ತೀರ್ಪು ನೀಡಿದ್ದು ನ್ಯಾಯಾಂಗ ನಿಂದನೆ ಅಪರಾಧದ ಅಡಿ ಪ್ರಶಾಂತ್ ಭೂಷಣ್ ಗೆ 6 ತಿಂಗಳು ಜೈಲು ಶಿಕ್ಷೆ ಅಥವಾ 2 ಸಾವಿರ ರೂಪಾಯಿ ದಂಡ ಅಥವಾ ಜೈಲುವಾಸ ಮತ್ತು ದಂಡ ಎರಡನ್ನೂ ವಿಧಿಸುವ ಸಾಧ್ಯತೆ ಇದೆ. 

ಪ್ರಶಾಂತ್ ಭೂಷಣ್ ಪ್ರಕರಣ; ಆರಂಭದಿಂದ ಅಂತ್ಯದವರೆಗೆ

ಪ್ರಶಾಂತ್ ಭೂಷಣ್ ಕಳೆದ ಜೂನ್ 27ರಂದು ಸುಪ್ರೀಂ ಕೋರ್ಟ್ ಬಗ್ಗೆ ಮತ್ತು ಜೂನ್ 29ರಂದು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ಬಗ್ಗೆ ಟ್ವೀಟ್ ಮಾಡಿದ್ದರು. ಅದು ವೈರಲ್ ಆಗಿ ನ್ಯಾಯಾಂಗ ನಿಂದನೆಯಾಗಿದೆ ಎಂದು ವ್ಯಾಪಕ ಟೀಕೆ ಬಂದ ನಂತರ ಎರಡೂ ಟ್ವೀಟ್ ಗಳನ್ನು ಟ್ವಿಟ್ಟರ್ ತೆಗೆದುಹಾಕಿತ್ತು. ಸುಪ್ರೀಂ ಕೋರ್ಟ್ ಪ್ರಶಾಂತ್ ಭೂಷಣ್ ಗೆ ನ್ಯಾಯಾಂಗ ನಿಂದನೆ ಶೋಕಾಸ್ ನೊಟೀಸ್ ನೀಡಿತ್ತು. 

ತುರ್ತುಪರಿಸ್ಥಿತಿಯನ್ನು ಹೇರದೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ನಾಶ ಮಾಡಲಾಗುತ್ತಿದೆ. ಇದಕ್ಕೆ ಹಿಂದಿನ ಆರು ವರ್ಷಗಳಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ಸುಪ್ರೀಂ ಕೋರ್ಟ್ ಪಾತ್ರವೂ ಇದರಲ್ಲಿ ಇದೆ ಎಂದು ಬರೆದಿದ್ದರು. 

 ನಾಗ್ಪುರದ ರಾಜಭವನದಲ್ಲಿ ಬಿಜೆಪಿ ನಾಯಕನಿಗೆ ಸೇರಿದ 50 ಲಕ್ಷದ ಬೈಕ್ ನಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ್ದಾರೆ.  ಕೊರೋನಾ ಲಾಕ್ ಡೌನ್ ಎಂದು ಹೇಳಿಕೊಂಡು ಸುಪ್ರೀಂ ಕೋರ್ಟ್ ನ ಕಾರ್ಯಕಲಾಪಕ್ಕೆ ರಜೆ ಹಾಕಿ ಮುಖ್ಯ ನ್ಯಾಯಮೂರ್ತಿಗಳು ಬೈಕ್ ನಲ್ಲಿ ಜಾಲಿ ರೈಡ್ ಮಾಡುತ್ತಿದ್ದಾರೆ ಎಂದು ವೈಯಕ್ತಿಕ ಆರೋಪ ಮಾಡಿದ್ದರು.

ನಂತರ ನಾನು ಗಮನಕಸಿ ಇರಲಿಲ್ಲ. ಅವರು ನಿಂತಿದ್ದ ಬೈಕ್ ಮೇಲೆ ಕುಳಿತಿದ್ದರು, ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದರು. ಈ ಎಲ್ಲ ಸಂಗತಿಗಳು ಇದೀಗ ಭೂಷಣ್ ಅವರನ್ನು ಜೈಲಿನ ಹಾದಿಗೆ ತಂದು ನಿಲ್ಲಿಸಿವೆ.