ನವದೆಹಲಿ(ಏ.24): ಮಹಾರಾಷ್ಟ್ರದ ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ತಮ್ಮ ಹುದ್ದೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಸದಸ್ಯರಲ್ಲದ ಅವರು ಕಳೆದ ವರ್ಷ ನ.28ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಹೀಗಾಗಿ ಆರು ತಿಂಗಳೊಳಗೆ, ಅಂದರೆ ಮೇ 28ರೊಳಗೆ ಯಾವುದಾದರೂ ಒಂದು ಶಾಸನಸಭೆಗೆ ಆಯ್ಕೆಯಾಗಬೇಕಿದೆ. ಆದರೆ, ಕೊರೋನಾ ವೈರಸ್‌ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಅದು ಬಹುತೇಕ ಸಾಧ್ಯವೇ ಇಲ್ಲ ಎಂಬ ಸ್ಥಿತಿ ಎದುರಾಗಿದ್ದು, ಮಹಾರಾಷ್ಟ್ರದಲ್ಲಿ ಸಾಂವಿಧಾನಿಕ ಬಿಕ್ಟಟ್ಟು ಎದುರಾಗುವ ಸಾಧ್ಯತೆಯಿದೆ.

ಉದ್ಧವ್‌ ವಿಧಾನ ಪರಿಷತ್ತಿಗೆ ಪ್ರವೇಶಿಸುವ ಉದ್ದೇಶ ಹೊಂದಿದ್ದರು. ಅದಕ್ಕೆ ಮಾ.26ರಂದು ಚುನಾವಣೆಯೂ ನಿಗದಿಯಾಗಿತ್ತು. ಆದರೆ, ಕೊರೋನಾ ಬಿಕ್ಕಟ್ಟು ಎದುರಾದ ನಂತರ ಚುನಾವಣಾ ಆಯೋಗ ಎಲ್ಲಾ ಚುನಾವಣೆಗಳನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಹೀಗಾಗಿ ಅವರು ಆಯ್ಕೆಯಾಗುವುದು ಸಾಧ್ಯವಿಲ್ಲ. ಈ ಮಧ್ಯೆ, ವಿಧಾನ ಪರಿಷತ್ತಿನಲ್ಲಿ ರಾಜ್ಯಪಾಲರ ಕೋಟಾದಲ್ಲಿ ಎರಡು ನಾಮನಿರ್ದೇಶನ ಸ್ಥಾನಗಳು ಖಾಲಿಯಿವೆ. ಅವುಗಳಲ್ಲಿ ಒಂದು ಸ್ಥಾನಕ್ಕೆ ಉದ್ಧವ್‌ರನ್ನು ರಾಜ್ಯಪಾಲ ಬಿ.ಎಸ್‌.ಕೋಶಿಯಾರಿ ನಾಮನಿರ್ದೇಶನ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಆಡಳಿತಾರೂಢ ಪಕ್ಷವಿದೆ. ಆದರೆ, ಕಲೆ, ವಿಜ್ಞಾನ, ಸಾಹಿತ್ಯ, ಸಹಕಾರ ಹಾಗೂ ಸಮಾಜ ಸೇವೆಯಲ್ಲಿ ಹೆಸರು ಮಾಡಿರುವವರನ್ನು ಮಾತ್ರ ಈ ಹುದ್ದೆಗೆ ನಾಮನಿರ್ದೇಶನ ಮಾಡಬೇಕು. ಉದ್ಧವ್‌ ಈ ಯಾವ ವಿಭಾಗಕ್ಕೂ ಸೇರುವುದಿಲ್ಲ. ಆದರೂ ರಾಜ್ಯಪಾಲರು ಈ ಹುದ್ದೆಗೆ ಯಾರನ್ನು ನಾಮನಿರ್ದೇಶನ ಮಾಡಿದರೂ ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ.

ಉದ್ಧವ್‌ರ 160 ಭದ್ರತಾ ಸಿಬ್ಬಂದಿಗೆ ವೈರಸ್‌ ಭೀತಿ!

ಆದರೆ, ಇಲ್ಲಿ ಇನ್ನೂ ಒಂದು ಸಮಸ್ಯೆ ಎದುರಾಗಿದೆ. ರಾಜ್ಯಪಾಲರ ಕೋಟಾದಲ್ಲಿ ಖಾಲಿಯಿರುವ ಎರಡೂ ಸ್ಥಾನಗಳು ರಾಜೀನಾಮೆ ನೀಡಿದ ಸದಸ್ಯರಿಂದ ತೆರವಾದ ಸ್ಥಾನಗಳಾಗಿದ್ದು, ಅವುಗಳ ಅವಧಿ ಒಂದು ವರ್ಷಕ್ಕಿಂತ ಕಡಿಮೆಯಿದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಿರುವ ಮೇಲ್ಮನೆ ಸ್ಥಾನಕ್ಕೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 151ಎ ಪ್ರಕಾರ ಯಾರನ್ನೂ ನಾಮನಿರ್ದೇಶನ ಮಾಡುವಂತಿಲ್ಲ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಮೇ 28ರೊಳಗೆ ಉದ್ಧವ್‌ ರಾಜೀನಾಮೆ ನೀಡಬೇಕಾಗಿ ಬರಬಹುದು ಎನ್ನಲಾಗುತ್ತಿದೆ.

ಆದರೆ, ಉದ್ಧವ್‌ ಮುಂದೆ ಕೊನೆಯದಾಗಿ ಒಂದು ಮಾರ್ಗವಿದೆ. ಮೇ 27 ಅಥವಾ 28ಕ್ಕೆ ಅವರು ರಾಜೀನಾಮೆ ನೀಡಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಆರು ತಿಂಗಳು ಮುಂದುವರೆಯಬಹುದು. ಆದರೆ, ಹಿಂದೆ ಪಂಜಾಬ್‌ನಲ್ಲಿ 1996ರಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ತೇಜಪ್ರತಾಪ್‌ ಸಿಂಗ್‌ ಹೀಗೆ ಮಾಡಿದ್ದಾಗ 2001ರಲ್ಲಿ ಸುಪ್ರೀಂಕೋರ್ಟ್‌ ಅದನ್ನು ರದ್ದುಪಡಿಸಿತ್ತು.

"