ಸ್ವಾತಂತ್ರ್ಯ ಬಂದ ಕಾಲದಲ್ಲಿ ಅವಿಭಜಿತ ಬಿಹಾರದಲ್ಲಿ ಏಕಮೇವಾದ್ವಿತೀಯ ಪಕ್ಷವಾಗಿ ಮೆರೆದಿದ್ದ ಕಾಂಗ್ರೆಸ್‌ ಪಕ್ಷ 2025ರ ಚುನಾವಣೆಯಲ್ಲಿ ಕೇವಲ 6 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ತನ್ನ ಹೀನಾಯ ಸೋಲಿನ ಪರಂಪರೆ ಮುಂದುವರೆಸಿದೆ.

ಪಟನಾ: ಸ್ವಾತಂತ್ರ್ಯ ಬಂದ ಕಾಲದಲ್ಲಿ ಅವಿಭಜಿತ ಬಿಹಾರದಲ್ಲಿ ಏಕಮೇವಾದ್ವಿತೀಯ ಪಕ್ಷವಾಗಿ ಮೆರೆದಿದ್ದ ಕಾಂಗ್ರೆಸ್‌ ಪಕ್ಷ 2025ರ ಚುನಾವಣೆಯಲ್ಲಿ ಕೇವಲ 6 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ತನ್ನ ಹೀನಾಯ ಸೋಲಿನ ಪರಂಪರೆ ಮುಂದುವರೆಸಿದೆ. ಇದರೊಂದಿಗೆ ರಾಜ್ಯದಲ್ಲಿ ಮರಳಿ ತನ್ನ ಛಾಪು ಮೂಡಿಸುವ ಯತ್ನ ಮತ್ತೊಮ್ಮೆ ಕಾಂಗ್ರೆಸ್‌ಗೆ ಕೈಕೊಟ್ಟಿದೆ. ಈ ಬಾರಿ ಇಂಡಿಯಾ ಕೂಟದ ಭಾಗವಾಗಿದ್ದ ಕಾಂಗ್ರೆಸ್‌ 61 ಸ್ಥಾನಗಳಲ್ಲಿ ಕಣಕ್ಕೆ ಇಳಿದಿತ್ತು.

ಚುನಾವಣೆ ಘೋಷಣೆಗೂ ಮುನ್ನ ವಿಶೇಷ ಮತಪಟ್ಟಿ ಪರಿಷ್ಕರಣೆ ಮುಂದಿಟ್ಟು ಚುನಾವಣಾ ಆಯೋಗ, ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸತತ ದಾಳಿ ನಡೆಸಿದ್ದರು. ಚುನಾವಣೆ ವೇಳೆಯೂ ಅದನ್ನೇ ಪುನರಾವರ್ತನೆ ಮಾಡಿದ್ದರು. ಜೊತೆಗೆ ಪ್ರಧಾನಿ ಮೋದಿ ಆಡಳಿತ, ರಾಜ್ಯದಲ್ಲಿ ನಿತೀಶ್‌ ಆಡಳಿತದ ವಿರುದ್ಧ ಗಂಭೀರ ಆರೋಪ ಹೊರಿಸಿದರೂ, ಅದು ಮತದಾರರ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ರಾಹುಲ್ ಗಾಂಧಿ ಮ್ಯಾಜಿಕ್‌ ಏನೇನೂ ನಡೆದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ದಾಖಲೆ ಗೆಲುವು:

1952ರಲ್ಲಿ ಅವಿಭಜಿತ ಬಿಹಾರದಲ್ಲಿ 276 ವಿಧಾನಸಭಾ ಕ್ಷೇತ್ರಗಳಿದ್ದವು. ಈ ಪೈಕಿ ಕಾಂಗ್ರೆಸ್‌ 239 ಸ್ಥಾನಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿತ್ತು. ನಂತರ 2000ನೇ ಇಸವಿಯಲ್ಲಿ ಬಿಹಾರ ವಿಭಜನೆಯಾಗಿ ಜಾರ್ಖಂಡ ರಚನೆಯಾಗುವವರೆಗೂ, ಕಾಂಗ್ರೆಸ್‌ನ ಗೆಲುವು ಕ್ಷೀಣಿಸುತ್ತಾ ಬಂದರೂ ಸಮಾಧಾನಕರ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ 2000ದ ನಂತರದ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್‌ ಹೀನಾಯ ಪ್ರದರ್ಶನ ನೀಡುತ್ತಾ ಬಂದಿದೆ. 2000ನೇ ಇಸವಿಯಲ್ಲಿ 243 ಸ್ಥಾನಗಳಲ್ಲಿ 23, 2005ರಲ್ಲಿ 10, 2010ರಲ್ಲಿ 4, 2015ರಲ್ಲಿ 27, 2020ರಲ್ಲಿ 19 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಈ ಬಾರಿ ಮುಖಭಂಗವಾಗುವ ರೀತಿಯಲ್ಲಿ ಕೇವಲ 6 ಸ್ಥಾನಗಳಿಗೆ ತೃಪ್ತಿಪಟ್ಟಿದೆ.

ರಾಹುಲ್ ಯಾತ್ರೆ ಕೈಗೊಂಡ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಸೋಲು

ಪಟನಾ: ಮತಗಳ್ಳತನದ ಆರೋಪ ಮಾಡಿ ದೇಶಾದ್ಯಂತ ಬಿಜೆಪಿ ವಿರುದ್ಧ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಲು ಅಭಿಯಾನ ಕೈಗೊಂಡಿದ್ದ ರಾಹುಲ್‌ ಗಾಂಧಿಯವರಿಗೆ ಬಿಹಾರದಲ್ಲಿ ತೀವ್ರ ಮುಖಭಂಗವಾಗಿದೆ. ಮತಚೋರಿ ವಿರೋಧಿಸಿ ಅವರು ಯಾತ್ರೆ ನಡೆಸಿದ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಹೀನಾಯವಾಗಿ ಸೋಲುಣ್ಣುವ ಮೂಲಕ ರಾಹುಲ್‌ ಪ್ರತಿಷ್ಠೆಗೆ ಮತ್ತೆ ಪೆಟ್ಟು ಬಿದ್ದಿದೆ.ಈ ವರ್ಷದ ಆದಿಯಲ್ಲಿ ಚುನಾವಣಾ ಆಯೋಗ ಬಿಹಾರದಲ್ಲಿ ಮತಪಟ್ಟಿ ತೀವ್ರ ಪರಿಷ್ಕರಣೆಗೆ ಮುಂದಾದಾಗಿನಿಂದಲೂ ರಾಹುಲ್‌ ಗಾಂಧಿ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರು. ಬಿಜೆಪಿ ಮತ್ತು ಆಯೋಗ ಲಕ್ಷಾಂತರ ಮತಗಳ್ಳತನ ನಡೆಸಿವೆ ಎಂದು ಆರೋಪಿಸಿ ಆಗಸ್ಟ್‌ನಲ್ಲಿ 1,300 ಕಿಮೀ ದೂರ ‘ಮತದಾರ ಅಧಿಕಾರ ಯಾತ್ರೆ’ ಕೈಗೊಂಡಿದ್ದರು.

ಸಾಸಾರಾಂನಿಂದ ಆರಂಭಿಸಿ, 25 ಜಿಲ್ಲೆಗಳು ಹಾಗೂ 110 ವಿಧಾನಸಭಾ ಕ್ಷೇತ್ರಗಳನ್ನು ಹಾದು ಪಟನಾದಲ್ಲಿ ಈ ಯಾತ್ರೆ ಮುಕ್ತಾಯಗೊಂಡಿತ್ತು. ಇದು ಬಿಜೆಪಿ ವಿರುದ್ಧ ಜನಾಭಿಪ್ರಾಯ ಮೂಡಿಸುತ್ತದೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರವಾಗಿತ್ತು. ಈ ಹಿಂದೆ ರಾಹುಲ್‌ 2022ರಿಂದ 2024ರ ನಡುವೆ 2 ಬಾರಿ ‘ಭಾರತ್‌ ಜೋಡೋ’ ಯಾತ್ರೆ ನಡೆಸಿದ್ದು ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆ ಮತ್ತು ತೆಲಂಗಾಣದಲ್ಲಿ ಸರ್ಕಾರ ರಚಿಸಲು ಸಹಾಯ ಮಾಡಿತ್ತು. ಆದರೆ ಬಿಹಾರ ಯಾತ್ರೆ ಕೈಕೊಟ್ಟಿದ್ದು, ರಾಹುಲ್‌ ಪ್ರಚಾರ ನಡೆಸಿದ ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷ ನೆಲಕಚ್ಚಿದೆ.