ಕಾಂಗ್ರೆಸ್ ರಾಜ್ಯಸಭಾ ಸಂಸದ ಶಕ್ತಿ ಸಿನ್ಹ ಗೋಹಿಲ್ ಅವರ ಸೋದರಳಿಯ ಯಶ್‌ರಾಜ್ ಸಿಂಗ್ ಗೋಹಿಲ್, ತಮ್ಮ ಪತ್ನಿ ರಾಜೇಶ್ವರಿಗೆ ಗುಂಡಿಕ್ಕಿ ಕೊಂದ ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗಿ ಕೇವಲ ಎರಡು ತಿಂಗಳಾಗಿದ್ದ ದಂಪತಿಗಳ ಸಾವಿನ ಸುತ್ತ ಅನುಮಾನಗಳು ಮೂಡಿವೆ.
ಅಹಮದಾಬಾದ್ (ಜ.22): ಗುಜರಾತ್‌ನ ಕಾಂಗ್ರೆಸ್ ರಾಜ್ಯಸಭಾ ಸಂಸದ ಶಕ್ತಿ ಸಿನ್ಹ ಗೋಹಿಲ್ ಅವರ ಸೋದರಳಿಯ ಯಶ್‌ರಾಜ್ ಸಿಂಗ್ ಗೋಹಿಲ್ ತಮ್ಮ ಪತ್ನಿಗೆ ಗುಂಡಿಟ್ಟು ಸಾಯಿಸಿದ ಬಳಿಕ ತಾವೂ ಕೂಡ ಶೂಟ್ ಮಾಡಿಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಯಶ್ ರಾಜ್‌ಕೇವಲ ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಎನ್ನಲಾಗಿದೆ. ಪೊಲೀಸರ ಪ್ರಕಾರ, ಬುಧವಾರ ರಾತ್ರಿ 11:45 ಕ್ಕೆ ಯಶ್‌ರಾಜ್ 108 ಗೆ ಆಂಬ್ಯುಲೆನ್ಸ್‌ಗಾಗಿ ಕರೆ ಮಾಡಿದರು. ಕರೆಯಲ್ಲಿ ಯಶ್‌ರಾಜ್ ತನ್ನ ಪತ್ನಿ ರಾಜೇಶ್ವರಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದರು.
ವೈದ್ಯಕೀಯ ತಂಡ ಸ್ಥಳಕ್ಕೆ ಆಗಮಿಸಿ ರಾಜೇಶ್ವರಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಇದಕ್ಕೂ ಮೊದಲು, ಯಶ್‌ರಾಜ್ ಆಂಬ್ಯುಲೆನ್ಸ್ ತಂಡಕ್ಕೆ ತಾನು ಪರವಾನಗಿ ಪಡೆದ ಪಿಸ್ತೂಲಿನಿಂದ ಆಕಸ್ಮಿಕವಾಗಿ ಗುಂಡು ಹಾರಿಸಿದ್ದು, ತನ್ನ ಹೆಂಡತಿಯ ಕುತ್ತಿಗೆಗೆ ಗುಂಡು ತಾಗಿದೆ ಎಂದು ಹೇಳಿದರು.
ರೂಮ್‌ಗೆ ಹೋಗಿ ಶೂಟ್ ಮಾಡಿಕೊಂಡ ಯಶ್‌ರಾಜ್
ರಾಜೇಶ್ವರಿಯ ಶವವನ್ನು ಆಂಬ್ಯುಲೆನ್ಸ್‌ನಲ್ಲಿ ಇರಿಸಲು ವೈದ್ಯಕೀಯ ತಂಡ ಮೆನಯಿಂದ ಹೊರಟಾಗ, ಯಶ್‌ರಾಜ್ ಕೋಣೆಗೆ ಹೋಗಿ ಗುಂಡು ಹಾರಿಸಿಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದು, ಆತ ಕೂಡ ಸ್ಥಳದಲ್ಲೇ ಸಾವನ್ನಪ್ಪಿದರು. ಯಶ್‌ರಾಜ್ ಸಿಂಗ್ ಗುಜರಾತ್ ಮ್ಯಾರಿಟೈಮ್ ಬೋರ್ಡ್‌ನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರಿಗೆ ಕ್ಲಾಸ್ 2 ರಿಂದ ಕ್ಲಾಸ್ 1 ಅಧಿಕಾರಿಯಾಗಿ ಬಡ್ತಿ ನೀಡಲಾಗಿತ್ತು.
ಮನೆಯ ಇನ್ನೊಂದು ರೂಮ್‌ನಲ್ಲಿದ್ದ ತಾಯಿ
ವಸ್ತ್ರಾಪುರ ಪೊಲೀಸರು ಮತ್ತು ಅಪರಾಧ ವಿಭಾಗ ಪ್ರಕರಣದ ತನಿಖೆ ನಡೆಸುತ್ತಿದೆ. ಘಟನೆಯ ನಂತರ, ಎನ್‌ಆರ್‌ಐ ಟವರ್‌ನ ಗೇಟ್‌ಗಳನ್ನು ಮುಚ್ಚಲಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ. ಫ್ಲಾಟ್‌ಗಳ ನಿವಾಸಿಗಳನ್ನು ಹೊರತುಪಡಿಸಿ ಯಾರಿಗೂ ಒಳಗೆ ಪ್ರವೇಶವಿಲ್ಲ. ಘಟನೆ ನಡೆದ ಸಮಯದಲ್ಲಿ ಯಶ್‌ರಾಜ್‌ನ ತಾಯಿ ಇನ್ನೊಂದು ಕೋಣೆಯಲ್ಲಿದ್ದರು, ಆದರೆ ಆಂಬ್ಯುಲೆನ್ಸ್ ಬಂದ ನಂತರವೇ ಅವರಿಗೆ ಘಟನೆಯ ಬಗ್ಗೆ ತಿಳಿಯಿತು. ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ವಿದೇಶಕ್ಕೆ ಪ್ರವಾಸ ಹೋಗುವ ಪ್ರಯತ್ನದಲ್ಲಿದ್ದರು
ಕುಟುಂಬದವರ ಪ್ರಕಾರ, ಯಶ್‌ರಾಜ್ ಮತ್ತು ರಾಜೇಶ್ವರಿ ಬುಧವಾರ ರಾತ್ರಿ ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿದ್ದರು ಮತ್ತು ಅವರು ಹಿಂದಿರುಗಿದ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದೆ. ಯಶ್‌ರಾಜ್ ಸಿಂಗ್ ಗೋಹಿಲ್ ಅವರ ಆಪ್ತರು ಹೇಳುವಂತೆ, ದಂಪತಿಗಳು ಮದುವೆಯಿಂದ ತುಂಬಾ ಸಂತೋಷವಾಗಿದ್ದರು. ಮದುವೆಯ ಬಳಿಕ ಅವರು ಮಂಗಳವಾರ ಸೋಲಾ ಪ್ರದೇಶದ ರಾನುಜಾ ದೇವಸ್ಥಾನಕ್ಕೂ ಭೇಟಿ ನೀಡಿದ್ದರು. ಅಲ್ಲದೆ, ಅವರಿಬ್ಬರಿಗೂ ವೀಸಾ ಪ್ರಕ್ರಿಯೆ ನಡೆಯುತ್ತಿತ್ತು. ಮುಂದಿನ ತಿಂಗಳು ವಿದೇಶ ಪ್ರವಾಸವನ್ನು ಯೋಜಿಸಲಾಗಿತ್ತು. ರಾಜೇಶ್ವರಿ ಕೂಡ ಪ್ರವಾಸಕ್ಕೆ ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ.
ಯಾರಿವರು ಶಕ್ತಿ ಸಿನ್ಹಾ ಗೋಹಿಲ್
ಯಶ್‌ರಾಜ್ ಸಿಂಗ್ ಗೋಹಿಲ್ ಅವರು ಕಾಂಗ್ರೆಸ್ ರಾಜ್ಯಸಭಾ ಸಂಸದ ಶಕ್ತಿಸಿನ್ಹ ಗೋಹಿಲ್ ಅವರ ಸಂಬಂಧಿ. ಶಕ್ತಿ ಸಿನ್ಹ ಅವರು ಲಿಮ್ಡಾ ರಾಜ್ಯದ (ಹನುಭಾನ) ಆರನೇ ರಾಜ ಹರಿಶ್ಚಂದ್ರ ರಂಜಿತ್‌ಸಿನ್ಹ ಗೋಹಿಲ್ ಅವರ ಪುತ್ರ. ಪ್ರಸ್ತುತ, ಶಕ್ತಿಸಿನ್ ಸ್ವತಃ ಲಿಮ್ಡಾದ ದರ್ಬಾರ್ ಸಾಹಿಬ್ ಆಗಿದ್ದಾರೆ. ಅವರ ಅಜ್ಜ ರಂಜಿತ್‌ಸಿನ್ಹರು 1967 ರಲ್ಲಿ ಗಧಾಡ ಸ್ಥಾನದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಶಾಸಕರಾದರು.
ಐದು ಬಾರಿಯ ಶಾಸಕ ಹಾಗೂ ಗುಜರಾತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು
ಶಕ್ತಿಸಿನ್ಹ ಗೋಹಿಲ್ ಅವರು 1990-95, 1995-98, 2007-2012, 2014, ಮತ್ತು 2017 ರಿಂದ 2020 ರವರೆಗೆ ಐದು ಬಾರಿ ಶಾಸಕರಾಗಿದ್ದಾರೆ. ಗುಜರಾತ್‌ನಲ್ಲಿ ಕೊನೆಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅವರು 1991 ರಿಂದ 1995 ರವರೆಗೆ ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ 2020 ರಲ್ಲಿ ರಾಜ್ಯಸಭಾ ಸಂಸದರಾದರು. 2022 ರಲ್ಲಿ ಅವರು ವಿರೋಧ ಪಕ್ಷದ ನಾಯಕ ಮತ್ತು ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು, ಆದರೆ 2022 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನಂತರ ಆ ಹುದ್ದೆಗೆ ರಾಜೀನಾಮೆ ನೀಡಿದರು.


