ಕಳಂಕಿತ ರಾಜಕೀಯ ನಾಯಕರುಗಳಿಗೆ ಬಿಜೆಪಿ ಕೇಂದ್ರ ತನಿಖಾ ಏಜೆನ್ಸಿಗಳನ್ನು ಡಿಟರ್ಜಂಟ್‌ ರೀತಿ ಬಳಸುತ್ತಿದೆ. ಬಿಜೆಪಿಯ ವಾಶಿಂಗ್‌ ಮಷೀನ್‌ನಲ್ಲಿ ಇವರೆಲ್ಲರೂ ಬಿದ್ದಾಗ ಫುಲ್‌ ಕ್ಲೀನ್‌ ಆಗಿ ಹೊರಬರುತ್ತಾರೆ ಎಂದು ಟೀಕೆ ಮಾಡಿದೆ.

ನವದೆಹಲಿ (ಜು.3): ಬಿಜೆಪಿಯನ್ನು "ವಾಷಿಂಗ್ ಮೆಷಿನ್" ಎಂದು ಕರೆದಿರುವ ಕಾಂಗ್ರೆಸ್, ಕೇಂದ್ರೀಯ ತನಿಖಾ ಸಂಸ್ಥೆಗಳನ್ನು "ಡಿಟರ್ಜೆಂಟ್" ಗಳಾಗಿ ಬಳಸಿಕೊಳ್ಳುತ್ತದೆ ಎಂದು ಬಣ್ಣಿಸಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಬಂಡಾಯವನ್ನು ಉಲ್ಲೇಖಿಸಿ ಕಾಂಗ್ರೆಸ್‌ನ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ "ನಿನ್ನೆ ಮುಂಬೈನಲ್ಲಿ ಬಿಜೆಪಿ ವಾಷಿಂಗ್ ಮೆಷಿನ್ ತನ್ನ ಐಸಿಇ (ಆದಾಯ ತೆರಿಗೆ, ಸಿಬಿಐ, ಇಡಿ) ಡಿಟರ್ಜೆಂಟ್‌ನೊಂದಿಗೆ ಮರುಪ್ರಾರಂಭ ಮಾಡಿತು. ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಬಿಜೆಪಿ ಪ್ರೇರಿತ ಸಂಸ್ಕಾರವನ್ನು ಹಾಕಲಾಯಿತು. ಜೂನ್ 23 ರಂದು ಪಾಟ್ನಾದಲ್ಲಿ ಸಭೆ ಸೇರಿದ ಪಕ್ಷಗಳ ಮುಂದಿನ ಸಭೆಯು ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಮುಂಬೈ ಕಾರ್ಯಾಚರಣೆಗಳು ವಿರೋಧ ಪಕ್ಷದ ನಿರ್ಣಯವನ್ನು ಬಲಪಡಿಸಿದೆ' ಎಂದು ಟ್ವೀಟ್‌ ಮಾಡಿದ್ದಾರೆ. ಮಾರ್ಚ್‌ನಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಇದೇ ರೀತಿ ವಾಗ್ದಾಳಿ ನಡೆಸಿದ್ದಲ್ಲದೆ, 'ವಾಶಿಂಗ್ ಮೆಷಿನ್ ಪ್ರತಿಭಟನೆ' ನಡೆಸಿದ್ದರು. ಆ ಪ್ರತಿಭಟನೆಯಲ್ಲಿ, ಮಮತಾ ಬ್ಯಾನರ್ಜಿ, ವಾಷಿಂಗ್ ಮೆಷಿನ್‌ನ ಮಾದರಿಯಲ್ಲಿ ಕಪ್ಪು ಬಟ್ಟೆಯನ್ನು ಹಾಕಿದರು ಮತ್ತು ಬಿಳಿ ಬಟ್ಟೆಯನ್ನು ಹೊರತೆಗೆದಿದ್ದರು ಮತ್ತು ಅವರ ಬೆಂಬಲಿಗರು "ವಾಷಿಂಗ್ ಮೆಷಿನ್ ಬಿಜೆಪಿ" ಎಂದು ಘೋಷಣೆಗಳನ್ನು ಕೂಗಿದ್ದರು.

ದೇಶದ ಜನಪ್ರಿಯ ಡಿಟರ್ಜಂಟ್‌ ಪೌಡರ್‌ ಪ್ಯಾಕೆಟ್‌ನ ಫೋಟೋದೊಂದಿಗೆ ಜೈರಾಮ್‌ ರಮೇಶ್‌ ಈ ಟ್ವೀಟ್‌ ಪೋಸ್ಟ್‌ ಮಾಡಿದ್ದಾರೆ. ಪೋಟೋಶಾಪ್‌ ಮಾಡಲಾಗಿರುವ ಈ ಫೋಟೋದಲ್ಲಿ ನರೇಂದ್ರ ಮೋದಿ ಅವರ ಚಿತ್ರವಿದ್ದು, ಮೋದಿ ವಾಷಿಂಗ್‌ ಪೌಡರ್‌.. ಸಾರೇ ದಾಗ್‌ ಚುಟ್ಕಿಯೋಂ ಮೇ ಧುಲೆ (ಸೆಕೆಂಡುಗಳಲ್ಲಿ ಎಲ್ಲಾ ಕೊಳೆ ಮಾಯ)' ಎಂದು ಅದರ ಮೇಲೆ ಬರೆಯಲಾಗಿದೆ.

ಭಾನುವಾರ ಎನ್‌ಸಿಪಿ ಹಿರಿಯ ನಾಯಕ ಅಜಿತ್‌ ಪವಾರ್‌ ಬಂಡಾಯ ಎದ್ದಿದ್ದಲ್ಲದೆ, ಏಕನಾಥ್‌ ಶಿಂಧೆ-ದೇವೇಂದ್ರ ಫಡ್ನವಿಸ್‌ ಸರ್ಕಾರಕ್ಕೆ ಸೇರ್ಪಡೆಗೊಳ್ಳಲು ಎನ್‌ಸಿಪಿ ಶಾಸಕ ಮೇಲೆ ಒತ್ತಡ ಹೇರಲು ಇಡಿಯನ್ನು ಬಳಸಲಾಗಿದೆ ಎನ್ನುವ ಊಹಾಪೋಹವನ್ನು ಹುಟ್ಟುಹಾಕಿದೆ. ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ಸಚಿವರಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ವಿವಿಧ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಉಳಿದವರೆಂದರೆ ಛಗ್ಗನ್ ಭುಜಬಲ್, ಹಸನ್ ಮುಶ್ರಿಫ್, ಪ್ರಫುಲ್ ಪಟೇಲ್ ಮತ್ತು ಧನಂಜಯ್ ಮುಂಡೆ. ಕಾಂಗ್ರೆಸ್‌ ಇದೇ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯನ್ನು ಟೀಕೆ ಮಾಡಿದೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಭಾನುವಾರ ರಾಜಭವನಕ್ಕೆ ಆಗಮಿಸಿದ ಅಜಿತ್ ಪವಾರ್ ಮಹಾ ವಿಕಾಸ್ ಅಘಾಡಿಗೆ ಅಚ್ಚರಿ ನೀಡಿದ್ದರು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ಸೋದರಳಿಯನ ಯೋಜನೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿಲ್ಲದೆ, ಕೆಲವು ಶಾಸಕರು ಎನ್‌ಸಿಪಿ ತೊರೆಯಬಹುದು ಎಂದು ಹೇಳಿದರು. ಆದರೆ. ಪಕ್ಷದ ಅಧಿಕಾರ ಈಗಲೂ ತಮ್ಮ ಬಳಿಯೇ ಇದೆ ಎಂದಿದ್ದಾರೆ. ಆದಾಗ್ಯೂ, ಪಕ್ಷದ 53 ಶಾಸಕರಲ್ಲಿ 40 ಮತ್ತು ಒಂಬತ್ತು ಎಂಎಲ್‌ಸಿಗಳ ಪೈಕಿ ಆರು ಮಂದಿಯ ಬೆಂಬಲವನ್ನು ಹೊಂದಿರುವುದರಿಂದ ಈಗ ನೈಜ ಎನ್‌ಸಿಪಿಯ ನಾಯಕ ನಾನೇ ಆಗಿದ್ದೇನೆ ಎಂದು ಅಜಿತ್‌ ಪವಾರ್‌ ಹೇಳಿದ್ದಾರೆ.

ಅಜಿತ್‌ ಪವಾರ್‌ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಎನ್‌ಸಿಪಿ: ಚುನಾವಣಾ ಆಯೋಗಕ್ಕೂ ಮಾಹಿತಿ

ಜುಲೈ 12 ರಂದು ಬೆಂಗಳೂರಿನಲ್ಲಿ ನಡೆಯಲಿರುವ "ಐಕ್ಯತಾ ಸಭೆ"ಗೆ ಮುಂಚಿತವಾಗಿ ಅಜಿತ್‌ ಪವಾರ್ ಅವರ ಈ ಕ್ರಮವು ಪ್ರತಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದು ವೇಳೆ ಅಜಿತ್ ಪವಾರ್ ಅವರ ಹೇಳಿಕೆಯು ಸರಿಯಾಗಿದ್ದರೆ, ಪ್ರತಿಪಕ್ಷಗಳು ಮುಂದಿನ ಲೋಕಸಭೆ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ದೊಡ್ಡ ಬಿಕ್ಕಟ್ಟನ್ನು ಎದುರಿಸಬಹುದು. ಉತ್ತರ ಪ್ರದೇಶದ ಬಳಿಕ, ಮಹಾರಾಷ್ಟ್ರದಿಂದ ಲೋಕಸಭೆಗೆ ಗರಿಷ್ಠ ಸಂಸದರನ್ನು ಕಳಿಸುತ್ತದೆ. ಆದರೆ, ಮಹಾರಾಷ್ಟ್ರ ರಾಜಕಾರಣದ ಭೀಷ್ಮ ಪಿತಾಮಹ ಎನ್ನಲಾಗುವ ಶರದ್‌ ಪವಾರ್‌ ತಮಗೆ ಆಗಿರುವ ಆಘಾತದಿಂದ ಎಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಎಲ್ಲವೂ ನಿರ್ಣಯವಾಗಲಿದೆ. ಇನ್ನೊಂದೆಡೆ, ಕಠಿಣ ಪರಿಸ್ಥಿತಿಗಳಲ್ಲಿ ಶರದ್‌ ಪವಾರ್‌ ದೊಡ್ಡ ರೀತಿಯಲ್ಲಿ ತಿರುಗೇಟು ನೀಡೋದಕ್ಕೆ ಹೆಸರುವಾಸಿಯಾಗಿದ್ದಾರೆ. ಹಾಗಾಗಿ ಈ ಪರಿಸ್ಥಿತಿಯನ್ನೂ ಸೂಕ್ಷ್ಮವಾಗಿ ನೋಡುತ್ತಿದೆ.

ಶಿವಸೇನೆ ಬಳಿಕ ಎನ್‌ಸಿಪಿಯೂ ಹೋಳು: ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಕ್ಷಿಪ್ರಕ್ರಾಂತಿ; ವಿಪಕ್ಷಗಳ ಮೈತ್ರಿಕೂಟಕ್ಕೆ ಹಿನ್ನಡೆ