ಮೋದಿ ನನಗೆ ಶೂರ್ಪನಖಿ ಅಂದಿದ್ರು, ನಾನೂ ಮಾನಹಾನಿ ಕೇಸ್ ಹಾಕ್ತೇನೆ: ರೇಣುಕಾ ಚೌಧರಿ!
ಪ್ರಧಾನಿ ನರೇಂದ್ರ ಮೋದಿಅವರನ್ನು ಕ್ಲಾಸ್‌ಲೆಸ್ ಅಧಿಕಾರದಾಹಿ ಎಂದು ಕರೆದಿರುವ ಹಿರಿಯ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ, ಪ್ರಧಾನಿ ಮೋದಿ ವಿರುದ್ಧ ತಾನೂ ಮಾನಹಾನಿ ಕೇಸ್ ಹಾಕುತ್ತೇವೆ. ಕೋರ್ಟ್‌ಗಳು ಎಷ್ಟು ವೇಗವಾಗಿ ಕೆಲಸ ಮಾಡುತ್ತದೆ ನೋಡೋಣ ಎಂದು ಸವಾಲೆಸೆದಿದ್ದಾರೆ.
ನವದೆಹಲಿ (ಮಾ.24): ಜಾತಿನಿಂದನೆ ಮಾಡುವ ಮೂಲಕ ಸೂರತ್ ಕೋರ್ಟ್‌ನಿಂದ ದೋಷಿ ಎಂದು ತೀರ್ಮಾನವಾಗಿ ಜೈಲು ಶಿಕ್ಷೆ ಪಡೆದಿರುವ ರಾಹುಲ್ ಗಾಂಧಿಗೆ ಬೆಂಬಲ ನೀಡಲು ಇಡೀ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದೆ. ಇದರ ನಡುವೆ ಹಿರಿಯ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಪ್ರಧಾನಿ ಮೋದಿ ವಿರುದ್ಧ ತಾನು ಮಾನಹಾನಿ ಪ್ರಕರಣ ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ. 2018ರಲ್ಲಿ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ರೇಣುಕಾ ಚೌಧರಿಯನ್ನು ಉದ್ದೇಶಿಸಿ ಶೂರ್ಪನಖಿ ಕಾಮೆಂಟ್ ಮಾಡಿದ್ದರು ಎಂದು ವರದಿಯಾಗಿತ್ತು. ಇದನ್ನು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ರೇಣುಕಾ ಚೌಧರಿ, ಈ ಪ್ರಕರಣದಲ್ಲಿ ಕೋರ್ಟ್‌ಗಳು ಎಷ್ಟು ವೇಗವಾಗಿ ಕೆಲಸ ಮಾಡುತ್ತದೆ ನೋಡೋಣ ಎಂದು ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವೆ ಈ ಕುರಿತಾದ ವಿಡಿಯೋ ಕ್ಲಿಪ್‌ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯ ಚೇರ್ಮನ್‌ಗೆ ಇಂಥ ನಗು ಮುಂದುವರಿಯಲಿದೆ, ರಾಮಾಯಣ ಧಾರವಾಹಿ ಪ್ರಸಾರವಾಗುವ ಕೇಳುತ್ತಿದ್ದ ಈ ನಗುವನ್ನು ಬಹಳ ದಿನಗಳ ನಂತರ ಮತ್ತೆ ಕೇಳುತ್ತಿದ್ದೇನೆ ಎಂದು ಲೇವಡಿ ಮಾಡಿದ್ದರು. ಆ ಮೂಲಕ ರೇಣುಕಾ ಚೌಧರಿಯನ್ನು ಮಾರ್ಮಿಕವಾಗಗಿ ಶೂರ್ಪನಖಿ ಎಂದು ಜರಿದಿದ್ದರು.
'ಇಂಥ ಕ್ಲಾಸ್‌ಲೆಸ್ ಅಧಿಕಾರದಾಹಿ ನನ್ನನ್ನು ಸಂಸತ್ತಿನ ಒಳಗೆ ಶೂರ್ಪನಖಿ ಎಂದು ಕರೆದಿದ್ದರು' ಎಂದು ರೇಣುಕಾ ಚೌಧರಿ ಬರೆದಿದ್ದಾರೆ. ಕಳ್ಳರಿಗೆಲ್ಲಾ ಮೋದಿ ಎನ್ನುವ ಸರ್‌ನೇಮ್ ಯಾಕಿರುತ್ತದೆ ಎಂದು 2019ರಲ್ಲಿ ಕೋಲಾರದಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದರು. ಈ ಕುರಿತಾಗಿ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ, ರಾಹುಲ್ ಗಾಂಧಿ ಒಬಿಸಿ ಜಾತಿಯಾಗಿರುವ ಮೋದಿಯನ್ನು ನಿಂದಿಸಿದ್ದಾರೆ ಎಂದು ಹೇಳಿದ್ದಲ್ಲದೆ, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೂಡ ಹಾಕಿದ್ದರು. ಇದರ ವಿಚಾರಣೆ ನಡೆಸಿದ ಸೂರತ್ ಕೋರ್ಟ್ ರಾಹುಲ್ ಗಾಂಧಿ ದೋಷಿ ಎಂದು ಹೇಳಿದ್ದಲ್ಲದೆ, 2 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡ ವಿಧಿಸಿದೆ. ಇದರ ಬೆನ್ನಲ್ಲಿಯೇ ಜಾಮೀನು ಪಡೆದುಕೊಂಡಿದ್ದ ರಾಹುಲ್ ಗಾಂಧಿಗೆ ತೀರ್ಪನ್ನು ಪ್ರಶ್ನೆ ಮಾಡಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಈ ನಡುವೆ ರೇಣುಕಾ ಚೌಧರಿ ಸೋಷಿಯಲ್ ಮೀಡಿಯಾದಲ್ಲಿ ಹಳೆಯ ಘಟನೆಯನ್ನು ಪ್ರಧಾನಿಗೆ ನೆನಪು ಮಾಡಿದ್ದಾರೆ. ಆದರೆ, ಸೋಶಿಯಲ್ ಮೀಡಿಯಾ ಬಳಕೆದಾರರು ರೇಣುಕಾ ಚೌಧರಿಗೆ ಒಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಮೋದಿ ತಮ್ಮ ಮಾತಿನಲ್ಲಿ ಎಲ್ಲೂ ಶೂರ್ಪನಖಿ ಎನ್ನುವ ಹೆಸರನ್ನು ಹೇಳಿಲ್ಲ. ಹಾಗಾಗಿ ಸಂಸತ್ತಿನಲ್ಲಿ ನೀಡಿರುವ ಈ ಹೇಳಿಕೆಯ ಕುರಿತು ನೀವು ಕೋರ್ಟ್‌ಗೆ ಹೋದರೂ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ
"ರಾಹುಲ್ ಗಾಂಧಿ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದಕ್ಕಾಗಿ ಕ್ಷಮೆಯಾಚಿಸದಿರಲು ನಿರ್ಧರಿಸಿದ್ದಾರೆ. ಫ್ಯಾಸಿಸಂ ವಿರುದ್ಧ ಹೋರಾಡಿದ್ದಕ್ಕಾಗಿ ಅವರು ಕ್ಷಮೆಯಾಚಿಸದೇ ಇರಲು ನಿರ್ಧರಿಸಿದ್ದಾರೆ. ಅವರು ಸತ್ಯವನ್ನು ಮಾತನಾಡಿದ್ದಕ್ಕಾಗಿ ಕ್ಷಮೆಯಾಚಿಸದಿರಲು ನಿರ್ಧರಿಸಿದ್ದಾರೆ" ಎಂದು ರೇಣುಕಾ ಚೌಧರಿ ಟ್ವೀಟ್ ಮಾಡಿದ್ದಾರೆ.
ಕಿತ್ನೇ ಆದ್ಮೀ ಥೇ?: ರೇಪ್ ಕುರಿತ ರೇಣುಕಾ ಚೌಧರಿ ಹೇಳಿಕೆಯಿಂದ ವಿವಾದ
ಇಡಿ, ಸಿಬಿಐನಂತಹ ಸಂಸ್ಥೆಗಳ ಮೂಲಕ ಅಥವಾ ಎಫ್‌ಐಆರ್‌ಗಳು, ಮಾನನಷ್ಟ ಮೊಕದ್ದಮೆಗಳ ಮೂಲಕ ಸರ್ಕಾರವು ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಅಡಗಿಸುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಅದರೊಂದಿಗೆ ಸೂರತ್ ನ್ಯಾಯಾಲಯದ ತೀರ್ಪಿನ ಬಗ್ಗೆಯೇ ಪ್ರಶ್ನೆಗಳನ್ನು ಎತ್ತಿದ್ದಾರೆ. ಶುಕ್ರವಾರ ಸಂಸತ್ತಿನಿಂದ ವಿಜಯ್ ಚೌಕ್ ವರೆಗೆ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಹಲವಾರು ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ತೀರ್ಪಿನ ವಿರುದ್ಧ ಮಾತನಾಡಿರುವ ಕಾರಣ ಮತ್ತು ರಾಹುಲ್ ಗಾಂಧಿಗೆ ಬೆಂಬಲವನ್ನು ನೀಡಿದ್ದರಿಂದ ಇತರ ವಿರೋಧ ಪಕ್ಷದ ನಾಯಕರೊಂದಿಗೆ ಸಭೆಯನ್ನು ಯೋಜಿಸಲಾಗಿದೆ.
ಪ್ರತಿಭಟನೆ ವೇಳೆ ಪೊಲೀಸರ ಕಾಲರ್ ಹಿಡಿದು ಎಳೆದಾಡಿದ ಕೈ ನಾಯಕಿ ರೇಣುಕಾ ಚೌಧರಿ
ಶೂರ್ಪನಖಿ ವಿವಾದ: 2018ರ ಫೆಬ್ರವರಿ 7 ರಂದು ಪ್ರಧಾನಿ ನರೇಂದರ ಮೋದಿ ರಾಜ್ಯಸಭೆಯಲ್ಲಿ ತಮ್ಮ ಮಾತನ್ನಾಡುತ್ತಿದ್ದರು. ಈ ವೇಳೆ ವಿರೋಧ ಪಕ್ಷದವರಿಂದ ನಿರಂತರವಾಗಿ ಅಡ್ಡಿಗಳು ಬರುತ್ತಿದ್ದವು. ಈ ನಡುವೆ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಗಹಗಹಿಸಿ ನಗುತ್ತಿರುವುದು ಮೈಕ್‌ನಲ್ಲಿ ದಾಖಲಾಗಿತ್ತು. ಇದನ್ನು ಗಮನಿಸಿದ ಚೇರ್ಮನ್ ವೆಂಕಯ್ಯ ನಾಯ್ಡು ರೇಣುಕಾ ಚೌಧರಿಗೆ ಎಚ್ಚರಿಕೆ ನೀಡುತ್ತಿದ್ದರು. ಈ ಹಂತದಲ್ಲಿ ಮಾತನಾಡಿದ ಮೋದಿ, 'ಸಭಾಪತಿ ಅವರೇ ನಾನು ನಿಮಗೆ ಪ್ರಾರ್ಥಿಸುತ್ತಿದ್ದೇನೆ. ನೀವು ರೇಣುಕಾ ಜೀಗೆ ಏನನ್ನೂ ಕೂಡ ಹೇಳಬಾರದು. ರಾಮಾಯಣ ಧಾರವಾಹಿಯ ಬಳಿಕ ಇಂಥ ನಗುವನ್ನು ಕೇಳುವ ಸೌಭಾಗ್ಯ ನನಗೆ ಇಂದು ಸಿಕ್ಕಿದೆ' ಎಂದಿದ್ದರು. ಮೋದಿ ಈ ಮಾತನನ್ನು ಹೇಳುತ್ತಿದ್ದಂತೆ ಇಡೀ ಕಲಾಪ ನಗುವಿನ ಅಲೆಯಲ್ಲಿ ತೇಲಿತ್ತು. ಇನ್ನು ಮೋದಿ ಅವರ ಈ ಹೇಳಿಕೆಯ ನಂತರ ರೇಣುಕಾ ಚೌಧರಿ ಕೂಡ ಸಂಪೂರ್ಣ ತಣ್ಣಗಾಗಿ ಹೋಗಿದ್ದರು.