ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್, ಅಮೆರಿಕ-ಭಾರತ ಸುಂಕ ವಿವಾದದ ಬಗ್ಗೆ ಮಾತನಾಡುತ್ತಾ, 'ವೆನೆಜುವೆಲಾದಂತೆ ಭಾರತದ ಪ್ರಧಾನಿಯನ್ನು ಅಮೆರಿಕ ಅಪಹರಿಸಬಹುದೇ?' ಎಂದು ಪ್ರಶ್ನಿಸಿ ವಿವಾದ ಸೃಷ್ಟಿ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ,'ಬೌದ್ಧಿಕ ದಿವಾಳಿತನ' ಎಂದು ಕರೆದಿದ್ದಾರೆ.
ಮುಂಬೈ (ಜ.6): ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಅವರು ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸುಂಕದ ಬಗ್ಗೆ ಮಾತನಾಡುವಾಗ ನೀಡಿದ ವಿಲಕ್ಷಣ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ, ಆಕ್ರೋಶ ಮತ್ತು ಟ್ರೋಲ್ ಗೆ ಗುರಿಯಾಗಿದೆ.
ಮುಂಬೈನಲ್ಲಿ ಮಾತನಾಡಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, ಅಮೆರಿಕ ಮತ್ತು ವೆನೆಜುವೆಲಾ ನಡುವಿನ ಮಿಲಿಟರಿ ಕಾರ್ಯಾಚರಣೆಯನ್ನು ನೆನಪಿಸಿದರು. ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿಯಲು ಅಮೆರಿಕ ನಡೆಸಿದ ಪ್ರಯತ್ನಗಳನ್ನು ಉಲ್ಲೇಖಿಸಿದ ಅವರು, 'ವೆನೆಜುವೆಲಾದಲ್ಲಿ ನಡೆದಂತೆ ಭಾರತದಲ್ಲೂ ನಡೆಯಬಹುದೇ? ಅಮೆರಿಕ ಅಧ್ಯಕ್ಷ ಟ್ರಂಪ್ ನಮ್ಮ ಪ್ರಧಾನಿಯನ್ನು ಅಪಹರಿಸುತ್ತಾರೆಯೇ?' ಎಂದು ಪ್ರಶ್ನಿಸಿದರು. ಭಾರತದಂತಹ ಪರಮಾಣು ಶಕ್ತಿ ಹೊಂದಿರುವ ದೇಶದ ಬಗ್ಗೆ ಇಂತಹ ಹೇಳಿಕೆ ನೀಡಿರುವುದು ಹಲವರ ಹುಬ್ಬೇರಿಸುವಂತೆ ಮಾಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಸುರಿಮಳೆ
ಚವಾಣ್ ಅವರ ಈ ಮಾತುಗಳು ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಅವರನ್ನು ತೀವ್ರವಾಗಿ ಟೀಕೆ, ಟ್ರೋಲ್ ಮಾಡುತ್ತಿದ್ದಾರೆ. 'ಇದು ಅಸಂಬದ್ಧತೆಯ ಪರಮಾವಧಿ' ಎಂದು ನೆಟ್ಟಿಗರು ಟೀಕಿಸಿದ್ದಾರೆ. ಸುದೀರ್ಘ ರಾಜಕೀಯ ಅನುಭವ ಹೊಂದಿರುವ ನಾಯಕರೊಬ್ಬರಿಂದ ಇಂತಹ 'ಬೌದ್ಧಿಕವಾಗಿ ದಿವಾಳಿತನದ' ಮಾತುಗಳು ಬಂದಿರುವುದು ಆಘಾತಕಾರಿ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
'ಇಡೀ ದೇಶಕ್ಕೆ ಅವಮಾನ': ಮಾಜಿ ಪೊಲೀಸ್ ಅಧಿಕಾರಿ ಕಿಡಿ
ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಎಸ್‌ಪಿ ವೈದ್ ಅವರು ಚವಾಣ್ ವಿರುದ್ಧ ಕೆಂಡಕಾರಿದ್ದಾರೆ. 'ಭಾರತದ ಪ್ರಧಾನಿಗೆ ವೆನೆಜುವೆಲಾ ಅಧ್ಯಕ್ಷನ ಗತಿ ಬರಲಿ ಎಂದು ಯೋಚಿಸುವುದು ಇಡೀ ದೇಶಕ್ಕೆ ಮಾಡುವ ಅವಮಾನ. ಮಾತನಾಡುವ ಮುನ್ನ ಕನಿಷ್ಠ ಜ್ಞಾನವಿರಲಿ. ಇದು ಕಾಂಗ್ರೆಸ್ ಪಕ್ಷದ ಅಸಲಿ ಸಿದ್ಧಾಂತವೇ? ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ. ಭದ್ರತಾ ವಿಷಯಗಳಲ್ಲಿ ಅನುಭವವಿರುವ ಅನೇಕರು ಭಾರತ ಮತ್ತು ವೆನೆಜುವೆಲಾವನ್ನು ಹೋಲಿಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಂಕದ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ
ಅಮೆರಿಕವು ಭಾರತದ ಸರಕುಗಳ ಮೇಲೆ ವಿಧಿಸುತ್ತಿರುವ ಶೇ. 50 ರಷ್ಟು ಸುಂಕದ ಬಗ್ಗೆ ಆತಂಕ ವ್ಯಕ್ತಪಡಿಸಿದರು ಚವಾಣ್ . 'ಇಷ್ಟು ದೊಡ್ಡ ಮಟ್ಟದ ತೆರಿಗೆಯಿಂದಾಗಿ ಅಮೆರಿಕದೊಂದಿಗೆ ವ್ಯಾಪಾರ ಮಾಡುವುದು ಅಸಾಧ್ಯವಾಗುತ್ತದೆ. ಇದು ರಫ್ತುದಾರರಿಗೆ ದೊಡ್ಡ ಹೊಡೆತ. ನಮ್ಮ ಲಾಭಗಳು ಕಡಿಮೆಯಾಗಲಿವೆ, ಆದ್ದರಿಂದ ನಾವು ಬೇರೆ ಮಾರುಕಟ್ಟೆಗಳನ್ನು ಹುಡುಕಬೇಕಾಗಿದೆ' ಎಂದು ಅವರು ಆರ್ಥಿಕ ಪರಿಸ್ಥಿತಿಯ ಬಗ್ಗೆ ಎಚ್ಚರಿಸಿದರು.
'ಮೊಗ್ಯಾಂಬೊ ಖುಷ್ ಹುವಾ' ಎಂದು ಲೇವಡಿ ಮಾಡಿದ್ದ ಖರ್ಗೆ
ಈ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಇತ್ತೀಚಿನ ಹೇಳಿಕೆಯೂ ಸದ್ದು ಮಾಡುತ್ತಿದೆ. ಟ್ರಂಪ್ ಅವರು ರಷ್ಯಾ ತೈಲ ಖರೀದಿ ಬಗ್ಗೆ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದ ಖರ್ಗೆ, 'ಮೋದಿ ಅವರು ಟ್ರಂಪ್ ನಿಯಂತ್ರಣದಲ್ಲಿದ್ದಾರೆ. ಟ್ರಂಪ್ ಅವರನ್ನು ಖುಷಿಪಡಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ. ಇದನ್ನು ನೋಡಿದರೆ 'ಮಿಸ್ಟರ್ ಇಂಡಿಯಾ' ಚಿತ್ರದ ಮೊಗ್ಯಾಂಬೊ ಖುಷ್ ಹುವಾ ಎಂಬ ಸಂಭಾಷಣೆ ನೆನಪಾಗುತ್ತದೆ' ಎಂದು ವ್ಯಂಗ್ಯವಾಡಿದ್ದರು.
ಸುಂಕದ ನಡುವೆಯೂ ಹೆಚ್ಚಿದ ರಫ್ತು ವ್ಯಾಪಾರ
ಒಂದೆಡೆ ರಾಜಕೀಯ ಕೆಸರೆರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಭಾರತದ ರಫ್ತು ಉದ್ಯಮದಲ್ಲಿ ಧನಾತ್ಮಕ ಬೆಳವಣಿಗೆ ಕಂಡುಬಂದಿದೆ. ನವೆಂಬರ್ ತಿಂಗಳಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಶೇ. 22.61 ರಷ್ಟು ಏರಿಕೆಯಾಗಿದೆ. ಕಳೆದ ಎಂಟು ತಿಂಗಳ ಅವಧಿಯಲ್ಲಿ ಭಾರತವು ಅಮೆರಿಕಕ್ಕೆ 59.04 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡುವ ಮೂಲಕ ತನ್ನ ವ್ಯಾಪಾರ ಶಕ್ತಿಯನ್ನು ಪ್ರದರ್ಶಿಸಿದೆ ಎಂಬುದು ಗಮನಾರ್ಹ.


