ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್‌ ಆಡಳಿತವಿದ್ದ ಸಮಯದಲ್ಲಿ ಅಸ್ಸಾಂ ನೆಲವನ್ನು ಮತಕ್ಕಾಗಿ ಅವರು ನುಸುಳುಕೋರರಿಗೆ ಬಿಟ್ಟುಕೊಟ್ಟಿದ್ದರು. ಆದರೆ ಬಿಜೆಪಿ ಅವರನ್ನೆಲ್ಲ ತೆರವುಗೊಳಿಸುವ ಮೂಲಕ ರಾಜ್ಯದ ಗುರುತನ್ನು ರಕ್ಷಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಲಿಯಾಬೋರ್‌ (ಅಸ್ಸಾಂ): ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್‌ ಆಡಳಿತವಿದ್ದ ಸಮಯದಲ್ಲಿ ಅಸ್ಸಾಂ ನೆಲವನ್ನು ಮತಕ್ಕಾಗಿ ಅವರು ನುಸುಳುಕೋರರಿಗೆ ಬಿಟ್ಟುಕೊಟ್ಟಿದ್ದರು. ಆದರೆ ಬಿಜೆಪಿ ಅವರನ್ನೆಲ್ಲ ತೆರವುಗೊಳಿಸುವ ಮೂಲಕ ರಾಜ್ಯದ ಗುರುತನ್ನು ರಕ್ಷಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಚುನಾವಣೆಗೆ ಸಜ್ಜಾಗುತ್ತಿರುವ ಅಸ್ಸಾಂನಲ್ಲಿ ಭಾನುವಾರ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಆಳ್ವಿಕೆಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಒಳನುಸುಳುವಿಕೆ ಭಾರೀ ಏರಿಕೆಯಾಗಿತ್ತು. ನುಸುಳುಕೋರರು ಅರಣ್ಯ, ಪ್ರಾಣಿಗಳು ಸಂಚರಿಸುವ ವಲಯ, ಸಾಂಸ್ಕೃತಿಕ ಸಂಸ್ಥೆಗಳನ್ನು ಆಕ್ರಮಿಸಿಕೊಂಡಿದ್ದರು. ಅವರಿಂದಾಗಿ ಜನಸಂಖ್ಯಾ ಅಸಮತೋಲನ ಉಂಟಾಗಿದ್ದಲ್ಲದೆ, ಸಂಸ್ಕೃತಿಯ ಮೇಲೂ ದಾಳಿಯಾಗುತ್ತಿದೆ. ನುಸುಳುಕೋರರು ನಮ್ಮ ಯುವಕರ ಮತ್ತು ಬಡವರ ಉದ್ಯೋಗ ಕಸಿಯುತ್ತಿದ್ದಾರೆ. ಬಿಡಕಟ್ಟು ಜನರ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತಿದ್ದು, ಅಸ್ಸಾಂ ಹಾಗೂ ರಾಷ್ಟ್ರದ ಭದ್ರತೆಗೆ ಅಪಾಯವನ್ನು ಒಡ್ಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಎಚ್ಚರಿಕೆಯಿಂದಿರಲು ಕರೆ:

ನುಸುಳುಕೋರರನ್ನು ರಕ್ಷಿಸಿ ಅಧಿಕಾರದಲ್ಲಿ ಮುಂದುವರೆಯುವುದು ಕಾಂಗ್ರೆಸ್‌ನ ಸಿದ್ಧಾಂತ ಎಂದಿರುವ ಮೋದಿ, ‘ಈ ಬಗ್ಗೆ ಜನರು ಎಚ್ಚರದಿಂದಿರಬೇಕು. ಬಿಹಾರ ಚುನಾವಣೆ ಸಮಯದಲ್ಲಿ ನುಸುಳುವಿಕೆಯತ್ತ ಗಮನ ಹೋಗದಂತೆ ತಡೆಯಲು ಕಾಂಗ್ರೆಸ್‌ ರ್‍ಯಾಲಿಗಳನ್ನು ಆಯೋಜಿಸಿತ್ತು. ಆದರೆ ಅದಕ್ಕೆ ಮರುಳಾಗದ ಜನ ಆ ಪಕ್ಷವನ್ನೇ ತಿರಸ್ಕರಿಸಿದರು. ಅಸ್ಸಾಂ ಜನತೆಯೂ ಕಾಂಗ್ರೆಸ್‌ಗೆ ಇದೇ ಉತ್ತರ ಕೊಡಲಿದೆ. ನಕಾರಾತ್ಮಕ ರಾಜಕೀಯದಲ್ಲಿ ತೊಡಗಿರುವ ವಿಪಕ್ಷದ ಮೇಲಿನ ಜನರ ನಂಬಿಕೆ ಮಾಯವಾಗಿರುವುದರಿಂದ ಅವರಿಗೆ ಬಿಜೆಪಿ ಮೊದಲ ಆಯ್ಕೆಯಾಗಿ ಕಾಣುತ್ತಿದೆ’ ಎಂದು ಹೇಳಿದ್ದಾರೆ. ಆ ಮೂಲಕ, ಮುಂಬರುವ ಚುನಾವಣೆಯಲ್ಲಿ ಮತದಾರರ ಒಲವು ಬಿಜೆಪಿಯತ್ತ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಿಂದ ರಕ್ಷಣೆ:

‘ದಶಕಗಳ ಕಾಲ ಒಳನುಸುಳಿ ಬಂದು ಅಸ್ಸಾಂ ನೆಲವನ್ನು ಆಕ್ರಮಿಸಿಕೊಂಡಿದ್ದವರನ್ನು ಬಿಜೆಪಿ ಸರ್ಕಾರ ತೆರವುಗೊಳಿಸಿ, ರಾಜ್ಯದ ಗುರುತು ಮತ್ತು ಸಂಸ್ಕೃತಿಯನ್ನು ರಕ್ಷಿಸುತ್ತಿದೆ’ ಎಂದು ಪ್ರಧಾನಿ ಹೇಳಿದ್ದಾರೆ. ಮುಂದುವರೆದು, ‘ಒಳ್ಳೆಯ ಆಡಳಿತ ಮತ್ತು ಅಭಿವೃದ್ಧಿಯಿಂದಾಗಿ ಜನರಿಗೆ ಬಿಜೆಪಿ ಮೇಲೆ ನಂಬಿಕೆಯಿದೆ. ಇದು ಬಿಹಾರ ವಿಧಾನಸಭೆ, ಮಹಾರಾಷ್ಟ್ರ ಮತ್ತು ಕೇರಳದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಾಬೀತಾಗಿದೆ’ ಎಂದು ಹೇಳಿದರು.