ಕ್ಷೇತ್ರದ ಮಾಜಿ ಬಿಜೆಪಿ ಸಂಸದೆ ಸುಮಿತ್ರಾ ಮಹಾಜನ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಮಗೆ ಹಲವರು ಕರೆ ಮಾಡಿ, ಬಿಜೆಪಿ ಮಾಡಿದ್ದು ನಮಗೆ ಇಷ್ಟವಾಗಲಿಲ್ಲ. ಅದಕ್ಕಾಗಿ ತಾವು ನೋಟಾಗೆ ಮತ ಹಾಕುತ್ತೇವೆ ಎಂದು ಹೇಳಿದ್ದಾರೆ.
ನವದೆಹಲಿ (ಮೇ.11): ಇಂದೋರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಾಸ್ ಪಡೆದುಕೊಂಡಿದ್ದಲ್ಲದೆ, ಗಾಯದ ಮೇಲೆ ಉಪ್ಪು ಸವರುವಂತೆ ತನ್ನ ಅಭ್ಯರ್ಥಿ ಬಿಜೆಪಿ ಸೇರಿದ್ದು ಕಾಂಗ್ರೆಸ್‌ಗೆ ಮರ್ಮಾಘಾತ ನೀಡಿದೆ. ಇದಕ್ಕಾಗಿ ಆಡಳಿತಾರೂಢ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎನ್ನುವ ನಿಟ್ಟಿನಲ್ಲಿ ಇಂದೋರ್‌ನಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದೆ. ಪ್ರಚಾರದಲ್ಲಿ ಜನರು ನೋಟಾವನ್ನು ಆಯ್ಕೆ ಮಾಡಬೇಕು ಎಂದು ತಿಳಿಸುತ್ತಿದೆ. ಕಳೆದ 35 ವರ್ಷಗಳಲ್ಲಿ (1989 ರಿಂದ) ಮತದಾರರ ವಿಷಯದಲ್ಲಿ ಮಧ್ಯಪ್ರದೇಶದ ದೊಡ್ಡದಾದ ಇಂದೋರ್ ಕ್ಷೇತ್ರವನ್ನು ಕಾಂಗ್ರೆಸ್ ಗೆಲುವು ಸಾಧಿಸಿಲ್ಲ. ಆದರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗದಿರುವುದು ಇದೇ ಮೊದಲು. ಬಿಜೆಪಿಯು ಹಾಲಿ ಸಂಸದ ಶಂಕರ್ ಲಾಲ್ವಾನಿ ಮತ್ತು ಕಾಂಗ್ರೆಸ್ ಅಕ್ಷಯ್ ಕಾಂತಿ ಬಾಮ್ ಅವರಿಗೆ ಟಿಕೆಟ್ ನೀಡಿತ್ತು. ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಹಿಂಪಡೆಯುವ ಕೊನೆಯ ದಿನದಂದು ನಾಮಪತ್ರ ವಾಪಾಸ್ ಪಡೆದುಕೊಂಡಿದ್ದಲ್ಲದೆ, ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪಕ್ಷದ ಚಿಹ್ನೆಯ ಮೇಲೆ ಕ್ಷೇತ್ರದಿಂದ ಸ್ಪರ್ಧಿಸಲು ಅದರ ಬದಲಿ ಅಭ್ಯರ್ಥಿಯ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ. ಆ ಬಳಿಕ ಕಾಂಗ್ರೆಸ್ ಇಡೀ ಕ್ಷೇತ್ರದಲ್ಲಿ ನೋಟಾಗೆ ಮತ ಹಾಕುವಂತೆ ಪ್ರಚಾರ ಮಾಡುತ್ತಿದೆ. ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಈ ಕುರಿತಾಗಿ ಪ್ರಚಾರ ಮಾಡುತ್ತಿದೆ. ಇದು ಬಿಜೆಪಿಗೂ ಯಾವ ಪ್ರಮಾಣದಲ್ಲಿ ಪರಿಣಾಮ ಬೀರಿದೆ ಎಂದರೆ, ಕಣದಲ್ಲಿರುವ ಇನ್ನೂ 13 ಮಂದಿ ಅಭ್ಯರ್ಥಿಗಳು ಕೂಡ ಪ್ರಚಾರ ಕಾರ್ಯದಲ್ಲಿ ನಿರತರಾಗಿಲ್ಲ. ಇಂದೋರ್ ಕ್ಷೇತ್ರಕ್ಕೆ ನಾಲ್ಕನೇ ಹಂತದಲ್ಲಿ ಸೋಮವಾರ ಮತದಾನ ನಡೆಯಲಿದೆ.
ಕಣದಲ್ಲಿರುವ ಉಳಿದ ಯಾವುದೇ ಅಭ್ಯರ್ಥಿಗಳನ್ನು ಪಕ್ಷ ಬೆಂಬಲಿಸುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ಹೇಳಿದ್ದಾರೆ ಮತ್ತು ಬಿಜೆಪಿಯನ್ನು ಶಿಕ್ಷಿಸಲು ನೋಟಾ ಮತಗಳ ದಾಖಲೆಯನ್ನು ಸೃಷ್ಟಿಸುವಂತೆ ಜನರನ್ನು ಒತ್ತಾಯ ಮಾಡುತ್ತಿದ್ದೇವೆ ಎಂದಿದ್ದಾರೆ.
ಮಾಜಿ ಸಚಿವ ಹಾಗೂ ಮಾಜಿ ಸಂಸದ ಸಜ್ಜನ್ ವರ್ಮಾ ಈ ಕುರಿತಾಗಿ ಪೋಸ್ಟ್ ಮಾಡಿದ್ದು, "ನಾನು ಇಂದೋರ್ ಜನರಿಗೆ ಮನವಿ ಮಾಡುತ್ತೇನೆ... ನಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ಕೆಲವರು ಕದ್ದಿದ್ದಾರೆ, ಅವರು ನಿಮ್ಮಿಂದ ವಂಚಿತರಾಗಿದ್ದಾರೆ. ನೀವು ಅವರಿಗೆ ಪಾಠ ಕಲಿಸಲು ಬಯಸಿದರೆ, ನೋಟಾ ಬಟನ್ ಒತ್ತಿ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ' ಎಂದು ಬರೆದುಕೊಂಡಿದ್ದಾರೆ.
"ಕಳೆದ ಮುನ್ಸಿಪಲ್ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಇಂದೋರ್‌ನ ಮತದಾರರು ಬಿಜೆಪಿಗೆ ಭಾರಿ ಗೆಲುವು ನೀಡಿದ್ದರು. ಹೀಗಿದ್ದರೂ, ಬಿಜೆಪಿಯು ಬಾಮ್‌ಗೆ ಅನ್ಯಾಯವಾಗಿ ಆಮಿಷವೊಡ್ಡುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ. ಮತದಾರರು ನೋಟಾ ಆಯ್ಕೆಯನ್ನು ಆರಿಸುವ ಮೂಲಕ ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡಬೇಕು," ಎಂದು ಹಿರಿಯ ಕಾಂಗ್ರೆಸ್ ನಾಯಕಿ ಶೋಭಾ ಓಜಾ ತಿಳಿಸಿದ್ದಾರೆ.
ಇಂದೋರ್‌ನಲ್ಲೂ ಕಾಂಗ್ರೆಸ್ ರನ್‌ಔಟ್? ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ ಸಾಧ್ಯತೆ
2013 ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನೋಟಾ ಆಯ್ಕೆಯನ್ನು ಪರಿಚಯಿಸಲಾಯಿತು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳ ಬಗ್ಗೆ ಮತದಾರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಒಂದು ಮಾರ್ಗ ವಾಗಿದೆ.. ನೋಟಾಗೆ ನೀಡಿದ ಮತಗಳು ಮತದಾನದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಮತ್ತು ಬಹುಪಾಲು ಮತದಾರರು ನೋಟಾ ಆಯ್ಕೆ ಮಾಡಿದರೆ ಒಂದು ಕ್ಷೇತ್ರದಲ್ಲಿ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಕಳೆದ ತಿಂಗಳು ಚುನಾವಣಾ ಆಯೋಗಕ್ಕೆ ನೋಟಿಸ್ಅನ್ನೂ ನೀಡಿದೆ.
