ಇಂದೋರ್‌ನಲ್ಲೂ ಕಾಂಗ್ರೆಸ್ ರನ್‌ಔಟ್? ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ ಸಾಧ್ಯತೆ
ಇಂದೋರ್‌ನ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರು ತಮ್ಮ ನಾಮಪತ್ರವನ್ನು ಹಿಂಪಡೆದು ಬಿಜೆಪಿಗೆ ಸೇರಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯ ಘೋಷಿಸಿದ್ದಾರೆ.
ನವದೆಹಲಿ (ಏ.29): ಕಾಂಗ್ರೆಸ್‌ನ ಇಂದೋರ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಂಬ್ ಅವರು ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಸೋಮವಾರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಮಧ್ಯಪ್ರದೇಶದ ಸಚಿವ ಮತ್ತು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಅವರು ಬಾಂಬ್ ಚಿತ್ರವನ್ನು ಪೋಸ್ಟ್ ಮಾಡಿದ್ದಲ್ಲದೆ, 'ಪಕ್ಷಕ್ಕೆ ಸ್ವಾಗತ' ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಈ ಬೆಳವಣಿಗೆಯನ್ನು ಧೃಡಪಡಿಸಲಾಗಿದೆ. "ಕಾಂಗ್ರೆಸ್‌ನ ಇಂದೋರ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಂಬ್ ಅವರನ್ನು ಬಿಜೆಪಿ ಸ್ವಾಗತಿಸುತ್ತದೆ" ಎಂದು ಹಿಂದಿಯಲ್ಲಿ ವಿಜಯವರ್ಗಿಯ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಶುಕ್ರವಾರ, ಒಡಿಶಾದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಡಿಯ ಸೊರೊ ಶಾಸಕ ಪರಶುರಾಮ್ ಧಾಡಾ ಬಿಜೆಪಿಗೆ ಮರಳಿದರು. ವಾರಗಳ ಹಿಂದೆ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಇದಕ್ಕೂ ಮುನ್ನ ಏಪ್ರಿಲ್ 27 ರಂದು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಸಿಖ್ಖರು ಬಿಜೆಪಿಗೆ ಸೇರ್ಪಡೆಗೊಂಡರು. ಅಲ್ಪಸಂಖ್ಯಾತ ಸಮುದಾಯಕ್ಕೆ ಸಹಾಯ ಮಾಡಲು ಸರ್ಕಾರ ಕೈಗೊಂಡಿರುವ ಹಲವಾರು ಕ್ರಮಗಳನ್ನು ಉಲ್ಲೇಖಿಸಿದ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಯಾರಾದರೂ ನಿಜವಾಗಿಯೂ ಸಮುದಾಯಕ್ಕಾಗಿ ಕೆಲಸ ಮಾಡಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದರು. 1,000 ಕ್ಕೂ ಹೆಚ್ಚು ಸಿಖ್ಖರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ.