* ಅಮೇಠಿಯಂತೆ ಇಲ್ಲೂ ರಾಹುಲ್‌ಗೆ ಕೊಡ್ತಾರಾ ಠಕ್ಕರ್‌?* ರಾಹುಲ್‌ ಕ್ಷೇತ್ರ ವಯನಾಡ್‌ಗೆ ಸಚಿವೆ ಸ್ಮೃತಿ ಇರಾನಿ: ಸಂಚಲನ* ರಾಹುಲ್‌ರ ಲೋಕಸಭಾ ಕ್ಷೇತ್ರವಾದ ಕೇರಳದ ವಯನಾಡ್‌

ನವದೆಹಲಿ(ಮೇ.04): ಅಮೇಠಿಯಲ್ಲಿ ರಾಹುಲ್‌ ಗಾಂಧಿಯನ್ನು ಸೋಲಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇದೀಗ ರಾಹುಲ್‌ರ ಲೋಕಸಭಾ ಕ್ಷೇತ್ರವಾದ ಕೇರಳದ ವಯನಾಡ್‌ಗೆ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ವಯನಾಡ್‌ಗೆ ಅಧಿಕೃತ ಕಾರ್ಯಗಳ ನಿಮಿತ್ತ ಭೇಟಿ ನೀಡಿದ್ದು, ಕೇಂದ್ರದ ‘ಮಹತ್ವಾಕಾಂಕ್ಷಿ ಜಿಲ್ಲೆಗಳು’ ಯೋಜನೆಗೆ ಸಂಬಂಧಿಸಿದ ಸಭೆ ನಡೆಸಿದ್ದಾರೆ. ಆದರೆ ರಾಹುಲ್‌ರ ಕಟು ವಿರೋಧಿಯಾಗಿರುವ ಇವರನ್ನು ಬಿಜೆಪಿಯು ವಯನಾಡ್‌ಗೆ ಅನ್ಯ ಉದ್ದೇಶಗಳನ್ನಿರಿಸಿಕೊಂಡು ಕಳಿಸಿರಬಹುದು ಎಂಬ ವ್ಯಾಖ್ಯಾನಗಳು ಕೇಳಿಬಂದಿವೆ.

2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ರ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಠಿಯಲ್ಲಿ ಸ್ಮೃತಿ ಇರಾನಿ ಸ್ಪರ್ಧಿಸಿ ಸೋತಿದ್ದರು. ನಂತರ ಐದು ವರ್ಷಗಳ ಕಾಲ ಪದೇಪದೇ ಅಲ್ಲಿಗೆ ಭೇಟಿ ನೀಡಿ, ರಾಹುಲ್‌ ವಿರುದ್ಧ ತೀವ್ರ ಪ್ರಚಾರ ನಡೆಸಿ 2019ರಲ್ಲಿ ಅಮೇಠಿಯಲ್ಲಿ ಗೆದ್ದಿದ್ದರು. ಆ ಚುನಾವಣೆಯಲ್ಲಿ ವಯನಾಡ್‌ನಿಂದಲೂ ಸ್ಪರ್ಧಿಸಿದ್ದ ರಾಹುಲ್‌, ಅಲ್ಲಿ ಗೆಲ್ಲುವ ಮೂಲಕ ಸಂಸತ್‌ ಸದಸ್ಯತ್ವ ಉಳಿಸಿಕೊಂಡಿದ್ದರು. ಈಗ ವಯನಾಡ್‌ಗೂ ಸ್ಮೃತಿ ತೆರಳಿರುವುದು ಹಲವು ಊಹಾಪೋಹಕ್ಕೆ ಕಾರಣವಾಗಿದೆ.

ಮಹಿಳಾ ದೌರ್ಜನ್ಯ ತಡೆಗೆ ಕಠಿಣ ಕ್ರಮ: ಸ್ಮೃತಿ ಇರಾನಿ

ಮಹಿಳೆಯರ ಕಲ್ಯಾಣಕ್ಕಾಗಿ ಮಿಷನ್‌ ಶಕ್ತಿ, ಮಿಷನ್‌ ವಾತ್ಸಲ್ಯ, ಸಕ್ಷಮ್‌ ಅಂಗನವಾಡಿ ಯೋಜನೆ ಘೋಷಣೆ ಮಾಡಿದ್ದು, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವ ನಿಯಮಗಳನ್ನು ಮತ್ತಷ್ಟುಕಠಿಣಗೊಳಿಸಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಭದ್ರತೆ, ಸುರಕ್ಷತೆ ಮತ್ತು ಸಬಲೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಮಕ್ಕಳ ಸುರಕ್ಷತೆ ಮತ್ತು ದೌರ್ಜನ್ಯ ತಡೆಯುವ ಉದ್ದೇಶದಿಂದ ಜಿಲ್ಲಾವಾರು ಕೇಂದ್ರಗಳನ್ನು ತೆರೆಯಬೇಕೆಂದು ಪ್ರಧಾನಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ 704 ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳಲ್ಲಿ ದೈಹಿಕ, ಮಾನಸಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮಹಿಳೆಯರ ಸಬಲೀಕರಣವಾಗದ ಹೊರತು ದೇಶಾಭಿವೃದ್ಧಿ ಅಸಾಧ್ಯ ಎಂಬುದು ಅವರ ನಂಬಿಕೆಯಾಗಿದೆ. ಹಾಗಾಗಿ ಬೇಟಿ ಬಜಾವೋ ಬೇಟಿ ಪಡಾವೋ, ಜನ್‌ಧನ್‌, ಮುದ್ರಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಆರ್ಥಿಕವಾಗಿ ಅವರನ್ನು ಸಬಲೀಕರಣಗೊಳಿಸುವ ಉದ್ದೇಶ ಹೊಂದಲಾಗಿದೆ. ಜನಧನ್‌ ಯೋಜನೆಯಿಂದಾಗಿ 24 ಕೋಟಿ ಮಹಿಳೆಯರು ಮೊದಲ ಬಾರಿಗೆ ಬ್ಯಾಂಕ್‌ ಖಾತೆ ತೆರೆದಿದ್ದಾರೆ. ಮುದ್ರಾ ಯೋಜನೆ ಅಡಿಯಲ್ಲಿ ಮಹಿಳೆಯರು ಸಾಲ ಪಡೆದು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದರು.

ಪೋಷಣ್‌ ಅಭಿಯಾನದಡಿ ಅಂಗನವಾಡಿಗಳನ್ನು ಬಲಪಡಿಸಲಾಗುತ್ತಿದ್ದು, ಸಕ್ಷಮ್‌ ಯೋಜನೆಯಡಿ ದೇಶದ 14 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸುವ (ಸ್ಮಾರ್ಚ್‌) ಯೋಜನೆ ಪ್ರಗತಿಯಲ್ಲಿದೆ. ಈಗಾಗಲೇ 11 ಲಕ್ಷ ಅಂಗನವಾಡಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ 9 ಕೋಟಿ ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗಲಿದೆ ಎಂದರು. ಜೊತೆಗೆ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಮತ್ತಷ್ಟುಶಕ್ತಿ ತುಂಬಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.