ಇಸ್ರೇಲ್ ತಂತ್ರಾಂಶ ಬಳಸಿ ಮೋದಿ ಸರ್ಕಾರದಿಂದ ಬೇಹುಗಾರಿಕೆ: ಕಾಂಗ್ರೆಸ್
ದೇಶದ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು 986 ಕೋಟಿ ರೂ. ಖರ್ಚು ಮಾಡುತ್ತಿದೆಯೇ? ಪ್ರಮುಖ ಪತ್ರಿಕೆಯೊಂದು ಪ್ರಕಟಿಸಿದ ವ್ಯಾಪಾರಿ ಅಂಕಿಅಂಶಗಳ ವಿಶ್ಲೇಷಣೆಯಲ್ಲಿ ಮೋದಿ ಸರ್ಕಾರ ಈಗಾಗಲೇ ಇಸ್ರೇಲ್‌ನ ಕಾಗ್ನೈಟ್ ಕಂಪನಿಯಿಂದ ಬೇಹುಗಾರಿಕೆ ಸಾಫ್ಟ್‌ವೇರ್ ಖರೀದಿಸಿದೆ ಎಂಬ ಮಾಹಿತಿಯಿದೆ. ಪೆಗಾಸಸ್ ಕಂಪನಿಯನ್ನು ಬಹುತೇಕ ದೇಶಗಳು ಕಪ್ಪುಪಟ್ಟಿಗೆ ಸೇರಿಸಿದ ನಂತರ ಭಾರತ ಸರ್ಕಾರ ಹೊಸ ಸಾಫ್ಟ್‌ವೇರ್ ಹುಡುಕುತ್ತಿದೆ ಎಂದು ಹೇಳಿದ್ದಾರೆ.
ನವದೆಹಲಿ (ಏಪ್ರಿಲ್ 11, 2023): ಇಸ್ರೇಲ್‌ನ ಪೆಗಾಸಸ್ ಸಾಫ್ಟ್‌ವೇರ್ ಬಗ್ಗೆ ವಿವಾದವಾದ ನಂತರ ಕೇಂದ್ರ ಸರ್ಕಾರ ಈಗ ಇಸ್ರೇಲ್‌ನದೇ ಇನ್ನೊಂದು ಕಂಪನಿಯಿಂದ 986 ಕೋಟಿ ರೂ.ಗೆ ಹೊಸ ಬೇಹುಗಾರಿಕೆ ಸಾಫ್ಟ್‌ವೇರ್ ಖರೀದಿ ಮಾಡಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ‘ಸಂಡೇ ಗಾರ್ಡಿಯನ್’ ಪತ್ರಿಕೆ ಭಾರತ ಹಾಗೂ ಇಸ್ರೇಲ್ ನಡುವಿನ ವ್ಯಾಪಾರಿ ಅಂಕಿ ಅಂಶಗಳನ್ನು ಪ್ರಕಟಿಸಿದ್ದು, ಅದರಲ್ಲಿ ಭಾರತ ಹಾಗೂ ಇಸ್ರೇಲ್‌ನ ಕಾಗ್ನೈಟ್ ಕಂಪನಿ ನಡುವೆ 986 ಕೋಟಿ ರೂ.ನ ಖರೀದಿ ವ್ಯವಹಾರ ನಡೆದಿದೆ ಎಂದು ಉಲ್ಲೇಖಿಸಿದೆ. ಕಾಗ್ನೈಟ್ ಕಂಪನಿಯು ಪೆಗಾಸಸ್‌ನಂತಹುದೇ ಇನ್ನೊಂದು ಕಂಪನಿಯಾಗಿದ್ದು, ಅದು ಜನರ ಫೋನ್ ಕಾಲ್‌ಗಳನ್ನು ಕದ್ದಾಲಿಸುವ, ಸಂದೇಶಗಳನ್ನು ಕದ್ದು ನೋಡುವ ಸಾಫ್ಟ್‌ವೇರ್‌ಗಳನ್ನು ಪೂರೈಸುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಪೆಗಾಸಸ್ ವಿವಾದದ ಬಳಿಕ ಕಾಗ್ನೈಟ್ ಕಂಪನಿಯಿಂದ ಬೇಹುಗಾರಿಕೆ ಸಾಫ್ಟ್‌ವೇರ್ ಖರೀದಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ವಿರೋಧ ಪಕ್ಷಗಳ ಮೇಲೆ ಬೇಹುಗಾರಿಕೆ:
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, ‘ಜನರು ಹಾಗೂ ಸಂಸ್ಥೆಗಳ ಮೇಲೆ ಬೇಹುಗಾರಿಕೆ ನಡೆಸಲು ಮೋದಿ ಸರ್ಕಾರ ಹೊಸ ಸಾಫ್ಟ್‌ವೇರ್ ಖರೀದಿಸಿದೆಯೇ? ವಿರೋಧ ಪಕ್ಷಗಳು, ಎನ್‌ಜಿಒಗಳು, ಮಾಧ್ಯಮ ಸಂಸ್ಥೆಗಳು, ನಾಗರಿಕ ಹಕ್ಕುಗಳ ಹೋರಾಟಗಾರರು, ಚುನಾವಣಾ ಆಯೋಗ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸುವ ಎಲ್ಲಾ ಕಂಪನಿಗಳ ಮೇಲೆ ಬೇಹುಗಾರಿಕೆ ನಡೆಸಲು ಸರ್ಕಾರ ಮುಂದಾಗಿದೆಯೇ? ದೇಶದ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು 986 ಕೋಟಿ ರೂ. ಖರ್ಚು ಮಾಡುತ್ತಿದೆಯೇ? ಪ್ರಮುಖ ಪತ್ರಿಕೆಯೊಂದು ಪ್ರಕಟಿಸಿದ ವ್ಯಾಪಾರಿ ಅಂಕಿಅಂಶಗಳ ವಿಶ್ಲೇಷಣೆಯಲ್ಲಿ ಮೋದಿ ಸರ್ಕಾರ ಈಗಾಗಲೇ ಇಸ್ರೇಲ್‌ನ ಕಾಗ್ನೈಟ್ ಕಂಪನಿಯಿಂದ ಬೇಹುಗಾರಿಕೆ ಸಾಫ್ಟ್‌ವೇರ್ ಖರೀದಿಸಿದೆ ಎಂಬ ಮಾಹಿತಿಯಿದೆ. ಪೆಗಾಸಸ್ ಕಂಪನಿಯನ್ನು ಬಹುತೇಕ ದೇಶಗಳು ಕಪ್ಪುಪಟ್ಟಿಗೆ ಸೇರಿಸಿದ ನಂತರ ಭಾರತ ಸರ್ಕಾರ ಹೊಸ ಸಾಫ್ಟ್‌ವೇರ್ ಹುಡುಕುತ್ತಿದೆ’ ಎಂದು ಹೇಳಿದ್ದಾರೆ.
ಇದನ್ನು ಓದಿ: ದಿವಾಳಿ ಪಾಕ್‌ಗೆ ಮೋದಿ ಆರ್ಥಿಕ ಸಹಾಯ ಮಾಡ್ಬಹುದು: ‘ರಾ’ ಮಾಜಿ ಮುಖ್ಯಸ್ಥ ದುಲತ್ ವಿಶ್ವಾಸ
100 ದೇಶಗಳಲ್ಲಿ ಕಾಗ್ನೈಟ್ ಕೆಲಸ:
‘ಇಸ್ರೇಲ್ ಮೂಲದ ಕಾಗ್ನೈಟ್ ಕಂಪನಿ 100ಕ್ಕೂ ಹೆಚ್ಚು ದೇಶಗಳಲ್ಲಿ ಕೆಲಸ ಮಾಡುತ್ತಿದೆ. ಅದು 400ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳನ್ನು, 600ಕ್ಕೂ ಹೆಚ್ಚು ಖಾಸಗಿ ಕಂಪನಿಗಳನ್ನು ಗ್ರಾಹಕರನ್ನಾಗಿ ಹೊಂದಿದೆ. ಭಾರತ ಹಾಗೂ ಕಾಗ್ನೈಟ್ ಕಂಪನಿ ನಡುವೆ 986 ಕೋಟಿ ರೂ. ವ್ಯವಹಾರ ನಡೆದಿದೆ. ಭಾರತದಲ್ಲಿ ಕಂಪನಿಯ ನೋಂದಾಯಿತ ಕಚೇರಿ ದೆಹಲಿಯ ಭಿಕಾಜಿ ಕಾಮಾ ಭವನ್‌ನಲ್ಲಿದೆ. ಈ ಕಂಪನಿಯ ಸಾಫ್ಟ್‌ವೇರ್ ಬಳಸಿ ಜನರಿಗೆ ಗೊತ್ತಿಲ್ಲದಂತೆ ಅವರ ಫೋನ್‌ಗಳನ್ನು ಕದ್ದಾಲಿಸಬಹುದು, ಇ-ಮೇಲ್‌ಗಳನ್ನು ನೋಡಬಹುದು ಹಾಗೂ ಅವರು ಇರುವ ಜಾಗ ತಿಳಿದುಕೊಳ್ಳಬಹುದು. ಟೆಲಿಕಾಂ ಹಾಗೂ ಇಂಟರ್ನೆಟ್‌ನ ಸಹಾಯವಿಲ್ಲದೆಯೂ ಈ ಸಾಫ್ಟ್‌ವೇರ್ ಕೆಲಸ ಮಾಡುತ್ತದೆ’ ಎಂದು ‘ಸಂಡೇ ಗಾರ್ಡಿಯನ್’ ಪತ್ರಿಕಾ ವರದಿ ತಿಳಿಸಿದೆ.
ಇದನ್ನೂ ಓದಿ: ಡ್ರ್ಯಾಗನ್ ರಾಷ್ಟ್ರದ ಮೇಲೆ ಮತ್ತೆ ಬ್ರಹ್ಮಾಸ್ತ್ರ: ಚೀನಾ ಲಿಂಕ್ ಹೊಂದಿರುವ 138 ಬೆಟ್ಟಿಂಗ್, 94 ಲೋನ್ ಆ್ಯಪ್ ನಿಷೇಧ..!