ಗರ್ಬಾ ನೃತ್ಯದ ಕಾಂಡೋಮ್ ಜಾಹೀರಾತು, ಧಾರ್ಮಿಕ ಭಾವನೆ ಧಕ್ಕೆ ಆರೋಪ ನಿರಾಕರಿಸಿದ ಹೈಕೋರ್ಟ್!
ಕಾಂಡೋಮ್ ಜಾಹೀರಾತೊಂದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಗರ್ಬಾ ನೃತ್ಯ ಇರುವ ಕಾಂಡೋಮ್ ಜಾಹೀರಾತು ಧಾರ್ಮಿಕ ಭಾವನೆಗೆ ಧಕ್ಕೆ ತರುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಇಷ್ಟೇ ಅಲ್ಲ ಈ ಜಾಹೀರಾತು ಹಂಚಿಕೊಂಡಿದ್ದ ಔಷಧ ವ್ಯಾಪಾರಿ ಮೇಲಿನ ಎಫ್ಐಆರ್ ರದ್ದುಗೊಳಿಸಿದೆ.

ಇಂದೋರ್(ಡಿ.29): ಪ್ರತಿ ಬಾರಿ ಕಾಂಡೋಮ್ ಜಾಹೀರಾತು ಭಾರಿ ಸದ್ದು ಮಾಡುತ್ತದೆ. ಬಹುತೇಕ ಕಾಂಡೋಮ್ ಜಾಹೀರಾತುಗಳು ಅತ್ಯಂತ ಕ್ರಿಯಾತ್ಮಕವಾಗಿ ರಚಿಸಲಾಗಿರುತ್ತದೆ. ಇದರ ಜೊತೆಗೆ ಕಾಂಡೋಮ್ ಜಾಹೀರಾತಿಗಳು ಒಂದಲ್ಲ ಒಂದು ವಿವಾದಕ್ಕೂ ಕಾರಣವಾಗಿದೆ. ಇದೀಗ ಗುಜರಾತ್‌ನ ಸಂಪ್ರಾದಾಯಿಕ ಗರ್ಬಾ ನೃತ್ಯ ಬಳಸಿ ನಿರ್ಮಿಸಿದ ಕಾಂಡೋಮ್ ಜಾಹೀರಾತನ್ನು ಹಂಚಿಕೊಂಡ ಔಷಧಿ ವ್ಯಾಪಾರಿ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಪಡಿಸಲಾಗಿದೆ. ಇಷ್ಟೇ ಅಲ್ಲ ಗರ್ಬಾ ನೃತ್ಯ ಒಳಗೊಂಡ ಕಾಂಡೋಮ್ ಜಾಹೀರಾತು ಧಾರ್ಮಿಕ ಭಾವನೆಗೆ ಧಕ್ಕೆ ತರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಜಸ್ಟೀಸ್ ಸತ್ಯೇಂದ್ರ ಕುಮಾರ್ ಸಿಂಗ್ ನೇತೃತ್ವದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ. ಗರ್ಬಾ ನೃತ್ಯ ಮಾಡುವ ಜೋಡಿಯ ಜಾಹೀರಾತಿನಲ್ಲಿ ವೀಕೆಂಡ್ ಆಫರ್, ಮೂರು ಪ್ಯಾಕ್ ಕಾಂಡೋಮ್ ಖರೀದಿಸಿದರೆ, ಗರ್ಭಧಾರಣೆ ಪರೀಕ್ಷಾ ಕಿಟ್ ಉಚಿತ ಎಂದು ಹೇಳಲಾಗಿದೆ. ಕಾಂಡೋಮ್ ಕುರಿತ ಈ ಜಾಹಿರಾತಿನಲ್ಲಿ ಗರ್ಬಾ ನೃತ್ಯ ಬಳಸಲಾಗಿದೆ. ಈ ಜಾಹೀರಾತನ್ನು ಔಷಧ ವ್ಯಾಪಾರಿ ಸಾಮಾಜಿಕ ಜಾಲತಾಣ ಖಾತೆ ಹಾಗೂ ವ್ಯಾಟ್ಸ್ಆ್ಯಪ್ ಮೂಲಕ ಹಲವರ ಜೊತೆ ಹಂಚಿಕೊಂಡಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿತ್ತು.
ಫ್ರಾನ್ಸ್‌ನಲ್ಲಿ 18ರಿಂದ 25 ವರ್ಷದ ಮಕ್ಕಳಿಗೆ ಕಾಂಡೋಮ್ ಫ್ರೀ
ಔಷಧ ವ್ಯಾಪಾರಿ ಗುಜರಾತ್ ಸಂಪ್ರದಾಯಿಕ ನೃತ್ಯ ಗರ್ಬಾಗೆ ಅವಮಾನ ಮಾಡಿದ್ದಾರೆ. ಇದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ವ್ಯಾಪಾರಿ ಉದ್ದೇಶಕಪೂರ್ವಕವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಈ ಕೆಲಸ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಜಸ್ಟೀಸ್ ಸತ್ಯೇಂದ್ರ ಕುಮಾರ್ ಸಿಂಗ್, ಕೆಲ ಮಹತ್ವದ ಅಂಶಗಳ ಕುರಿತು ಬೆಳಕು ಚೆಲ್ಲಿದ್ದಾರೆ.
ಔಷಧ ವ್ಯಾಪಾರಿ ಹಂಚಿಕೊಂಡಿರುವ ಜಾಹೀರಾತು ಅಶ್ಲೀಲವಾಗಿ ಕಾಣಿಸುತ್ತಿಲ್ಲ. ಪ್ರಮುಖವಾಗಿ ವ್ಯಾಪಾರಿ ಹಿಂದೂ ಸಮುದಾಯವರೇ ಆಗಿದ್ದಾರೆ. ಇವರಿಗೆ ಹಿಂದೂ ಸಮುದಾಯಕ್ಕೆ ಧಕ್ಕೆ ತರುವ ಉದ್ದೇಶ ಕಾಣಿಸುತ್ತಿಲ್ಲ. ವ್ಯಾಪಾರ ದೃಷ್ಟಿಯಿಂದ ಜಾಹೀರಾತನ್ನು ಹಂಚಿಕೊಂಡಿದ್ದಾರೆ. ಕಂಪನಿ ಉತ್ಪನ್ನವನ್ನು ಪ್ರಚಾರ ಮಾಡಿದ್ದಾರೆ. ಇಷ್ಟೇ ಅಲ್ಲ ಅಲ್ಲ ವ್ಯಾಪಾರಿ ತಮ್ಮ ಗುರುತು ಮರೆ ಮಾಚಿ, ರಹಸ್ಯ ಹೆಸರಿನಲ್ಲಿ, ರಹಸ್ಯವಾಗಿ ವಿಡಿಯೋ ಹಂಚಿಕೊಂಡಿಲ್ಲ. ತಮ್ಮದೇ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ವ್ಯಾಪಾರದ ಉದ್ದೇಶ ಸ್ಪಷ್ಟವಾಗಿದೆ ಎಂದು ಕೋರ್ಟ್ ಹೇಳಿದೆ.
ಈ ಜಾಹೀರಾತು ಅಶ್ಲೀಲ, ಧಾರ್ಮಿಕ ಭಾವನೆಗೆ ಧಕ್ಕೆ ಅನ್ನೋ ಆರೋಪವನ್ನು ಕೋರ್ಟ್ ತಳ್ಳಿ ಹಾಕಿದೆ. ಪ್ರಸಾರ ಮಾಡದಂತೆ ಯಾವುದೇ ಅಂಶಗಳು ಈ ಜಾಹೀರಾತಿನಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯದ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಹೀಗಾಗಿ ಔಷಧ ವ್ಯಾಪಾರಿಯ ಮೇಲಿನ ಎಫ್ಐಎರ್ ರದ್ದುಗೊಳಿಸಿ, ಪ್ರಕರಣವನ್ನು ರದ್ದುಗೊಳಿಸುತ್ತಿರುವುದಾಗಿ ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
ಸ್ವಿಗ್ಗಿಯಲ್ಲಿ ಜನರು ಹೆಚ್ಚು ಆರ್ಡರ್ ಮಾಡಿರೋದು ಆಹಾರವನ್ನಲ್ಲ, ಇದನ್ನಂತೆ !
ನವರಾತ್ರಿ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅಭಿನಯದ ಲವ್ ರಾತ್ರಿ ಚಿತ್ರ ಬಿಡುಗಡೆಗೆ ವ್ಯಕ್ತವಾಗಿದ್ಧ ವಿರೋಧ ಕುರಿತು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಲವ್ ರಾತ್ರಿ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಟ್ಟ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ಇದೀಗ ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.