ಭಾರತದಲ್ಲಿ ಕಮ್ಯುನಿಸ್ಟ್ ಸಿದ್ಧಾಂತವು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿದೆ. ಪಶ್ಚಿಮ ಬಂಗಾಳದ ನಂತರ, ಕಮ್ಯುನಿಸ್ಟರ ಕೊನೆಯ ಭದ್ರಕೋಟೆಯಾದ ಕೇರಳದಲ್ಲೂ ಎಡಪಕ್ಷಗಳು ಅಧಿಕಾರ ಕಳೆದುಕೊಳ್ಳುವ ಹಂತ ತಲುಪಿವೆ.

ಬೆಂಗಳೂರು (ಮೇ.4): ಭಾರತದ ರಾಜಕೀಯ ಇತಿಹಾಸದಲ್ಲಿ ದಶಕಗಳ ಕಾಲ ತನ್ನದೇ ಆದ ಛಾಪು ಮೂಡಿಸಿದ್ದ ಕಮ್ಯುನಿಷ್ಟ್ ಸಿದ್ಧಾಂತಕ್ಕೆ ಭಾರತದ ಮತದಾರರು ಈಗ ಸಂಪೂರ್ಣವಾಗಿ 'ಗುಡ್‌ಬೈ' ಹೇಳುತ್ತಿರುವ ಲಕ್ಷಣಗಳು ಕಾಣುತ್ತಿವೆ. ಹೌದು, ಭಾರತದ ರಾಜಕೀಯ ಭೂಪಟದಲ್ಲಿ ಕೆಂಪು ಬಣ್ಣ ಮಾಸುತ್ತಿದೆ. 2026ರ ವಿಧಾನಸಭಾ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್‌ಗಳನ್ನು ಗಮನಿಸಿದರೆ, ಕಮ್ಯುನಿಷ್ಟರ ಕೊನೆಯ ಭದ್ರಕೋಟೆ ಎನಿಸಿಕೊಂಡಿದ್ದ ಕೇರಳ ಕೂಡ ಈಗ ಅವರ ಕೈತಪ್ಪಿ ಹೋಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ನೆಲಕಚ್ಚಿದ್ದ ಎಡಪಕ್ಷಗಳು, ಈಗ ಕೇರಳದಲ್ಲೂ ಅಧಿಕಾರ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಕಮ್ಯುನಿಷ್ಟ್ ಮುಕ್ತ ಭಾರತದತ್ತ ಮತದಾರರು ಮುಖ ಮಾಡಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

ಕೇರಳದ ಕೊನೆಯ ಕೋಟೆಯೂ ಪತನ!

ಕಳೆದ ಐದು ದಶಕಗಳಿಂದ ಕೇರಳದ ರಾಜಕೀಯದಲ್ಲಿ ಅಧಿಪತ್ಯ ಸಾಧಿಸಿದ್ದ ಎಲ್‌ಡಿಎಫ್ (LDF) ಈ ಬಾರಿ ಭಾರಿ ಹಿನ್ನಡೆ ಅನುಭವಿಸಿದೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) 90ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಬಹುಮತದ ಗಡಿ ದಾಟಿದೆ. ಹಾಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಧರ್ಮದಂ ಕ್ಷೇತ್ರದಲ್ಲೇ ಯುಡಿಎಫ್ ಅಭ್ಯರ್ಥಿ ಮುನ್ನಡೆ ಸಾಧಿಸಿರುವುದು ಕಮ್ಯುನಿಷ್ಟರಿಗೆ ಅತಿದೊಡ್ಡ ಆಘಾತ ನೀಡಿದೆ.

ಬಂಗಾಳದಲ್ಲಿ ಹೇಳಹೆಸರಿಲ್ಲದ ಎಡಪಕ್ಷಗಳು

34 ವರ್ಷಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ್ದ ಸಿಪಿಎಂ, ಇಂದು ಅಲ್ಲಿ ಕೇವಲ ಇತಿಹಾಸದ ಪುಟಗಳಿಗೆ ಸೀಮಿತವಾಗಿದೆ. ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಅಬ್ಬರದ ನಡುವೆ ಕಮ್ಯುನಿಷ್ಟರು ಅಂಚೆ ಮತಗಳ ಎಣಿಕೆಯಲ್ಲೂ ಖಾತೆ ತೆರೆಯಲು ಪರದಾಡುತ್ತಿದ್ದಾರೆ. ತ್ರಿಪುರಾದಲ್ಲೂ ಈಗಾಗಲೇ ಅಧಿಕಾರ ಕಳೆದುಕೊಂಡಿರುವ ಇವರಿಗೆ, ದೇಶದಲ್ಲಿ ಈಗ "ತನ್ನದು" ಎನ್ನಲು ಒಂದೇ ಒಂದು ರಾಜ್ಯವೂ ಉಳಿದಿಲ್ಲ.

ನಕ್ಸಲಿಸಮ್ ಅಂತ್ಯದ ಬೆನ್ನಲ್ಲೇ ರಾಜಕೀಯ ಅವನತಿ

ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದ ಎಕ್ಸ್‌ಟ್ರೀಮ್ ನಕ್ಸಲಿಸಮ್ (Extreme Naxalism) ಈಗಾಗಲೇ ದೇಶದಲ್ಲಿ ಬಹುತೇಕ ಕಾಲ್ಕಿತ್ತಿದೆ. ಗೃಹ ಸಚಿವಾಲಯದ ಬಿಗಿ ಕ್ರಮಗಳಿಂದ ನಕ್ಸಲೀಯರ ಪ್ರಭಾವ ಕುಗ್ಗಿರುವ ಬೆನ್ನಲ್ಲೇ, ಪ್ರಜಾಪ್ರಭುತ್ವದ ಹಾದಿಯಲ್ಲಿರುವ ಕಮ್ಯುನಿಷ್ಟ್ ರಾಜಕೀಯ ಪಕ್ಷಗಳೂ ಮತದಾರರ ವಿಶ್ವಾಸ ಕಳೆದುಕೊಳ್ಳುತ್ತಿವೆ. ಕಮ್ಯುನಿಷ್ಟರ ಸಿದ್ಧಾಂತಕ್ಕೂ ಇಂದಿನ ಯುವ ಭಾರತದ ಆಕಾಂಕ್ಷೆಗಳಿಗೂ ತಾಳೆಯಾಗುತ್ತಿಲ್ಲ ಎಂಬುದು ಈ ಚುನಾವಣಾ ಫಲಿತಾಂಶಗಳಿಂದ ಸಾಬೀತಾಗುತ್ತಿದೆ.

ಕೆಂಪು ಸಿದ್ಧಾಂತಕ್ಕೆ ಭಾರತ ಮರಣಶಾಸನ

ಕೇರಳದದಲ್ಲಿ ಆಡಳಿತ ವಿರೋಧಿ ಅಲೆ ಮತ್ತು ಭ್ರಷ್ಟಾಚಾರದ ಆರೋಪಗಳಿಂದ ಎಲ್‌ಡಿಎಫ್ ತತ್ತರಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟದ ನೆರಳಿನಲ್ಲಿ ಬದುಕುತ್ತಿರುವ ಕಮ್ಯುನಿಷ್ಟರು ಅಲ್ಲಿ ಸ್ವತಂತ್ರ ಅಸ್ತಿತ್ವ ಹೊಂದಿಲ್ಲ. ಒಂದು ಕಾಲದಲ್ಲಿ ಕೇಂದ್ರ ಸರ್ಕಾರದಲ್ಲಿ ಪಾತ್ರ ಹೊಂದಿರುತ್ತಿದ್ದ ಎಡಪಕ್ಷಗಳು ಇಂದು ಸಂಸತ್ತಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಸ್ಥಾನಗಳಿಗೆ ಸೀಮಿತವಾಗಿವೆ.

ಭಾರತದ ಮತದಾರರು ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ಅಭಿವೃದ್ಧಿ ಮತ್ತು ಹೊಸ ಚಿಂತನೆಗಳಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಹಳೆಯ 'ಕ್ರಾಂತಿ'ಯ ಮಾತುಗಳು ಇಂದು ಮತಗಳಾಗಿ ಪರಿವರ್ತನೆಯಾಗುತ್ತಿಲ್ಲ. ಇದ್ದ ಒಂದು ರಾಜ್ಯವನ್ನೂ ಕಳೆದುಕೊಳ್ಳುವ ಹಂತಕ್ಕೆ ತಲುಪಿರುವ ಕಮ್ಯುನಿಷ್ಟರಿಗೆ ಈ ಬಾರಿಯ ಫಲಿತಾಂಶ ಅಕ್ಷರಶಃ "ಮರಣಶಾಸನ"ದಂತೆ ಭಾಸವಾಗುತ್ತಿದೆ.