*ರಾಮನವಮಿ ಬಳಿಕ ಇದೀಗ ಹನುಮಯಾತ್ರೆಯ ಮೇಲೂ ದಾಳಿ*ದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ ಶೋಭಾಯಾತ್ರೆ ವೇಳೆ ದುಷ್ಕೃತ್ಯ 

ನವದೆಹಲಿ (ಏ. 17): ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ರಾಮನವಮಿ ಯಾತ್ರೆ ವೇಳೆ ನಡೆದಿದ್ದ ಹಿಂಸಾಚಾರ ಇದೀಗ ದೆಹಲಿಯಲ್ಲಿ ಹನುಮ ಜಯಂತಿ ಯಾತ್ರೆಗೂ ವಿಸ್ತರಣೆಯಾಗಿದೆ. ಶನಿವಾರ ಹನುಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶೋಭಾಯಾತ್ರೆ ವೇಳೆ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಕಲ್ಲು ತೂರಾಟ, ಗುಂಡಿನ ದಾಳಿ ನಡೆಸಲಾಗಿದೆ. ಜೊತೆಗೆ ಗುಂಪೊಂದು ಕೈಯಲ್ಲಿ ಖಡ್ಗ, ತಲ್ವಾರ್‌ ಹಿಡಿದು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದವರು ಮತ್ತು ಪೊಲೀಸರಿಗೆ ಬೆದರಿಕೆ ಹಾಕಿದೆ.

ಜೊತೆಗೆ ದುಷ್ಕರ್ಮಿಗಳ ಗುಂಪು ಹಲವು ವಾಹನಗಳ ಮೇಲೂ ದಾಳಿ ನಡೆಸಿದ್ದು, ಅವು ಧ್ವಂಸವಾಗಿದೆ. ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ದೆಹಲಿಯಾದ್ಯಂತ ಹೈಅಲರ್ಚ್‌ ಘೋಷಿಸಲಾಗಿದೆ. ನಗರದಾದ್ಯಂತ ಹೆಚ್ಚುವರಿ ಪೊಲೀಸರ ನಿಯೋಜಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾರಾದರೂ ಶಾಂತಿಗೆ ಭಂಗ ತರುವ ಯತ್ನ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಇದನ್ನೂ ಓದಿ:ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ, ಆರೋಪಿಗಳಿಗೆ ಬುಲ್ಡೋಜರ್ ಡ್ರಿಲ್!

ಮಚ್ಚು ತಲ್ವಾರ್‌ ಹಿಡಿದು ಬೆದರಿಕೆ: ಶೋಭಾಯಾತ್ರೆ ವೇಳೆ ಕಲ್ಲು ತೂರಾಟ, ಹಿಂಸಾಚಾರ ನಡೆಸಿದ ಬಳಿಕ ದುಷ್ಕರ್ಮಿಗಳ ಗುಂಪು ಕೈಯಲ್ಲಿ ತಲ್ವಾರ್‌, ಮಚ್ಚು ಹಿಡಿದು ಸ್ಥಳದಲ್ಲಿದ್ದವರಿಗೆ ಬೆದರಿಕೆ ಹಾಕಿದೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಗೋವಾ, ಗುಜರಾತ್‌, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್‌, ಪಶ್ಚಿಮ ಬಂಗಾಳದಲ್ಲಿ ಕೂಡ ರಾಮನವಮಿ ವೇಳೆ ಹಿಂಸಾಚಾರ ನಡೆದಿದೆ

ಕಠಿಣ ಕ್ರಮಕ್ಕೆ ಶಾ ಸೂಚನೆ: ಶನಿವಾರದ ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಶಾ, ಹಿಂಸೆ ಮರುಕಳಿಸದಂತೆ ಕ್ರಮಕ್ಕೆ ಸೂಚಿಸಿದ್ದಾರೆ.