ನವದೆಹಲಿ(ಜ.22): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸೇರಿ 8 ರಾಜ್ಯಗಳ ರೈತ ಸಂಘಟನೆಗಳ ಜೊತೆ, ಸುಪ್ರೀಂಕೋರ್ಟ್‌ ರಚಿಸಿರುವ ಸಮಿತಿ ಗುರುವಾರದಿಂದ ಸಮಾಲೋಚನೆಯನ್ನು ಆರಂಭಿಸಿದೆ.

ಸುಪ್ರೀಂಕೋರ್ಟ್‌ ಜ.11ರಂದು ನೂತನ ಮೂರು ಕೃಷಿ ಕಾಯ್ದೆಗಳ ಜಾರಿಗೆ ತಡೆ ನೀಡಿ ರೈತರ ಜೊತೆಗಿನ ಸಮಾಲೋಚನೆಗೆ ನಾಲ್ವರು ಸದಸ್ಯರ ಸಮಿತಿಯನ್ನು ರಚನೆ ಮಾಡಿತ್ತು. ಸದ್ಯ ಈ ಸಮಿತಿಯಲ್ಲಿ ಮೂವರು ಸದಸ್ಯರಷ್ಟೇ ಇದ್ದು, ವಿವಿಧ ರೈತ ಸಂಘಟನೆಗಳ ಜೊತೆ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಸಮಾಲೋಚನೆ ನಡೆಸಿದ್ದಾರೆ.

ಮೊದಲ ದಿನದಂದು ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ತಮಿಳುನಾಡು ಮತ್ತು ಉತ್ತರ ಪ್ರದೇಶದ ರೈತ ಸಂಘಟನೆಗಳು ಸಮಿತಿಯ ಸದಸ್ಯರ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ರೈತ ಸಂಘಟನೆಗಳು ಮುಕ್ತ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಕಾಯ್ದೆಗಳ ಸುಧಾರಣೆಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ ಎಂದು ಸಮಿತಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.