ನವದೆಹಲಿ (ಮಾ.19) : ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವ ಬಗ್ಗೆ ಸುಪ್ರೀಂಕೋರ್ಟ್‌ನ ಕೊಲಿಜಿಯಂನಲ್ಲಿ ಭಿನ್ನಮತ ಉಂಟಾಗಿದೆ ಎಂದು ತಿಳಿದುಬಂದಿದೆ. ನಾಗರತ್ನ ಅವರಿಗೆ ಬಡ್ತಿ ನೀಡಿದರೆ ಅವರಿಗಿಂತ ಹಿರಿಯರಾಗಿರುವ ದೇಶದ ಅನೇಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಕಡೆಗಣಿಸಿದಂತಾಗುತ್ತದೆ ಎಂದು ಕೊಲಿಜಿಯಂನ ಐವರು ನ್ಯಾಯಮೂರ್ತಿಗಳಲ್ಲಿ ಕೆಲವರು ಆಕ್ಷೇಪಿಸಿದ್ದಾರೆ ಎಂದು ಹೇಳಲಾಗಿದೆ.

ನ್ಯಾ.  ನಾಗರತ್ನ ಅವರು ಈಗಲೇ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರೆ 2027ರಲ್ಲಿ ಭಾರತದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಲಿದ್ದಾರೆ. 2027ರಲ್ಲಿ ನ್ಯಾ.ಸೂರ್ಯಕಾಂತ್‌ ಸಿಜೆಐ ಹುದ್ದೆಯಿಂದ ನಿವೃತ್ತರಾದ ಮೇಲೆ ಹಿರಿತನದ ಆಧಾರದಲ್ಲಿ ನ್ಯಾ. ನಾಗರತ್ನ ಆ ಹುದ್ದೆ ಅಲಂಕರಿಸುತ್ತಾರೆ. 

ಶೇ.50 ಮೀಸಲು ಮಿತಿ ಹೆಚ್ಚಿಸಬೇಕೆ? ಸುಪ್ರೀಂ ವಿಚಾರಣೆ ಶುರು

ಆದರೆ, ನಾಗರತ್ನ ಅವರಿಗೆ ಈಗ ಮಹಿಳಾ ಕೋಟಾದಲ್ಲಿ ಸುಪ್ರೀಂಕೋರ್ಟ್‌ಗೆ ಬಡ್ತಿ ನೀಡಿದರೂ ಕರ್ನಾಟಕದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಹಾಗೂ ಇನ್ನಿಬ್ಬರು ಹಿರಿಯ ಜಡ್ಜ್‌ಗಳಾದ ನ್ಯಾ.  ಎಲ್‌.ನಾರಾಯಣಸ್ವಾಮಿ (ಸದ್ಯ ಹಿಮಾಚಲ ಸಿಜೆ) ಹಾಗೂ ನ್ಯಾ.ರವಿ.ವಿ.ಮಳಿಮಠ್‌ (ಸದ್ಯ ಹಿಮಾಚಲ ಹೈಕೋರ್ಟ್‌ನ ಹಿರಿಯ ಜಡ್ಜ್‌) ಅವರನ್ನು ಕಡೆಗಣಿಸಿದಂತಾಗುತ್ತದೆ ಎಂದು ಕೊಲಿಜಿಯಂನ ಕೆಲ ಜಡ್ಜ್‌ಗಳು ಹೇಳಿದ್ದಾರೆ. ಹೀಗಾಗಿ ಒಮ್ಮತಕ್ಕೆ ಬರುವಲ್ಲಿ ಕೊಲಿಜಿಯಂ ವಿಫಲವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಸುಪ್ರೀಂಕೋರ್ಟ್‌ನಲ್ಲಿ ಏಕೈಕ ಮಹಿಳಾ ಜಡ್ಜ್‌ ಇಂದಿರಾ ಬ್ಯಾನರ್ಜಿ ಇದ್ದಾರೆ.

ಕೊಲಿಜಿಯಂನಲ್ಲಿ ಸ್ವತಃ ಸಿಜೆಐ ಬೋಬ್ಡೆ ಹಾಗೂ ಇನ್ನೊಬ್ಬ ಜಡ್ಜ್‌ ಅವರು ನಾಗರತ್ನ ಅವರ ಹೆಸರನ್ನು ಮಂಡಿಸಿದ್ದಾರೆ. ಆಗ ಕೆಲ ಜಡ್ಜ್‌ಗಳು ನಾಗರತ್ನ ಹೆಸರನ್ನು ಪರಿಗಣಿಸುವುದಾದರೆ ಓಕ ಅವರ ಜೊತೆಗೇ ಪರಿಗಣಿಸಬೇಕು ಎಂದಿದ್ದಾರೆ. ಆದರೆ, ಹಾಗೆ ಮಾಡಿದರೆ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಗಳಿಗೆ ನೀಡುವ ಪ್ರಾದೇಶಿಕ ಪ್ರಾತಿನಿಧ್ಯದಲ್ಲಿ ಅಸಮತೋಲನವಾಗುತ್ತದೆ. ಏಕೆಂದರೆ, ನ್ಯಾ . ನಾಗರತ್ನ ಅವರನ್ನು ಸುಪ್ರೀಂಕೋರ್ಟ್‌ಗೆ ನೇಮಿಸಿದರೆ ಕರ್ನಾಟಕದ ನಾಲ್ವರು ಜಡ್ಜ್‌ಗಳು ಸುಪ್ರೀಂಕೋರ್ಟ್‌ನಲ್ಲಿ ಇದ್ದಂತಾಗುತ್ತದೆ. ಓಕ ಅವರ ಹೆಸರನ್ನು ಪರಿಗಣಿಸಿದರೆ ಮಹಾರಾಷ್ಟ್ರದಿಂದ ಐವರು ಜಡ್ಜ್‌ ಇದ್ದಂತಾಗುತ್ತದೆ. ನ್ಯಾ

ನಾಗರತ್ನ ಹೆಸರನ್ನು ಪರಿಗಣಿಸಿದರೆ ಸದ್ಯ ದೇಶದ ಎಲ್ಲಾ ಹೈಕೋರ್ಟ್‌ಗಳ ಪೈಕಿ ಅತ್ಯಂತ ಹಿರಿಯ ಮಹಿಳಾ ಜಡ್ಜ್‌ ಆಗಿರುವ ಹಿಮಾ ಕೊಹ್ಲಿ (ಹಾಲಿ ತೆಲಂಗಾಣ ಸಿಜೆ) ಅವರನ್ನು ಕಡೆಗಣಿಸಿದಂತಾಗುತ್ತದೆ. ಹಿಮಾ ಕೊಹ್ಲಿಗೆ ಬಡ್ತಿ ನೀಡಿದರೆ ಅವರ ಮಾತೃ ಕೋರ್ಟ್‌ ದೆಹಲಿಯಾಗಿರುವುದರಿಂದ ದೆಹಲಿಯ ನಾಲ್ವರು ಜಡ್ಜ್‌ಗಳು ಸುಪ್ರೀಂಕೋರ್ಟ್‌ಗೆ ಬಂದಂತಾಗುತ್ತದೆ.

ಈ ಎಲ್ಲ ಕಾರಣಗಳಿಂದ ಕೊಲಿಜಿಯಂ ಸದಸ್ಯರು ಇಕ್ಕಟ್ಟಿಗೆ ಸಿಲುಕಿದ್ದು, ನ್ಯಾ . ನಾಗರತ್ನ ಹಾಗೂ . ಓಕ ಅವರ ಬಗೆಗಿನ ಚರ್ಚೆಯನ್ನು ಹಿನ್ನೆಲೆಗೆ ಸರಿಸಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ 34 ಜಡ್ಜ್‌ ಹುದ್ದೆಗಳಿದ್ದು, ಸದ್ಯ 5 ಹುದ್ದೆ ಖಾಲಿಯಿದೆ. ಏ.24ರಂದು ಹಾಲಿ ಸಿಜೆಐ ಬೋಬ್ಡೆ ನಿವೃತ್ತಿಯಾಗುತ್ತಾರೆ. ಅಷ್ಟರೊಳಗೆ ಮತ್ತೊಮ್ಮೆ ಕೊಲಿಜಿಯಂ ಸಭೆ ನಡೆಯುವುದು ಅನುಮಾನವಿದೆ. ಶಿಷ್ಟಾಚಾರದ ಪ್ರಕಾರ ಸಿಜೆಐ ತಮ್ಮ ನಿವೃತ್ತಿಗೆ ಒಂದು ತಿಂಗಳು ಮೊದಲೇ ಉತ್ತರಾಧಿಕಾರಿಯ ಹೆಸರನ್ನು ಶಿಫಾರಸು ಮಾಡಿ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಅದಕ್ಕೂ ಮೊದಲು ಕೊಲಿಜಿಯಂ ಸಭೆ ನಡೆಸಿ ಸುಪ್ರೀಂಕೋರ್ಟ್‌ಗೆ ಕೆಲ ಜಡ್ಜ್‌ಗಳ ನೇಮಕಕ್ಕೆ ಶಿಫಾರಸು ಮಾಡಲಾಗುತ್ತದೆ. ನಂತರ ಸಿಜೆಐ ನಿವೃತ್ತಿಯಾಗುವವರೆಗೂ ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ಗೆ ಜಡ್ಜ್‌ಗಳನ್ನು ಆಯ್ಕೆ ಮಾಡುವ ಕೊಲಿಜಿಯಂ ಸಭೆಯಲ್ಲಿ ಭಾಗವಹಿಸುವುದಿಲ್ಲ.