ಶೇ.50 ಮೀಸಲು ಮಿತಿ ಹೆಚ್ಚಿಸಬೇಕೆ? ಸುಪ್ರೀಂ ವಿಚಾರಣೆ ಶುರು
ಶೇ.50 ಮೀಸಲು ಮಿತಿ ಹೆಚ್ಚಿಸಬೇಕೆ? ಸುಪ್ರೀಂ ವಿಚಾರಣೆ ಶುರು| ಅಭಿಪ್ರಾಯ ತಿಳಿಸಲು ರಾಜ್ಯಗಳಿಗೆ ಇನ್ನೊಂದು ವಾರ ಅವಕಾಶ| 1992ರ ತೀರ್ಪು ಮರುಪರಿಶೀಲನೆ ಮಾಡಬೇಕೇ ಎಂದು ನಿಷ್ಕರ್ಷೆ
ನವದೆಹಲಿ(ಮಾ.16): ಶಿಕ್ಷಣ ಮತ್ತು ಉದ್ಯೋಗದ ಮೀಸಲಿನ ಒಟ್ಟು ಪ್ರಮಾಣ ಶೇ.50ನ್ನು ಮೀರಬಾರದು ಎಂಬ ಮೂರು ದಶಕಗಳ ಹಿಂದಿನ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದ ತೀರ್ಪನ್ನು ಮರುಪರಿಶೀಲನೆ ಮಾಡಬೇಕೇ ಬೇಡವೇ ಎಂಬ ಕುರಿತು ಸೋಮವಾರ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ಆರಂಭವಾಯಿತು. ಮೀಸಲು ಮಿತಿ ಹೆಚ್ಚಿಸುವ ಬಗ್ಗೆ ಅಭಿಪ್ರಾಯ ತಿಳಿಸಲು ಮಾ.8ರಂದು ರಾಜ್ಯ ಸರ್ಕಾರಗಳಿಗೆ ಒಂದು ವಾರದ ಕಾಲಾವಕಾಶ ನೀಡಿದ್ದ ನ್ಯಾಯಪೀಠ, ಈಗ ರಾಜ್ಯಗಳ ಮನವಿಯ ಮೇರೆಗೆ ಮತ್ತೊಂದು ವಾರದ ಕಾಲಾವಕಾಶ ನೀಡಿತು.
ಕೇರಳ ಹಾಗೂ ತಮಿಳುನಾಡಿನಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಆ ರಾಜ್ಯಗಳು ವಿಚಾರಣೆ ಮುಂದೂಡಬೇಕೆಂದು ಮನವಿ ಮಾಡಿದವು. ಅದಕ್ಕೆ ನ್ಯಾಯಪೀಠ ನಿರಾಕರಿಸಿ, ಒಂದು ವಾರದಲ್ಲಿ ಎಲ್ಲಾ ರಾಜ್ಯಗಳೂ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು.
ಮಂಡಲ್ ಆಯೋಗದ ವರದಿಯ ಪ್ರಕಾರ ಒಟ್ಟು ಮೀಸಲಿನ ಪ್ರಮಾಣ ಶೇ.50ನ್ನು ಮೀರುವಂತಿಲ್ಲ ಎಂದು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ 1992ರಲ್ಲಿ ತೀರ್ಪು ನೀಡಿತ್ತು. ಅದು ಇಂದಿರಾ ಸಾಹ್ನಿ ಪ್ರಕರಣ ಎಂದು ಪ್ರಸಿದ್ಧವಾಗಿದೆ. ಆದರೆ, 2018ರಲ್ಲಿ ಮಹಾರಾಷ್ಟ್ರ ಸರ್ಕಾರ ಮರಾಠರಿಗೆ ಹೊಸತಾಗಿ ಮೀಸಲು ನೀಡಿದಾಗ ರಾಜ್ಯದಲ್ಲಿ ಒಟ್ಟು ಮೀಸಲಾತಿಯ ಪ್ರಮಾಣ ಶೇ.50ನ್ನು ಮೀರಿತ್ತು. ಅದನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಇದೇ ವೇಳೆ, ಇನ್ನೂ ಅನೇಕ ರಾಜ್ಯಗಳಲ್ಲಿ ತಮಗೂ ಮೀಸಲಾತಿ ನೀಡಬೇಕೆಂದು ಅನೇಕ ಜಾತಿ ಸಮುದಾಯಗಳು ಹೋರಾಟ ನಡೆಸಿದ್ದವು. ಹೀಗಾಗಿ ಒಟ್ಟು ಮೀಸಲಾತಿಯ ಮಿತಿ ಪರಿಷ್ಕರಿಸಬೇಕೇ, ಪರಿಷ್ಕರಿಸಬಾರದೇ? 1992ರ ಪ್ರಕರಣದ ಮರುವಿಚಾರಣೆ ನಡೆಸಬೇಕೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಕಳೆದ ವಾರ ಸುಪ್ರೀಂಕೋರ್ಟ್‌ನಲ್ಲಿ ಸಾಂವಿಧಾನಿಕ ಪೀಠ ರಚಿಸಲಾಗಿತ್ತು.
ಸೋಮವಾರದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲ ಅರವಿಂದ ದಾತಾರ್ ವಾದ ಮಂಡಿಸಿ, ಮೀಸಲು ಮಿತಿ ಹೆಚ್ಚಿಸುವ ಅಗತ್ಯವಿಲ್ಲ. ಹೀಗಾಗಿ 1992ರ ಪ್ರಕರಣದ ಮರುಪರಿಶೀಲನೆಯ ಅಗತ್ಯವೂ ಇಲ್ಲ. ಅದನ್ನು ಮರುಪರಿಶೀಲನೆ ಮಾಡಲೇಬೇಕಿದ್ದರೆ 11 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚಿಸಬೇಕಾಗುತ್ತದೆ. ಈಗ ರಚನೆಯಾಗಿರುವ ಪೀಠದಿಂದ ಮರುಪರಿಶೀಲನೆ ಸಾಧುವಲ್ಲ ಎಂದು ಹೇಳಿದರು.