ಕಾಲೇಜು ರ್‍ಯಾಗಿಂಗ್‌ ಮತ್ತೆ ಆತಂಕದ ವಾತಾವರಣ ಸೃಷ್ಟಿಸಿದೆ. ಸುಡು ಬಿಸಿಲಿನಲ್ಲಿ ವಿದ್ಯಾರ್ಥಿಗೆ 350 ಪುಶ್ಅಪ್ ಮಾಡುವಂತೆ ರ್‍ಯಾಗಿಂಗ್‌ ಮಾಡಲಾಗಿದೆ. ಇದರ ಪರಿಣಾಮ ವಿದ್ಯಾರ್ಥಿ ಇದೀಗ ಡಯಾಲಿಸಿಸ್‌ಗೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಜೈಪುರ(ಜೂ.28): ರಾಜಸ್ಥಾನದ ಡುಂಗುರ್‌ಪುರದ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸುಡುಬಿಸಿಲಿನಲ್ಲಿ 350 ಪುಶ್‌ಅಪ್‌ ಮಾಡುವಂತೆ ರ್‍ಯಾಗಿಂಗ್‌ ಮಾಡಿದ ಘಟನೆ ನಡೆದಿದೆ. ಈ ವೇಳೆ ತೀವ್ರ ಆಯಾಸಗೊಂಡಿದ್ದ ಒಬ್ಬ ವಿದ್ಯಾರ್ಥಿ ಡಯಾಲಿಸಿಸ್‌ಗೆ ಒಳಗಾಗಬೇಕಾದ ಪರಿಸ್ಥಿತಿ ಎದುರಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮೇ 15ರಂದು ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್‌ ಹೆಸರಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ 350 ಪುಶ್‌ಅಪ್ಸ್‌ ಮಾಡುವಂತೆ ಸೂಚಿಸಿದ್ದು, ಅದರಂತೆ ಎಲ್ಲರೂ ಮಾಡಿದ್ದಾರೆ. ಅಷ್ಟು ಪುಶ್‌ಅಪ್‌ಗಳನ್ನು ಒಮ್ಮೆಲೆ ಮಾಡಿದ್ದರಿಂದ ಎಲ್ಲರೂ ದಣಿದಿದ್ದಾರೆ. ಅದರಲ್ಲಿ ಪ್ರಥಮ್‌ ವ್ಯಾಸ್‌ ಎಂಬ ವಿದ್ಯಾರ್ಥಿಗೆ ಮೂತ್ರಪಿಂಡ ಹಾಗೂ ಯಕೃತ್ತಿನಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಂಡಿದೆ.

ಸಲಿಂಗಿ ಎಂದು ಹೀಯಾಳಿಸ್ತಿದ್ದ ಸೀನಿಯರ್ಸ್‌: ಹಾಸ್ಟೆಲ್‌ ಬಾಲ್ಕನಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ

ಆತನನ್ನು ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಿದ್ದು, ಮೂರು ಬಾರಿ ಡಯಾಲಿಸಿಸ್‌ಗೆ ಒಳಪಡಿಸಿದ್ದಾರೆ. ಈಗ ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾನೆ. ಈ ಬಗ್ಗೆ ಆತನ ತಂದೆ ಕಾಲೇಜಿಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ. ರ್‍ಯಾಗಿಂಗ್‌ ಮಾಡಿದ ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಅಮಾನತು ಮಾಡಿದೆ.

ಈ ರೀತಿ ಹಲವು ಘಟನೆಗಳು ವರದಿಯಾಗಿದೆ. ಎಪ್ರಿಲ್ ತಿಂಗಳಲ್ಲಿ ವಯನಾಡಿನ ಪಶುವೈದ್ಯಕೀಯ ಕಾಲೇಜು ವಿದ್ಯಾರ್ಥಿ ಇದೇ ರ್‍ಯಾಗಿಂಗ್‌ ಕಾರಣಕ್ಕೆ ಬದುಕು ಅಂತ್ಯಗೊಳಿಸದ ಘಟನೆ ಭಾರಿ ಕೋಲಾಹಲ ಸೃಷ್ಟಿಸಿತ್ತು. ವಿದ್ಯಾರ್ಥಿಗೆ ತನ್ನ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಸತತ 29 ಗಂಟೆಗಳ ಕಾಲ ರ್‍ಯಾಗಿಂಗ್‌ ಮಾಡಿದ ಪರಿಣಾಮ ಆತ ತನ್ನ ಹಾಸ್ಟೆಲ್‌ನ ಬಾತ್‌ರೂಂನಲ್ಲಿ ಬದುಕು ಅಂತ್ಯಗೊಳಿಸಿದ್ದ.ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಫೆ.16ರ ಮುಂಜಾನೆ ಸುಮಾರು 9 ಗುಂಪೊಂದು ಅತಿಕ್ರಮವಾಗಿ ಪ್ರವೇಶಿಸಿ ರ್‍ಯಾಗಿಂಗ್‌ ಶುರು ಮಾಡಿಕೊಂಡಿದೆ. ಬಳಿಕ ಹಿಂಸೆ ತೀವ್ರವಾಗಿ ಮಾನಸಿಕ ಮತ್ತು ದೈಹಿಕ ಶೋಷಣೆಗೆ ತಿರುಗಿದೆ. ಈ ರೀತಿ ವಿದ್ಯಾರ್ಥಿಯನ್ನು ಮರುದಿನ ಅಂದರೆ ಫೆ.17ರ ಮಧ್ಯಾಹ್ನ 2 ಗಂಟೆಯವರೆಗೆ ನಿರಂತರವಾಗಿ 29 ಗಂಟೆಗಳ ಕಾಲ ಶೋಷಣೆ ಮಾಡಿ ಕ್ರೌರ್ಯ ಮೆರೆದಿತ್ತು.

ಕುಂಟ ಎಂದು ಅಪಹಾಸ್ಯ ಮಾಡಿದ್ದಕ್ಕೆ ಸ್ನೇಹಿತ ಮೇಲೆ ಇಟ್ಟಿಗೆ ಎತ್ತಿಹಾಕಿ ಹತ್ಯೆ: ಆರೋಪಿಗಳ ಬಂಧನ

ಮೊದಲಿಗೆ ಸ್ಥಳೀಯ ಪೊಲೀಸ್‌ ಠಾಣೆ ಸಲ್ಲಿಸಿದ್ದ ವರದಿಯಲ್ಲಿ ಪ್ರಕರಣವನ್ನು ಅಸ್ವಾಭಾವಿಕ ಸಾವು ಎಂದು ಉಲ್ಲೇಖಿಸಲಾಗಿದ್ದರೂ, ಕಾಲೇಜಿನ ಆ್ಯಂಟಿ ರ್‍ಯಾಗಿಂಗ್‌ ಸಮಿತಿ, ಕಾಲೇಜಿನ ಇತರ ಪ್ರಮುಖರು, ಮರಣೋತ್ತರ ವರದಿ ಮುಂತಾದವುಗಳನ್ನು ಪರಿಗಣಿಸಿ ಸಿಬಿಐ ಪ್ರಕರಣವನ್ನು ಆತ್ಮಹತ್ಯೆಗೆ ಪ್ರಚೋದನೆ, ಕೊಲೆ ಯತ್ನ, ಕೇರಳದ ರ್‍ಯಾಗಿಂಗ್‌ ವಿರೋಧಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿತ್ತು.