Asianet Suvarna News Asianet Suvarna News

ಕೊಯಮತ್ತೂರು ಕಾರು ಸ್ಫೋಟ ಪ್ರಕರಣದಲ್ಲಿ ಉಗ್ರರ ಕೈವಾಡ, NIA ತನಿಖೆಗೆ ಆದೇಶಿಸಿದ ಸಿಎಂ ಸ್ಟಾಲಿನ್!

ಕೊಯಮತ್ತೂರಿನ ಕೊಟ್ಟೈ ಈಶ್ವರನ್‌ ದೇವಾಲಯದ ಬಳಿ ಕಾರಿನಲ್ಲಿ ಸಿಲಿಂಡರ್‌ ಸ್ಫೋಟಿಸಿ ಜೆಮಿಶಾ ಮುಬೀನ್‌ ಮೃತಪಟ್ಟ ಪ್ರಕರಣದಲ್ಲಿ ಉಗ್ರರ ಕೈವಾಡ ದಟ್ಟವಾಗುತ್ತಿದೆ.  ಈ ಪ್ರಕರಣ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿದ ಸಿಎಂ ಎಂಕೆ ಸ್ಟಾಲಿನ್ ಪ್ರಕರಣವನ್ನು NIAಗೆ ವಹಿಸಿದ್ದಾರೆ.
 

Coimbatore car blast case CM Mk stalin govt recommend NIA inquiry due to suspect terror and international links ckm
Author
First Published Oct 26, 2022, 5:08 PM IST

ಚೆನ್ನೈ(ಅ.26) ಕೊಯಮತ್ತೂರಿನ ಕೊಟ್ಟೈ ಈಶ್ವರನ್‌ ದೇವಾಲಯದ ಬಳಿ ಕಾರಿನಲ್ಲಿ ಸಿಲಿಂಡರ್‌ ಸ್ಫೋಟಿಸಿ ಜೆಮಿಶಾ ಮುಬೀನ್‌ ಎಂಬ ವ್ಯಕ್ತಿ ಸಾವನ್ನಪ್ಪಿದ ಪ್ರಕರಣ ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದೆ. ಆರಂಭದಲ್ಲಿ ಇದು ಸಿಲಿಂಡರ್ ಸ್ಫೋಟಕ್ಕೆ ಸೀಮಿತ ಎಂದುಕೊಂಡಿದ್ದ ಪೊಲೀಸರಿಗೆ ತನಿಖೆ ವೇಳೆ ಉಗ್ರರ ಕೈವಾಡ ವ್ಯಕ್ತವಾಗತೊಡಗಿದೆ. ಭಾರಿ ಸ್ಫೋಟಕ್ಕೆ ಸಂಚು ನಡೆಸಿದ್ದ ಉಗ್ರರು ಕೃತ್ಯಕ್ಕೆ ಹಲವು ಸಾಕ್ಷ್ಯಗಳು ಲಭ್ಯವಾಗಿದೆ. ಈ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕೈವಾಡ ಅನುಮಾನಗಳು ದಟ್ಟವಾಗುತ್ತಿದ್ದಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA) ವಹಿಸಿದ್ದಾರೆ. ಇಂದು ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 

ಈ ಪ್ರಕರಣ ಸಿಲಿಂಡರ್ ಸ್ಫೋಟಕ್ಕೆ ಸೀಮಿತವಾಗಿಲ್ಲ. ಸ್ಫೋಟಕ್ಕೆ ಸಂಚು ಮಾಡಿರುವ ದಾಖಲೆ ಲಭ್ಯವಾಗಿದೆ. ಉಗ್ರರು ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದರು ಅನ್ನೋದು ಸ್ಪಷ್ಟವಾಗುತ್ತಿದೆ. ಈ ಕಾರು ಸ್ಫೋಟ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕೈವಾಡದ ಅನುಮಾನಗಳು ಬಲಗೊಳ್ಳುತ್ತಿದೆ. ಹೀಗಾಗಿ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸುತ್ತಿದ್ದೇವೆ ಎಂದು ಎಂಕೆ ಸ್ಟಾಲಿನ್ ಹೇಳಿದ್ದಾರೆ.

Coimbatore Blast: 5 ಜನರ ಬಂಧನ, 25 ಮಂದಿ ಮೇಲೆ ನಿಗಾ; ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆ

ಸ್ಫೋಟ ಪ್ರಕರಣ ಸಂಬಂಧ ತಮಿಳುನಾಡು ಪೊಲೀಸರು ಐವರನ್ನು ಬಂಧಿಸಿದ್ದು, ಇನ್ನೂ 25 ಜನರ ಮೇಲೆ ಅನುಮಾನವಿದ್ದು ಅವರನ್ನು ಶೀಘ್ರವೇ ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.ಬಂಧಿತರನ್ನು ಮೊಹಮ್ಮದ್‌ ಟಾಲ್ಕಾ, ಮೊಹಮ್ಮದ್‌ ಅಜರುದ್ದೀನ್‌, ಮೊಹಮ್ಮದ್‌ ನವಾಸ್‌ ಇಸ್ಮಾಯಿಲ್‌, ಮೊಹಮ್ಮದ್‌ ರಿಯಾಸ್‌ ಹಾಗೂ ಫಿರೋಜ್‌ ಇಸ್ಮಾಯಿಲ್‌ ಎಂದು ಗುರುತಿಸಲಾಗಿದೆ. ಕಾರು ಸ್ಫೋಟದಲ್ಲಿ ಮೃತಪಟ್ಟಜೇಮಿಶಾ ಮುಬೀನ್‌ (25)ಗೆ ಇವರು ಸ್ಫೋಟ ನಡೆಸಲು ಸಹಾಯ ನೀಡಿದ್ದರು ಎನ್ನಲಾಗಿದೆ. ಜೊತೆಗೆ ಜೈಲಿನಲ್ಲಿರುವ ಲಷ್ಕರ್‌ ಉಗ್ರ ಸರಫರ್‌ ನವಾಜ್‌ ಎಂಬಾತನನ್ನೂ ವಿಚಾರಣೆಗೆ ಗುರಿಪಡಿಸಲಾಗಿದೆ.

ಈ ನಡುವೆ ಕಾರು ಸ್ಫೋಟ, ಉಗ್ರ ಕೃತ್ಯ ಎಂಬುದು ಖಚಿತವಾಗಿದೆ. ಮುಬಿನ್‌, ಸಾಯುವ ಮುನ್ನ ತನ್ನ ಮೊಬೈಲ್‌ನ ಡಿಪಿಯಲ್ಲಿ ‘ನನ್ನ ಸಾವಿನ ಸುದ್ದಿ ನಿಮಗೆ ತಲುಪಿದರೆ ನನ್ನ ತಪ್ಪುಗಳನ್ನು ಕ್ಷಮಿಸಿ, ನನ್ನ ನ್ಯೂನತೆಗಳನ್ನು ಮರೆ ಮಾಡಿ, ಅಂತಿಮಯಾತ್ರೆಯಲ್ಲಿ ಭಾಗವಹಿಸಿ ನನಗಾಗಿ ಪ್ರಾರ್ಥಿಸಿ’ ಎಂದು ಬರೆದಿದ್ದನು. ಇದರಿಂದ ಇದು ಆತ್ಮಾಹುತಿ ದಾಳಿ ಪ್ರಕರಣ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

Coimbatore car blast: ಸಾವೀಗೀಡಾದ ಜಮೇಜಾ ಮುಬಿನ್ ಮನೆಯಲ್ಲಿ ಸ್ಪೋಟಕಗಳು ಪತ್ತೆ

ಕಾರು ಸ್ಫೋಟದಲ್ಲಿ ಮುಬೀನ್  ಸಾವಿಗೆ ಕೆಲವೇ ಗಂಟೆ ಮೊದಲು ಮುಬೀನ್‌ ಮನೆಯಿಂದ ಐವರು ಶಂಕಾಸ್ಪದ ಗೋಣಿಚೀಲ ತೆಗೆದುಕೊಂಡು ಹೋಗಿದ್ದು ಸಿಸಿಟೀವಿಯಲ್ಲಿ ಕಂಡುಬಂದಿದೆ. ಮುಬೀನ್‌ನನ್ನು 2019ರಲ್ಲಿ ಐಸಿಸ್‌ ನಂಟಿನ ಬಗ್ಗೆ ವಿಚಾರಣೆ ಮಾಡಿ ಸಾಕ್ಷ್ಯ ಸಿಗದ ಕಾರಣ ಬಿಡುಗಡೆ ಮಾಡಲಾಗಿತ್ತು. ಈತ ಭಾನುವಾರ ನಸುಕಿನ 4 ಗಂಟೆಗೆ ಈಶ್ವರನ್‌ ದೇಗುಲ ಬಳಿ ಕಾರ್‌ನಲ್ಲಿ ಸಾಗುತ್ತಿದ್ದಾಗ, ಕಾರಿನಲ್ಲಿನ ಸಿಲಿಂಡರ್‌ ಸ್ಫೋಟಿಸಿ ಸಾವನ್ನಪ್ಪಿದ್ದ. ಪೊಲೀಸರು ಈತನ ಮನೆ ಶೋಧಿಸಿದಾಗ ಬಾಂಬ್‌ ತಯಾರಿಕಾ ರಾಸಾಯನಿಕ, ಬೇರಿಂಗ್‌ಗಳು ಪತ್ತೆಯಾಗಿದ್ದವು. ಇನ್ನು ಇದಕ್ಕೂ ಕೆಲ ತಾಸು ಮುನ್ನ ಶನಿವಾರ ರಾತ್ರಿ 11.25ಕ್ಕೆ ಈತನ ಮನೆಯಿಂದ ಐವರು ಶಂಕಾಸ್ಪದ ಗೋಣಿಚೀಲ ಒಯ್ದಿದ್ದಾರೆ. ಹೀಗಾಗಿ ಮುಬೀನ್‌ ಉಗ್ರ ಚಟುವಟಿಕೆ ನಡೆಸುತ್ತಿದ್ದನೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Follow Us:
Download App:
  • android
  • ios