* ಹಿಂದೆ ಕಲ್ಲಿದ್ದಲು ಖರೀದಿಸಿ ಎಂದರೆ ಕೇಳಲಿಲ್ಲ* ಈಗ ಕೇಂದ್ರವನ್ನು ದೂಷಿಸುವುದು ಸರಿಯಲ್ಲ* ಕಲ್ಲಿದ್ದಲು ಕೊರತೆಗೆ ರಾಜ್ಯಗಳೇ ಕಾರಣ* ಪ್ರಹ್ಲಾದ್ ಜೋಶಿ ಗಂಭೀರ ಆರೋಪ
ನವದೆಹಲಿ(ಅ.13): ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆ(Coal Crisis) ಸೃಷ್ಟಿಯಾಗಿ ವಿದ್ಯುತ್(Elrctricity) ಕ್ಷಾಮದ ಆತಂಕ ಹೆಚ್ಚಾದ ಬೆನ್ನಲ್ಲೇ, ಕೇಂದ್ರ ಸರ್ಕಾರವು ಈ ಸಮಸ್ಯೆಗೆ ರಾಜ್ಯಗಳೇ ಹೊಣೆ ಎಂದು ಮಂಗಳವಾರ ಕಿಡಿಕಾರಿದೆ. ಈ ಮೂಲಕ ಕೇಂದ್ರವನ್ನು ದೂಷಿಸುತ್ತಿರುವ ರಾಜ್ಯಗಳಿಗೆ ತಿರುಗೇಟು ನೀಡಿದೆ.
ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರಿಗೆ ಕಲ್ಲಿದ್ದಲು(Coal) ಹಾಗೂ ವಿದ್ಯುತ್ ಬಿಕ್ಕಟ್ಟಿನ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ(Pralhad Joshi) ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಹಿಂದೆ ಕಲ್ಲಿದ್ದಲು ದಾಸ್ತಾನು ನಮ್ಮ ಬಳಿ ಸಾಕಷ್ಟಿತ್ತು. ಕಳೆದ ಜೂನ್ವರೆಗೂ ಕಲ್ಲಿದ್ದಲು ತೆಗೆದುಕೊಳ್ಳಿ ಎಂದು ನಾವು ಹೇಳಿದರೂ ರಾಜ್ಯಗಳು ತಮ್ಮ ದಾಸ್ತಾನನ್ನು ಹೆಚ್ಚಿಸಿಕೊಳ್ಳಲು ನಿರಾಕರಿಸಿದವು. ‘ದಯವಿಟ್ಟು ಕಲ್ಲಿದ್ದಲು ಕಳಿಸಬೇಡಿ’ ಎಂದು ಗೋಗರೆದವು. ಇದೇ ಈಗಿನ ಸಮಸ್ಯೆಗೆ ನಾಂದಿ ಹಾಡಿದೆ’ ಎಂದು ದೂರಿದರು.
‘ಹೀಗಾಗಿ ಕೊರತೆ ನೀಗಿಸಲು ರಾಜ್ಯಗಳು ದಾಸ್ತಾನು ಹೆಚ್ಚಿಸಿಕೊಳ್ಳಬೇಕು. ರಾಜ್ಯಗಳಿಂದ ಬಾಕಿ ಹಣ ಬರುವುದಿದ್ದರೂ ನಾವು ಪೂರೈಕೆ ಮುಂದುವರಿಸಿದ್ದೇವೆ. ದಾಸ್ತಾನು ಹೆಚ್ಚಿಸಿಕೊಂಡರೆ ಸಮಸ್ಯೆ ಇರದು’ ಎಂದರು. ಇದೇ ವೇಳೆ, ‘ವಿದ್ಯುತ್ ಕ್ಷಾಮದ ಭೀತಿ ಇಲ್ಲ’ ಎಂದು ಸ್ಪಷ್ಟಪಡಿಸಿದ ಜೋಶಿ(Pralhad Joshi), ‘ಕಲ್ಲಿದ್ದಲು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಸದ್ಯ 22 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನಿದೆ’ ಎಂದರು.
‘ಸೋಮವಾರ 19 ಲಕ್ಷ ಟನ್ ಕಲ್ಲಿದ್ದಲು ಪೂರೈಸಲಾಗಿದೆ. ಇದು ಈವರೆಗಿನ ದೇಶೀ ಕಲ್ಲಿದ್ದಲು ಪೂರೈಕೆಯ ಏಕದಿನದ ದಾಖಲೆ. ಪೂರೈಕೆಯನ್ನು ವೇಗವಾಗಿ ಇನ್ನಷ್ಟುಹೆಚ್ಚಿಸಲಾಗುತ್ತದೆ. ಮುಂಗಾರು ಅಂತ್ಯದ ಬಳಿಕ ಕಲ್ಲಿದ್ದಲು ಸರಬರಾಜು ಹೆಚ್ಚಾಗಲಿದೆ. ಅ.21ರ ವೇಳೆಗೆ 20 ಲಕ್ಷ ಟನ್ ಕಲ್ಲಿದ್ದಲು ಪೂರೈಸಲು ಯತ್ನಿಸುತ್ತೇವೆ. ಬೇಡಿಕೆಗೆ ತಕ್ಕಂತೆ ಕಲ್ಲಿದ್ದಲು ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ’ ಎಂದರು.
‘ಮಳೆಯಿಂದಾಗಿ ಕಲ್ಲಿದ್ದಲು ಉತ್ಖನನ ಸಮಸ್ಯೆಗಾಗಿದೆ. ಇದರಿಂದ ಟನ್‌ಗೆ ಅಂತಾರಾಷ್ಟ್ರೀಯ ಕಲ್ಲಿದ್ದಲು ಬೆಲೆ 60 ರು.ನಿಂದ 160 ರು.ಗೆ ಹೆಚ್ಚಿದೆ. ಹೀಗಾಗಿ ಆಮದಿನ ಮೇಲೇ ಅವಲಂಬಿತವಾದ ವಿದ್ಯುತ ಸ್ಥಾವರಗಳು ಕೆಲಸ ಸ್ಥಗಿತಗೊಳಿಸಿವೆ. ಇದು ದೇಶೀ ಕಲ್ಲಿದ್ದಲಿನ ಮೇಲೆ ಒತ್ತಡ ಹೆಚ್ಚಿಸಿದೆ. ಮಳೆಗಾಲ ಮುಗಿಯುತ್ತಿದ್ದಂತೆಯೇ ಸಮಸ್ಯೆ ನೀಗಲಿದೆ’ ಎಂದು ಸ್ಪಷ್ಟಪಡಿಸಿದರು.
ಮೂಲಗಳು ಹೇಳೋದೇನು?:
‘ಉಷ್ಣ ವಿದ್ಯುತ್ ಸ್ಥಾವರಗಳು ಸಾಕಷ್ಟುಪ್ರಮಾಣದ ಕಲ್ಲಿದ್ದಲನ್ನು ದಾಸ್ತಾನು ಹೊಂದಿರಬೇಕು. ಆದರೆ ಬಹುತೇಕ ಘಟಕಗಳು ತಮ್ಮ ದಾಸ್ತಾನು ಖಾಲಿಯಾಗುತ್ತಾ ಬಂದರೂ ಅದನ್ನು ಮರುಭರ್ತಿ ಮಾಡಿಕೊಳ್ಳಲು ಮುಂದಾಗಲಿಲ್ಲ. ಇನ್ನೂ ಕಲ್ಲಿದ್ದಲು ಇದೆ, ಈಗಲೇ ಏಕೆ ಹಣ ತೆರಬೇಕು ಎಂಬ ಯೋಚನೆಗೆ ಮುಳುಗಿದವು. ಅದೇ ವೇಳೆಗೆ ಉತ್ಪಾದನೆ ಸಮಸ್ಯೆಯಾಯಿತು. ನ.1ರಿಂದ ಕಲ್ಲಿದ್ದಲು ಸ್ಥಾವರಗಳಿಗೆ ಹೆಚ್ಚು ದಾಸ್ತಾನು ಲಭ್ಯವಾಗಲಿದೆ’ ಎಂದು ಮೂಲಗಳು ತಿಳಿಸಿದ್ದು, ಜೋಶಿ ಹೇಳಿಕೆಯನ್ನು ಸಮರ್ಥಿಸಿವೆ.
ಸರ್ಕಾರದಿಂದ ಸೂಚನೆ:
ಈ ನಡುವೆ, ದುರ್ಗಾ ಪೂಜೆಯ ಹೊತ್ತಿಗೆ ಕಲ್ಲಿದ್ದಲು ಪೂರೈಕೆ ಹೆಚ್ಚಿಸಲು ಹಾಗೂ ಅ.20ರ ನಂತರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡಲು ಸರ್ಕಾರದಿಂದ ತನಗೆ ಸೂಚನೆ ಬಂದಿದೆ ಎಂದು ಸರ್ಕಾರಿ ಸ್ವಾಮ್ಯದ ಕಲ್ಲಿದ್ದಲು ಕಂಪನಿ ಕೋಲ್ ಇಂಡಿಯಾ ಕೂಡ ಹೇಳಿದೆ.
ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇ.69ರಷ್ಟು ಕಲ್ಲಿದ್ದಲು ಆಧರಿಸಿದ್ದಾಗಿದೆ. ತನ್ನ ಶೇ.80ರಷ್ಟುಪೂರೈಕೆಯನ್ನು ಕೋಲ್ ಇಂಡಿಯಾ ವಿದ್ಯುತ್ ಸ್ಥಾವರಗಳಿಗೇ ಸಾಗಿಸುತ್ತಿದೆ. ಕಲ್ಲಿದ್ದಲಿನ ಕೊರತೆಯಿಂದಾಗಿ ಈ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಕಡಿತವಾಗಿತ್ತು.
- ದೇಶದಲ್ಲಿ 22 ದಿನಕ್ಕಾಗುವಷ್ಟುಕಲ್ಲಿದ್ದಲು ದಾಸ್ತಾನು
- ಮಳೆಯಿಂದ ಕಲ್ಲಿದ್ದಲು ಉತ್ಖನನ, ಪೂರೈಕೆಗೆ ಸಮಸ್ಯೆ
- ಆದರೂ ಮೊನ್ನೆ ದಾಖಲೆಯ 19 ಲಕ್ಷ ಟನ್ ಕಲ್ಲಿದ್ದಲು ಸರಬರಾಜು
- ಅ.21ರ ವೇಳೆಗೆ 2 ಕೋಟಿ ಟನ್ ಪೂರೈಸಲು ಪ್ರಯತ್ನ
- ವಿದ್ಯುತ್ ಸಮಸ್ಯೆ ಆಗದು: ಕೇಂದ್ರ ಸಚಿವ ಅಭಯ
