ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರವಾಗಿ ವಿರೋಧ.. ರಸ್ತೆಗಳು ಸಂಚಾರಕ್ಕೆ ಮಾತ್ರ ಮೀಸಲು, ಪ್ರಾರ್ಥನೆಗಳನ್ನು ನಿಗದಿತ ಸ್ಥಳಗಳಲ್ಲಿ ಅಥವಾ ಪಾಳಿಗಳಲ್ಲಿ ಮಾಡಬೇಕು, ಇಲ್ಲದಿದ್ದರೆ ಜನಸಂಖ್ಯೆ ನಿಯಂತ್ರಿಸಬೇಕು ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ (ಮೇ.19): ರಸ್ತೆಗಳಲ್ಲಿ ನಮಾಜ್ ಮಾಡುವ ಪರಿಪಾಠದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ರಸ್ತೆಗಳಿರುವುದು ಜನರ ಓಡಾಟಕ್ಕೇ ಹೊರತು ನಮಾಜ್‌ಗಲ್ಲ. ಅಂತಹ ಪ್ರಾರ್ಥನೆಗಳನ್ನು ನಿಗದಿತ ಪ್ರಾರ್ಥನಾ ಸ್ಥಳಗಳಲ್ಲಿ ಪಾಳಿಗಳಲ್ಲಿ ಮಾಡಿ. ಸಾಧ್ಯವಾಗದೇ ಇದ್ದಲ್ಲಿ ಜನಸಂಖ್ಯೆ ನಿಯಂತ್ರಿಸಿ’ ಎಂದು ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಯೋಗಿ, ‘ನಮಾಜ್ ಅಥವಾ ಇನ್ಯಾವುದೇ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿ ಮಾಡುವುದನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅಷ್ಟಕ್ಕೂ ರಸ್ತೆಗಳಿರುವುದು ಓಡಾಡುವುದಕ್ಕಾಗಿಯೇ ಹೊರತು ಇಂತಹ ತಮಾಷೆಗೆ (ದೃಶ್ಯಗಳಿಗೆ) ಅಲ್ಲ. ರಸ್ತೆಯನ್ನು ನಿರ್ಬಂಧಿಸಲು ಯಾರಿಗಾದರೂ ಯಾವ ಹಕ್ಕಿದೆ? ಅವರು ತಮಗೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಹೋಗಿ ಪ್ರಾರ್ಥನೆ ಸಲ್ಲಿಸಲಿ’ ಎಂದರು.
ದೇಶಾದ್ಯಂತ ಮೇ 28ರಂದು ‘ಈದ್ ಉಲ್ ಅಧಾ’ (ಬಕ್ರೀದ್) ಆಚರಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಉತ್ತರಪ್ರದೇಶದ ಮುಖ್ಯಮಂತ್ರಿ ಇಂಥದ್ದೊಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜತೆಗೆ ‘ನಿಮ್ಮ ಮನೆಯಲ್ಲಿ ಎಲ್ಲರಿಗೂ ನೀವು ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿಲ್ಲ ಎಂದಾದಲ್ಲಿ ನೀವು ಸಂಖ್ಯೆ (ಜನಸಂಖ್ಯೆ) ಕಡಿತ ಮಾಡಬೇಕು. ಅಲ್ಲದೆ, ನೀವು ಈ ವ್ಯವಸ್ಥೆಯಲ್ಲಿ ಬದುಕಬೇಕಂತಿದ್ದರೆ ಇಲ್ಲಿನ ನಿಯಮ ಮತ್ತು ಕಾನೂನುಗಳನ್ನು ಪಾಲಿಸಬೇಕು. ಇಲ್ಲಿ ಕಾನೂನು ಪಾಲನೆ ಆಗಲೇಬೇಕು. ನಿಮಗೆ ನಮಾಜ್ ಮಾಡುವುದು ಅತ್ಯಗತ್ಯವಾಗಿದ್ದರೆ, ಪಾಳಿಗಳಲ್ಲಿ ಮಾಡಿ. ನೀವು ಪ್ರಾರ್ಥನೆ ಮಾಡುವುದನ್ನು ನಾವು ತಡೆಯುವುದಿಲ್ಲ. ಆದರೆ ಬೀದಿಗಳಲ್ಲಿ ಮಾಡುವುದಕ್ಕೆ ಅವಕಾಶ ಕೊಡಲ್ಲ. ಬೀದಿಗಳಲ್ಲಿ ಅರಾಜಕತೆಗೆ ನಾವು ಅವಕಾಶ ಕೊಡಲ್ಲ. ಶಾಂತಿಯುತವಾಗಿ ಇದನ್ನು ಪಾಲಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ ’ ಎಂದು ಎಚ್ಚರಿಸಿದರು.
ಜೊತೆಗೆ, ಬರೇಲಿಯಲ್ಲಿ ಕೆಲ ವ್ಯಕ್ತಿಗಳು ಇತ್ತೀಚೆಗೆ ನಮ್ಮ ಇಚ್ಛಾಶಕ್ತಿಯನ್ನು ಪರೀಕ್ಷಿಸುವ ಕೆಲಸಕ್ಕೆ ಮುಂದಾಗಿದ್ದರು, ಬಳಿಕ ಅವರಿಗೆ ನಮ್ಮ ಶಕ್ತಿ ಏನೆಂದು ಗೊತ್ತಾಯಿತು ಎಂದು ಸಿಎಂ ಯೋಗಿ ಹೇಳಿದರು.
ಕಾನೂನು ಪಾಲಿಸಿ, ಇಲ್ಲವೇಪರಿಣಾಮಗಳನ್ನು ಎದುರಿಸಿ
ಈ ವ್ಯವಸ್ಥೆಯಲ್ಲಿ ಬದುಕಬೇಕಂತಿದ್ದರೆ ಇಲ್ಲಿನ ನಿಯಮ ಮತ್ತು ಕಾನೂನುಗಳನ್ನು ಪಾಲಿಸಬೇಕು. ಇಲ್ಲಿ ಕಾನೂನು ಪಾಲನೆ ಆಗಲೇಬೇಕು. ಶಾಂತಿಯುತವಾಗಿ ಇದನ್ನು ಪಾಲಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ.
-ಯೋಗಿ ಆದಿತ್ಯನಾಥ್ ಉತ್ತರಪ್ರದೇಶ ಸಿಎಂ


