ಮದ್ಯಪಾನ ನಿಷೇಧಿಸಲ್ಪಟ್ಟಿರುವ ಬಿಹಾರದಲ್ಲಿ ಜನ ಶರಾಬಿನ ಆಸೆಗಾಗಿ ಕಳ್ಳಬಟ್ಟಿ ಮೂಲಗಳನ್ನು ಅರಸಿ ಹೋಗುತ್ತಿದ್ದು, ಇದೇ ಅವರಿಗೆ ಸಾವಿನ ಮನೆಯಾಗುತ್ತಿದೆ. ಕಳ್ಳಬಟ್ಟಿ ಮದ್ಯ ಸೇವಿಸಿ 26 ಜನ ಈಗಾಗಲೇ ಮೃತಪಟ್ಟಿದ್ದಾರೆ.
ಬಿಹಾರ: ಬಿಹಾರ ಸರ್ಕಾರ ರಾಜ್ಯದಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ದೇಶದಲ್ಲೇ ಬಿಹಾರ ಮದ್ಯಮುಕ್ತರಾಜ್ಯವಾಗಿದೆ. ಆದರೆ ಕುಡುಕರು ಹಾಗೂ ದಂಧೆಕೋರರು ಸುಮ್ಮನಿರಬೇಕಲ್ಲ. ಅಲ್ಲಲ್ಲಿ ಕಳಬಟ್ಟಿ ತಯಾರಿಕ ಘಟಕಗಳು ಕದ್ದು ಮುಚ್ಚಿ ತಲೆ ಎತ್ತಿದ್ದು, ಇಲ್ಲಿ ತಯಾರಿಸಿದ ವಿಷಕಾರಿ ಮದ್ಯ ಕುಡಿದು ಜನ ಸಾವಿನ ಮನೆ ಸೇರುತ್ತಿದ್ದಾರೆ. ಹೀಗೆ ಮೃತಪಟ್ಟವರಿಗೆ ಬಿಹಾರ ಸಿಎಂ ನಿತೀಶ್ ಕುಮಾರ್ 4 ಲಕ್ಷ ರೂಪಾಯಿ ಪರಿಹಾರ ಘೋಷಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ಬಿಹಾರದ ಪೂರ್ವ ಚಂಪರಣ್ (East Champaran) ಜಿಲ್ಲೆಯ ಮೋತಿಹಾರಿ ಎಂಬಲ್ಲಿ ಮದ್ಯಸೇವಿಸಿ 26 ಜನ ಸಾವನ್ನಪ್ಪಿದ್ದರು. ಅಲ್ಲದೇ 20ಕ್ಕೂ ಹೆಚ್ಚು ಜನ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾತನಾಡಿದ ಬಿಹಾರ ಸಿಎಂ ನಿತಿಶ್ ಕುಮಾರ್, ಚಂಪರಣ್ ಜಿಲ್ಲೆಯ ಮೋತಿಹಾರಿಯಲ್ಲಿ ಕಳ್ಳಬಟ್ಟಿ ಕುಡಿದು ಜನ ಪ್ರಾಣ ಕಳೆದುಕೊಂಡಿದ್ದು, ತುಂಬಾ ದುಃಖದ ವಿಚಾರ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಣೆ ಮಾಡಿದರು.
ಸರಾಯಿಗೆ ದಾಸರಾದ ಪತಿರಾಯರು: ಕಳ್ಳಬಟ್ಟಿ ವಿರುದ್ಧ ಮಹಿಳೆಯರ ಉಗ್ರ ಪ್ರತಿಭಟನೆ
ಮೋತಿಹಾರಿಯಲ್ಲಿ(Motihari) ಏನು ನಡೆಯಿತೋ ಆ ಬಗ್ಗೆ ನನಗೆ ಬಹಳ ಬೇಜಾರಾಗಿದೆ. ಇಂತಹ ಅವಘಡಗಳಲ್ಲಿ ಸಾವನ್ನಪ್ಪುವ ಬಹುತೇಕ ಜನ ಆರ್ಥಿಕವಾಗಿ ಬಹಳ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ರಾಜ್ಯವನ್ನು ಮದ್ಯ ಮುಕ್ತಗೊಳಿಸಲು ನಮ್ಮ ಶತಪ್ರಯತ್ನಗಳ ಹೊರತಾಗಿಯೂ ಕಳ್ಳಬಟ್ಟಿ ಕುಡಿದು ಸಾವನ್ನಪ್ಪುವಂತಹ ಹಲವು ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿರುವುದು ಬೇಸರ ಮೂಡಿಸಿದೆ.
ಹೀಗಾಗಿ ನಾವು ಸಂತ್ರಸ್ತರ ಕುಟುಂಬಕ್ಕೆ 4 ಲಕ್ಷ ಪರಿಹಾರ ನೀಡಲು ಬಯಸಿದ್ದೇವೆ. ಆದರೆ ಇದಕ್ಕೊಂದು ಷರತ್ತಿದೆ. ಅಕ್ರಮ ಮದ್ಯ ಸೇವಿಸಿಯೇ ಸಾವು ಸಂಭವಿಸಿದೆ ಎಂದು ಅವರ ಕುಟುಂಬ ಸದಸ್ಯರು ಲಿಖಿತವಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಬರೆದು ನೀಡಬೇಕು ಹಾಗೂ ಮದ್ಯದ ಮೂಲವನ್ನು ಅವರು ಬಹಿರಂಗಪಡಿಸಬೇಕು ಹಾಗಿದ್ದಲ್ಲಿ ಮಾತ್ರ ಈ 4 ಲಕ್ಷ ರೂ ಪರಿಹಾರವನ್ನು ನೀಡಲಾಗುವುದು ಎಂದು ಸಿಎಂ (Nitish Kumar) ಹೇಳಿದರು.
Spurious Liquor ಬಿಹಾರದಲ್ಲಿ ಹೋಳಿ ವೇಳೆ ಕಳ್ಳಬಟ್ಟಿಸೇವಿಸಿ 17 ಸಾವು!
ಅಲ್ಲದೇ ಮದ್ಯವನ್ನು ತ್ಯಜಿಸಲು ಮತ್ತು ರಾಜ್ಯ ಸರ್ಕಾರದ ಮದ್ಯ ನಿಷೇಧ ಕಾನೂನುಗಳನ್ನು ಬೆಂಬಲಿಸಲು ಜನರನ್ನು ಪ್ರೋತ್ಸಾಹಿಸುವುದಾಗಿ ಕುಟುಂಬದ ಸದಸ್ಯರು ಘೋಷಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಸಿಎಂ ಪರಿಹಾರ ನಿಧಿಯಿಂದ ಈ ಪರಿಹಾರ ಧನವನ್ನು ವಿತರಿಸಲಾಗುತ್ತದೆ. ಬಿಹಾರದಲ್ಲಿ ಏಪ್ರಿಲ್ 2016ರಿಂದಲೂ ಮದ್ಯಪಾನ ಸೇವನೆಯನ್ನು ನಿಷೇಧಿಸಲಾಗಿದೆ. ಆದಾಗ್ಯೂ ಅಲ್ಲಿ ಇಲ್ಲಿ ಕದ್ದು ಮುಚ್ಚಿ ತಯಾರಿಸಲ್ಪಡುವ ಕಳ್ಳಬಟ್ಟಿ ಸೇವಿಸಿ ಜನರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ.
