ಪಂಜಾಬ್‌ನಲ್ಲಿನ ಆಪ್ ಸರ್ಕಾರ ಸಾಲದ ಸುಳಿಗೆ ಸಿಲುಕಿದೆ. ಕಳೆದ ಒಂದು ವರ್ಷದಲ್ಲಿ ಸರ್ಕಾರ ಪಡೆದುಕೊಂಡು 47 ಸಾವಿರ ಕೋಟಿ ರೂಪಾಯಿ ಸಾಲದಲ್ಲಿ ಅಂದಾಜು 27 ಸಾವಿರ ಕೋಟಿ ರೂಪಾಯಿ ಅಂದರೆ ಶೇ.57ರಷ್ಟು ಮೊತ್ತವನ್ನು ಬಡ್ಡಿ ರೂಪದಲ್ಲಿ ಕಟ್ಟಿದೆ ಎಂದು ಸ್ವತಃ ಸಿಎಂ ಭಗವಂತ್ ಸಿಂಗ್ ಮಾನ್ ಹೇಳಿದ್ದಾರೆ.
ನವದೆಹಲಿ (ಅ.3): ನಿರೀಕ್ಷೆಯಂತೆ ಬಿಟ್ಟಿ ಭಾಗ್ಯಗಳನ್ನು ಘೋಷಣೆ ಮಾಡಿದ ಪರಿಣಾಮವಾಗಿ ಇಂದು ಪಂಜಾಬ್ ರಾಜ್ಯ ಮತ್ತಷ್ಟು ಸಾಲದ ಸುಳಿಗೆ ಸಿಲುಕಿದೆ. ಆಪ್ ಸರ್ಕಾರ ಅಧಿಕಾರಕ್ಕೆ ಏರುವಾಗಲೇ ಪಂಜಾಬ್ ದೇಶದ ಅತ್ಯಂತ ಸಾಲಗಾರ ರಾಜ್ಯ ಎನ್ನುವ ಕುಖ್ಯಾತಿ ಹೊಂದಿತ್ತು. ಅದಕ್ಕೆ ಬರೆ ಎನ್ನುವಂತೆ ಹೊಸ ಸರ್ಕಾರ ಆದಾಯ ಕ್ರೋಢಿಕರಣದ ಯೋಜನೆಗಳ ಹೊರತಾಗಿ ಬಿಟ್ಟಿಭಾಗ್ಯಗಳಿಗೆ ಹಣ ಸುರಿದ ಕಾರಣಕ್ಕೆ ಪಂಜಾಬ್ ರಾಜ್ಯದ ಸಾಲ ಮತ್ತಷ್ಟು ಶಿಖರಕ್ಕೇರಿದೆ. ಮಂಗಳವಾರ ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್‌ಗೆ ಪತ್ರ ಬರೆದಿರುವ ಸಿಎಂ ಭಗವಂತ್ ಸಿಂಗ್ ಮಾನ್, ರಾಜ್ಯ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಪ್ರಧಾನಿ ಮೋದಿಗೆ ಮನವಿ ಮಾಡಿ ರಾಜ್ಯಕ್ಕೆ ಬರಬೇಕಾಗಿರುವ ಫಂಡ್ ರಿಲೀಸ್ ಮಾಡಿಸಿ ಎಂದು ಕೇಳಿಕೊಂಡಿದ್ದಾರೆ. ಅದರೊಂದಿಗೆ ಕಳೆದ ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ಸಾಲವೆಷ್ಟು ಎನ್ನುವ ಮಾಹಿತಿಯನ್ನೂ ರಾಜ್ಯಪಾಲರು ಕೇಳಿದ್ದರು. ಅದಕ್ಕೂ ಉತ್ತರ ನೀಡಿರುವ ಮಾನ್, ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ 47,107 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದು, ಇದರಲ್ಲಿ 48,530 ಕೋಟಿಯನ್ನು ಖರ್ಚು ಮಾಡಿದ್ದೇವೆ. ಬರೋಬ್ಬರಿ 27 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಬಡ್ಡಿ ರೂಪದಲ್ಲಿಯೇ ಕಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಉಚಿತ ವಿದ್ಯುತ್, 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂಪಾಯಿ, ನಿರುದ್ಯೋಗ ಭತ್ಯೆ ಹಾಗೂ ಉಚಿತ ನೀರನ್ನು ತನ್ನ ಪಂಜಾಬ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಅದಾಗಲೇ ಸಾಲದ ಶೂಲದಲ್ಲಿದ್ದ ಪಂಜಾಬ್‌ಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯಪಾಲರಿಗೆ ನೀಡಿರುವ ಉತ್ತರದಲ್ಲಿ ಪಂಜಾಬ್ ಸರ್ಕಾರ 2022-23ರಲ್ಲಿ 32,447 ಕೋಟಿ ರೂಪಾಯಿ ಸಾಲ ಪಡೆದುಕೊಂಡಿತ್ತು. 2023ರ ಏಪ್ರಿಲ್‌ನಿಂದ ಆಗಸ್ಟ್‌ನವರೆಗೆ 14,660 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದೆ. ಹಿಂದಿನ ಸರ್ಕಾರ ಬಿಟ್ಟು ಹೋಗಿರುವ ಸಮಸ್ಯೆಗಳನ್ನು ತಮ್ಮ ಸರ್ಕಾರ ಆದ್ಯತೆಯ ಮೇರೆಗೆ ಪರಿಹರಿಸಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಸರ್ಕಾರವು ಕಳೆದ ಒಂದು ವರ್ಷದ ಪಡೆದ ಸಾಲದ ಹೆಚ್ಚಿನ ಹಣ ಬಡ್ಡಿ ಮರುಪಾವತಿಗೆ ಹೋಗಿದೆ. 27,016 ಕೋಟಿ ರೂ.ಗಳ ಬೃಹತ್ ಮೊತ್ತ ಇದನ್ನು ಖರ್ಚಾಗಿದೆ ಎಂದು ಅವರು ಸಾಲದಿಂದ ಖರ್ಚು ಮಾಡಿದ ನಿಧಿಯ ಡೇಟಾವನ್ನು ಹಂಚಿಕೊಂಡಿದ್ದಾರೆ.
"ನಾನು ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದಾಗ, ಹಿಂದಿನ ಸರ್ಕಾರಗಳು ಬಿಟ್ಟುಹೋಗಿರುವ ದೀರ್ಘಕಾಲದ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆಹರಿಸಿದ್ದೇವೆ. ನನ್ನ ಹಿಂದಿನ ಸರ್ಕಾರ ನಿರ್ಲಕ್ಷಿಸಿದ ಸಂಸ್ಥೆಗಳು ಅಥವಾ ಯೋಜನೆಗಳಿಗೆ ಧನಸಹಾಯ ಮಾಡಲು ನಾವು ಸಾಲ ಮತ್ತು ನಮ್ಮ ಸ್ವಂತ ಆದಾಯ ಸಂಪನ್ಮೂಲಗಳನ್ನು ಬಳಸಿದ್ದೇವೆ, ಹೊಸ ಸಾಲವನ್ನು ರಚಿಸಲು ಬಳಸಿದ್ದೇವೆ. ಬಂಡವಾಳದ ಆಸ್ತಿಗಳು ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುತ್ತವೆ" ಎಂದು ಮನ್ ಬರೆದಿದ್ದಾರೆ.
ಉಚಿತ ಯೋಜನೆಯಿಂದ ಸಾಲದ ಸುಳಿಯಲ್ಲಿ ಪಂಜಾಬ್, ದಾಖಲೆ ಬಹಿರಂಗಪಡಿಸಿದ ಸಿಧು!
ಕಳೆದ ತಿಂಗಳು, ಪಂಜಾಬ್ ಮುಖ್ಯಮಂತ್ರಿ ಮಾನ್ ಅವರು, ರಾಜ್ಯಪಾಲ ಪುರೋಹಿತ್ ಅವರಿಗೆ 5,637.40 ಕೋಟಿ ರೂಪಾಯಿ ಮೊತ್ತದ ಬಾಕಿ ಉಳಿದಿರುವ ಗ್ರಾಮೀಣಾಭಿವೃದ್ಧಿ ನಿಧಿಯ (ಆರ್‌ಡಿಎಫ್) ವಿಚಾರವನ್ನು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಜೊತೆ ಪ್ರಸ್ತಾಪ ಮಾಡುವಂತೆ ತಿಳಿಸಿದ್ದರು. ಮಾನ್‌ಗೆ ಉತ್ತರಿಸಿದ ರಾಜ್ಯಪಾಲರು, ಆಮ್ ಆದ್ಮಿ ಪಕ್ಷದ ಆಡಳಿತದಲ್ಲಿ ಪಂಜಾಬ್‌ನ ಸಾಲವು ಸುಮಾರು 50,000 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ ಮತ್ತು ಈ "ದೊಡ್ಡ ಮೊತ್ತದ" ಬಳಕೆಯ ವಿವರಗಳನ್ನು ಕೇಳಿದ್ದರು. ಇದರಿಂದಾಗಿ ಅವರು ಹಣದ ಬಗ್ಗೆ ಪ್ರಧಾನಿ ಅವರ ಬಳಿ ಸೂಕ್ತವಾಗಿ ಚರ್ಚೆ ಮಾಡಬಹುದು ಎಂದಿದ್ದರು. ಸರ್ಕಾರ ಖರ್ಚು ಮಾಡಿದ ಪ್ರತಿ ಪೈಸೆಯ ಖಾತೆಯನ್ನು ರಾಜ್ಯಪಾಲರಿಗೆ ನೀಡಿದ್ದೇನೆ ಎಂದು ಮಾನ್ ತಿಳಿಸಿದ್ದಾರೆ.
1 ವರ್ಷ 85 ಸಾವಿರ ಕೋಟಿ ಸಾಲ, ಕಾಂಗ್ರೆಸ್ ಬಜೆಟ್ ಬಂಡವಾಳ ಬಿಚ್ಚಿಟ್ಟ ಹೆಚ್‌ಡಿ ಕುಮಾರಸ್ವಾಮಿ
