ಅನುಮತಿಯಿಲ್ಲದೆ ಜಂತರ್ ಮಂತರ್ ಪ್ರವೇಶಿಸಿದ ಆರೋಪದ ಮೇಲೆ ಬಂಧಿತರಾಗಿರುವ ಸಿಜೆಪಿ ನಾಯಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ಇದನ್ನು ಪ್ರಶ್ನಿಸಿ ಸಿಜೆಪಿ ಕಾನೂನು ಘಟಕದ ಮುಖ್ಯಸ್ಥೆ ರತ್ನ ಸಿಂಗ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
CJP Delhi High court: ಅನುಮತಿ ಪಡೆಯದೆ ಪ್ರತಿಭಟನೆ, ಸ್ಥಳ ಪ್ರವೇಶಿಸಿದ ಪ್ರಕರಣ ಸಂಬಂಧದಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್(SEM) ನ್ಯಾಯಾಲಯವು ಕಾಕ್ರೋಚ್ ಜನತಾ ಪಾರ್ಟಿ ವಕ್ತಾರರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಾಂಗ ಬಂಧನವನ್ನು ಎರಡುಗಳವರೆಗೆ ವಿಸ್ತರಿಸಿದೆ. ಇದರ ಬೆನ್ನಲ್ಲೇ ಇದೀಗ ಸಿಜೆಪಿ ಕಾನೂನು ಘಟಕದ ಮುಖ್ಯಸ್ಥೆ ರತ್ನ ಸಿಂಗ್ ಅವರು ನ್ಯಾಯಾಂಗ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು ಭಾರೀ ಕುತೂಹಲ ಮೂಡಿಸಿದೆ.
ರಾತ್ರಿಯೇ ತುರ್ತು ವಿಚಾರಣೆಯಾಗುತ್ತಾ?
ರತ್ನ ಸಿಂಗ್ ಅವರು ಅಶುತೋಷ್ ಮತ್ತು ಸೌರವ್ ಪರವಾಗಿ ದೆಹಲಿ ಹೈಕೋರ್ಟ್ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಈ ವಿಷಯವನ್ನು ಇಂದು ರಾತ್ರಿಯೇ ವಿಚಾರಣೆ ನಡೆಸಬೇಕೆಂದು ರತ್ನ ಸಿಂಗ್ ಮನವಿ ಮಾಡಿದ್ದಾರೆ. ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ಜೈಲಿನಲ್ಲಿ ಒಂದು ನಿಮಿಷವೂ ಕಳೆಯಬಾರದು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಅವರು, ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ರಾತ್ರಿಯೇ ತುರ್ತು ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದ್ದೇನೆ. ರಾಜಕೀಯ ಕುತಂತ್ರದಿಂದ ಇಬ್ಬರೂ ನಾಯಕರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು, ಸಾಧ್ಯವಾದಷ್ಟು ಬೇಗ ಅವರನ್ನು ಬಿಡುಗಡೆ ಮಾಡಬೇಕು ಎಂದಿದ್ದಾರೆ.
ದೆಹಲಿ ಹೈಕೋರ್ಟ್ಗೆ ಸಿಜೆಪಿ ನಾಯಕರು ಹೋಗಿದ್ದೇಕೆ?
ವರದಿಗಳ ಪ್ರಕಾರ ಸಿಜೆಪಿ ಕಾರ್ಯಕರ್ತರಾದ ಸೌರಭ್ ದಾಸ್ ಮತ್ತು ಅಶುತೋಷ್ ರಾಂಕಾ ಈಗ ತಮ್ಮ ನ್ಯಾಯಾಂಗ ಬಂಧನವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಸೌರಭ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ವಕೀಲರು ಈ ವಿಷಯದಲ್ಲಿ ತುರ್ತು ವಿಚಾರಣೆಯನ್ನು ಕೋರಿದ್ದಾರೆ. ನಿನ್ನೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ದಾಸ್ ಮತ್ತು ರಂಕಾ ಅವರ ಬಂಧನವನ್ನು ಅಕ್ಟೋಬರ್ 21 ರವರೆಗೆ ವಿಸ್ತರಿಸಿದರು. ಇದಕ್ಕೂ ಮೊದಲು, ಅಶುತೋಷ್ ರಾಂಕಾ ಮತ್ತು ಸೌರಭ್ ದಾಸ್ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆಯ ನಂತರ ಅವರ ನ್ಯಾಯಾಂಗ ಬಂಧನವನ್ನು ಇನ್ನೂ ಎರಡು ದಿನಗಳವರೆಗೆ ವಿಸ್ತರಿಸಲಾಗಿದೆ.
ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಬಂಧನ ಏಕೆ?
ಅಕ್ಟೋಬರ್ 13 ರಂದು ಅನುಮತಿಯಿಲ್ಲದೆ ಜಂತರ್ ಮಂತರ್ ಆವರಣಕ್ಕೆ ಪ್ರವೇಶಿಸಿದ್ದಕ್ಕಾಗಿ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಬಂಧಿಸಲಾಯಿತು. ನಂತರ ಇಬ್ಬರನ್ನೂ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ದೆಹಲಿ ಪೊಲೀಸರ ಹೇಳುವ ಪ್ರಕಾರ, ಜಂತರ್ ಮಂತರ್ ಅನ್ನು ಗೊತ್ತುಪಡಿಸಿದ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಹೊರಗಿಡಲಾಗಿದ್ದರೂ, ಸೌರವ್ ದಾಸ್, ಅಶುತೋಷ್ ರಂಕಾ, ಅಜಿಂಕ್ಯ ಶಿಂಧೆ ಮತ್ತು ಇತರ 11 ಸಿಜೆಪಿ ಸದಸ್ಯರು ಅಕ್ಟೋಬರ್ 13 ರ ಬೆಳಗ್ಗೆ ಖಾಸಗಿ ನಿವಾಸದಿಂದ ಜಂತರ್ ಮಂತರ್ ತಲುಪಿದರು. ಶಾಂತಿ ಮತ್ತು ಉತ್ತಮ ನಡವಳಿಕೆಯ ಷರತ್ತಿನ ಮೇಲೆ ಅಜಿಂಕ್ಯ ಶಿಂಧೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆದಾಗ್ಯೂ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಪೊಲೀಸ್ ಕಸ್ಟಡಿಯಲ್ಲಿಯೇ ಇರಿಸಲಾಗಿದೆ.
ವಿಶೇಷ ಕಾರ್ಯನಿರ್ವಾಹಕ ನ್ಯಾಯಾಧೀಶರಿಗೆ ಬೆದರಿಕೆ
ಭಾನುವಾರ ಬೆಳಿಗ್ಗೆ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ಜಾಮೀನು ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್, ತಮಗೆ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಇದೆ ಎಂದು ಹೇಳಿಕೊಂಡರು. ಇದರ ನಂತರ ಪೊಲೀಸರು ಪ್ರಕರಣದಲ್ಲಿ ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿದರು. ಏತನ್ಮಧ್ಯೆ, ಸರ್ಕಾರವು ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ಅಕ್ರಮ ಬಂಧನವನ್ನು ಉದ್ದೇಶಪೂರ್ವಕವಾಗಿ ಮುಂದುವರಿಸುತ್ತಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ.


