ವಾಟ್ಸ್‌ಆ್ಯಪ್ ಕಂಪನಿಗೆ ಸುಪ್ರೀಂ ತೀವ್ರ ತರಾಟೆ!
ವಾಟ್ಸ್‌ಆ್ಯಪ್ ಕಂಪನಿಗೆ ಸುಪ್ರೀಂ ತೀವ್ರ ತರಾಟೆ| ಜನರಿಗೆ ಖಾಸಗಿತನ ಕಳೆದುಕೊಳ್ಳುವ ಭೀತಿ ಇದೆ| ಭಾರತ, ಯುರೋಪಿಗೆ ಪ್ರತ್ಯೇಕವಾದ ನೀತಿ ಏಕೆ?
ನವದೆಹಲಿ(ಫೆ.16): ಬಳಕೆದಾರರ ಖಾಸಗಿತನದ ರಕ್ಷಣೆಯ ವಿಷಯದಲ್ಲಿ ವಾಟ್ಸ್‌ಆ್ಯಪ್ ಕಂಪನಿ ಭಾರತದಲ್ಲೊಂದು ಹಾಗೂ ಯುರೋಪ್‌ನಲ್ಲೊಂದು ಮಾನದಂಡ ಅನುಸರಿಸುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆ ಕಂಪನಿಯನ್ನು ತೀವ್ರ ತರಾಟೆ ತೆಗೆದುಕೊಂಡಿದೆ.
‘ನೀವು ಎರಡು ಅಥವಾ ಮೂರು ಲಕ್ಷ ಕೋಟಿಯ ಕಂಪನಿಯಾಗಿರಬಹುದು. ಆದರೆ, ಜನರು ಹಣಕ್ಕಿಂತ ಹೆಚ್ಚಾಗಿ ತಮ್ಮ ಖಾಸಗಿತನಕ್ಕೆ ಬೆಲೆ ನೀಡುತ್ತಾರೆ. ವಾಟ್ಸ್‌ಆ್ಯಪ್‌ನಿಂದ ತಾವು ಖಾಸಗಿತನ ಕಳೆದುಕೊಳ್ಳುತ್ತೇವೆ ಎಂಬ ದೊಡ್ಡ ಆತಂಕ ಜನರಿಗಿದೆ. ಅವರನ್ನು ರಕ್ಷಿಸುವುದು ನಮ್ಮ ಕರ್ತವ್ಯ’ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರ ಪೀಠ ಸೋಮವಾರ ಹೇಳಿದೆ. ಅಲ್ಲದೆ, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ವಾಟ್ಸ್‌ಆ್ಯಪ್‌ಗೆ ನೋಟಿಸ್ ಕೂಡ ಜಾರಿಗೊಳಿಸಿದೆ.
ಎಚ್ಚರ! ವಾಟ್ಸಪ್‌ನಲ್ಲಿ ಬರೋ ಈ ವಿಡಿಯೋ ಓಪನ್ ಮಾಡಿದ್ರೆ ಬ್ಯಾಂಕ್ ಖಾತೆ ಖಾಲಿ!
ಫೇಸ್‌ಬುಕ್‌ನ ಒಡೆತನದಲ್ಲಿರುವ ವಾಟ್ಸ್‌ಆ್ಯಪ್ ಜನರ ಖಾಸಗಿ ಮಾಹಿತಿ ಸಂಗ್ರಹಿಸಿ ಹಣಕ್ಕಾಗಿ ಮಾರಿಕೊಳ್ಳುತ್ತಿದೆ ಎಂದು ಆಕ್ಷೇಪಿಸಿ ಕರ್ಮಣ್ಯಾ ಸಿಂಗ್ ಸರೀನ್ ಎಂಬುವರು 2017ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಅದರ ವಿಚಾರಣೆಯ ವೇಳೆ ಇತ್ತೀಚೆಗೆ ಅರ್ಜಿದಾರರು ವಾಟ್ಸ್‌ಆ್ಯಪ್ ಕಂಪನಿ ಯುರೋಪ್‌ನಲ್ಲಿ ಬಳಕೆದಾರರ ಖಾಸಗಿತನ ರಕ್ಷಣೆಗೆ ಕಠಿಣ ಮಾನದಂಡ ಅನುಸರಿಸುತ್ತಿದೆ, ಆದರೆ ಭಾರತದಲ್ಲಿ ಬೇರೆಯದೇ ಸಡಿಲ ಮಾನದಂಡ ಅನುಸರಿಸುತ್ತಿದೆ ಎಂದು ಆರೋಪಿಸಿದ್ದರು. ಸೋಮವಾರ ಅದರ ವಿಚಾರಣೆ ನಡೆದಾಗ ವಾಟ್ಸ್‌ಆ್ಯಪ್ ಪರ ವಕೀಲ ಕಪಿಲ್ ಸಿಬಲ್, ‘ಯುರೋಪ್‌ನಲ್ಲಿ ಬಳಕೆದಾರರ ಮಾಹಿತಿ ರಕ್ಷಣೆಗೆ ವಿಶೇಷ ಕಾಯ್ದೆಯಿದೆ. ಭಾರತದಲ್ಲಿ ಅಂತಹ ಕಾಯ್ದೆಯಿಲ್ಲ. ಇದ್ದಿದ್ದರೆ ವಾಟ್ಸಾಪ್ ಅದನ್ನು ಪಾಲಿಸುತ್ತಿತ್ತು’ ಎಂದು ಹೇಳಿದರು.
ಈ ವೇಳೆ ಅರ್ಜಿದಾರರ ಪರ ವಕೀಲ ಶ್ಯಾಂ ದಿವಾನ್ ಅವರು ಭಾರತದಲ್ಲೂ ಬಳಕೆದಾರರ ಮಾಹಿತಿ ರಕ್ಷಣೆಗೆ ಕಾಯ್ದೆ ತರಬೇಕು ಎಂದರು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಹಾಗೂ ವಾಟ್ಸ್‌ಆ್ಯಪ್‌ಗೆ ನೋಟಿಸ್ ಜಾರಿಗೊಳಿಸಿತು.
ವಾಟ್ಸಪ್‌ನಿಂದ 4 ಹೊಸ ಫೀಚರ್; ಬಳಕೆದಾರರಿಗೆ ಯಾವುದಕ್ಕೂ ಇನ್ನಿಲ್ಲ ಬೇಜಾರ್!
ಏನಿದು ಪ್ರಕರಣ?
ವಾಟ್ಸ್‌ಆ್ಯಪ್ ಜನರ ಖಾಸಗಿ ಮಾಹಿತಿ ಸಂಗ್ರಹಿಸಿ ಹಣಕ್ಕಾಗಿ ಮಾರಿಕೊಳ್ಳುತ್ತಿದೆ. ಜೊತೆಗೆ ಅದು ಯುರೋಪ್‌ನಲ್ಲಿ ಬಳಕೆದಾರರ ಖಾಸಗಿತನ ರಕ್ಷಣೆಗೆ ಕಠಿಣ ಮಾನದಂಡ ಅನುಸರಿಸುತ್ತಿದೆ, ಆದರೆ ಭಾರತದಲ್ಲಿ ಬೇರೆಯದೇ ಸಡಿಲ ಮಾನದಂಡ ಅನುಸರಿಸುತ್ತಿದೆ ಎಂದು ಆಕ್ಷೇಪಿಸಿ ಕರ್ಮಣ್ಯಾ ಸಿಂಗ್ ಸರೀನ್ ಎಂಬುವರು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
ವಾಟ್ಸ್‌ಆ್ಯಪ್ ಹೇಳಿದ್ದೇನು?
ಯುರೋಪ್‌ನಲ್ಲಿ ಬಳಕೆದಾರರ ಮಾಹಿತಿ ರಕ್ಷಣೆಗೆ ವಿಶೇಷ ಕಾಯ್ದೆಯಿದೆ. ಭಾರತದಲ್ಲಿ ಅಂತಹ ಕಾಯ್ದೆಯಿಲ್ಲ. ಇದ್ದಿದ್ದರೆ ವಾಟ್ಸ್‌ಆ್ಯಪ್ ಅದನ್ನು ಪಾಲಿಸುತ್ತಿತ್ತು ಎಂದು ವಾಟ್ಸ್‌ಆ್ಯಪ್ ಪರ ವಕೀಲರು ಸೋಮವಾರ ಸುಪ್ರೀಂಕೋರ್ಟ್‌ಗೆ ಸ್ಪಷ್ಟನೆ ನೀಡಿದ್ದಾರೆ.