Asianet Suvarna News Asianet Suvarna News

ಪೌರತ್ವ ಕಾಯ್ದೆ ದೇಶದ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳುತ್ತಾ..?


1971ರಲ್ಲಿ ಅವತ್ತಿನ ಪೂರ್ವ ಪಾಕಿಸ್ತಾನ ಅಂದ್ರೆ ಇವತ್ತಿನ ಬಾಂಗ್ಲಾದೇಶದಲ್ಲಿ 30 ಲಕ್ಷ ಹಿಂದೂಗಳ ಮಾರಣಹೋಮ ನಡೀತು. 2 ಲಕ್ಷಕ್ಕೂ ಹೆಚ್ಚು ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಆಯ್ತು. ಆ ನರಕದಿಂದ ತಪ್ಪಿಸಿಕೊಳ್ಳೋದಕ್ಕೆ ಅಂತ ಮನೆ ಮಠ ಬಿಟ್ಟು ಬಂದವರು ಹೆಚ್ಚೂ ಕಡಿಮೆ 1 ಕೋಟಿಗೂ ಹೆಚ್ಚು ಹಿಂದೂಗಳು. 
 

Citizenship amendment Act taking away the citizenship of the country Muslims san
Author
First Published Mar 12, 2024, 10:10 PM IST | Last Updated Mar 12, 2024, 10:10 PM IST


ಪೌರತ್ವ ಕಾಯ್ದೆ...  4 ವರ್ಷಗಳ ಹಿಂದೆ ದೇಶಾದ್ಯಂತ ಭಾರೀ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿದ್ದ ಕಾನೂನು. ಈ ಕಾನೂನನ್ನ ನಾಲ್ಕು ವರ್ಷಗಳ ನಂತರ... ಲೋಕಸಭಾ ಚುನಾವಣೆ ಘೋಷಣೆಗೂ ಮೊದಲು ಮೋದಿ ಸರ್ಕಾರ ಜಾರಿ ಮಾಡಿದೆ. ಸಿಎಎ ಬಗ್ಗೆ ಪ್ರಶ್ನೆ ಬಂದಾಗಲೆಲ್ಲಾ ಅಮಿತ್ ಶಾ, ಈ ಕಾನೂನು ಜಾರಿಯಾಗೋದನ್ನ ತಡೆಯೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎನ್ನತ್ತಿದ್ರು.. ಯಾವುದೇ ದಿನ ಎಲೆಕ್ಷನ್‌ ಘೋಷಣೆಯಾಗುವ ಸ್ಥಿತಿ ಇದೆ. ಎಲೆಕ್ಷನ್ ಘೋಷಣೆಯಾದ ಮರುಕ್ಷಣವೇ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತೆ. ಹೀಗಾಗಿ ಸರ್ಕಾರ ಕೊನೇ ಹಂತದಲ್ಲಿ ಸಿಎಎ ಜಾರಿ ಆದೇಶ ಮಾಡಿದೆ.

2019ರ ಡಿಸೆಂಬರ್‌ ನಲ್ಲಿ ಬಿಜೆಪಿ ಸರ್ಕಾರ ಈ ಮಸೂದೆಯನ್ನ ಸಂಸತ್‌ ನಲ್ಲಿ ಮಂಡಿಸಿದಾಗ ಭಾರೀ ವಿರೋಧ ವ್ಯಕ್ತವಾಗಿತ್ತು... ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ವಿಧೇಯಕ ಅಂಗೀಕಾರಕೊಂಡು ರಾಷ್ಟ್ರಪತಿಗಳ ಅಂಕಿತ ಬಿದ್ದಾಗಲೂ ಆ ವಿರೋಧ ಮುಂದುವರಿದಿತ್ತು. ದೇಶಾದ್ಯಂತ ಪಿಎಫ್​ಐ ಕೃಪಾಪೋಷಿತ ಹಿಂಸಾಚಾರದ ಘಟನೆಗಳು ನಡೆದಿದ್ದವು. ಈ ಹಿಂಸಾಚಾರಕ್ಕೆ ಒಂದಷ್ಟು ರಾಜಕೀಯ ಪಕ್ಷಗಳ ಕುಮ್ಮಕ್ಕೂ ಇತ್ತು... ಈ ಕಾಯ್ದೆ ಈ ದೇಶದ ಮುಸ್ಲಿಮರ ವಿರುದ್ಧ ಅನ್ನೋ ಸುಳ್ಳೇ ಸುಳ್ಳು ಅಭಿಯಾನವೂ ನಡೆದಿತ್ತು.. ಆದ್ರೆ ಇವತ್ತಿನ ಸಂದರ್ಭದಲ್ಲಿ ಸಿಎಎಗೆ ಆ ಪರಿಯ ವಿರೋಧ ವ್ಯಕ್ತವಾಗ್ತಿಲ್ಲ. ಮುಸ್ಲಿಮರನ್ನ ಸಿಎಎ ವಿರುದ್ಧ ಎತ್ತಿಕಟ್ಟಿದ್ದ ಪಿಎಫ್​ಐ ಇವತ್ತು ಭಯೋತ್ಪಾದಕ ಸಂಘಟನೆ ಅನ್ನೋ ಹಣೆಪಟ್ಟಿ ಕಟ್ಟಿಕೊಂಡು ನಿಷೇಧಕ್ಕೊಳಗಾಗಿದೆ. ಬಿಜೆಪಿ ದೊಡ್ಡ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೆ ಅನ್ನುವ ವಾತಾವರಣ ಇರುವಾಗ ಸಿಎಎಗೆ ವಿರೋಧ ಮಾಡಿದರೆ ಇನ್ನಷ್ಟು ಮತ ಧೃವೀಕರಣ ಆಗಬಹುದು ಅಂತ ರಾಜಕೀಯ ಪಕ್ಷಗಳೂ ಇದನ್ನ ಗಟ್ಟಿಯಾಗಿ ವಿರೋಧಿಸುತ್ತಿಲ್ಲ.

ಹಾಗಿದ್ರೆ ಏನಿದು ಪೌರತ್ವ ಕಾಯ್ದೆ... ಈ ಕಾಯ್ದೆಗೆ ಮುಸ್ಲಿಮರು ಮತ್ತು ವಿರೋಧ ಪಕ್ಷಗಳ ವಿರೋಧ ಯಾಕೆ..? 2019ರ ಡಿಸೆಂಬರ್‌ನಲ್ಲಿ ಪೌರತ್ವಕಾಯ್ದೆಗೆ ತಿದ್ದುಪಡಿ ತಂದಿದೆ... ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶದ ಮುಸ್ಲಿಮೇತರರಿಗೆ ಪೌರತ್ವ ನೀಡುವ ಕಾನೂನಿದು. ಅವಿಭಜಿತ ಭಾರತದ ಹಿಂದೂ, ಬೌದ್ಧ, ಕ್ರಿಶ್ಚಿಯನ್, ಜೈನ್, ಸಿಖ್, ಪಾರ್ಸಿಗಳಿಗೆ ಪೌರತ್ವ ನೀಡುವ ಕಾನೂನು. 2014ಕ್ಕೂ ಮುನ್ನ ಭಾರತಕ್ಕೆ ಬಂದ ಎಲ್ಲ ಮುಸ್ಲಿಮೇತರರಿಗೆ ಪೌರತ್ವ ನೀಡುವ ಉದ್ದೇಶ ಈ ಕಾನೂನಿನದ್ದು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಂತಾ ಮುಸ್ಲಿಂ ದೇಶಗಳಲ್ಲಿನ ಅಲ್ಪಸಂಖ್ಯಾತರು ಧಾರ್ಮಿಕ ಕಾರಣಕ್ಕೆ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಅಂಥವರಿಗೆ ಭಾರತದಲ್ಲಿ ಪೌರತ್ವ ಕೊಡುವ ಕಾನೂನು ಕೆಲವೇ ದಿನಗಳಲ್ಲಿ ಜಾರಿಯಾಗಲಿದೆ.

ಈ ಕಾನೂನಿಗೆ ಈ ದೇಶದ ಮುಸ್ಲಿಮರ ವಿರೋಧ ಯಾಕೆ..? ಕಾಂಗ್ರೆಸ್‌ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ವಿರೋಧಿಸೋದ್ಯಾಕೆ..? ಅವರ ಪ್ರಕಾರ ಈ ಕಾನೂನಿನಲ್ಲಿ ಮುಸ್ಲಿಮರನ್ನೂ ಸೇರಿಸಬೇಕಿತ್ತು. ಕೇವಲ ಮುಸ್ಲಿಮೇತರರಿಗೆ ಮಾತ್ರ ಪೌರತ್ವ ಯಾಕೆ..? ಮುಸ್ಲಿಮರಿಗೂ ಕೊಡಿ ಅನ್ನೋದು ಅವರ ವಾದ. ಪೌರತ್ವ ಕಾಯ್ದೆ ವಿರುದ್ಧ ಈ ದೇಶದ ಮುಸ್ಲಿಮರನ್ನ ಎತ್ತಿಕಟ್ಟಲು ಎಂಥಾ ಷಡ್ಯಂತ್ರಗಳು ನಡೆದವು ಅಂದ್ರೆ ಈ ಕಾನೂನು ಜಾರಿಯಾದ್ರೆ ಮುಸ್ಲಿಮರ ಪೌರತ್ವ  ಕಿತ್ತುಕೊಳ್ಳಲಾಗುತ್ತೆ ಎಂದು ಸುಳ್ಳು ಸುದ್ದಿ ಎಬ್ಬಿಸಲಾಯ್ತು. ಅದರ ಪರಿಣಾಮ ದೇಶಾದ್ಯಂತ ಪ್ರತಿಭಟನೆ, ದಂಗೆ, ಹಿಂಸಾಚಾರ ನಡೀತು.. ವಾಸ್ತವದಲ್ಲಿ ಈ ಕಾನೂನು ಪೌರತ್ವ ಕೊಡುವ ಕಾನೂನೇ ಹೊರತು... ಕಿತ್ತುಕೊಳ್ಳುವ ಕಾನೂನಲ್ಲ.

ಅಖಂಡ ಭಾರತ ಒಡೆದು ಇಬ್ಭಾಗವಾಗಿದ್ದೇ ಧರ್ಮದ ಆಧಾರದ ಮೇಲೆ. ಮುಸ್ಲಿಮರ ಜನಸಂಖ್ಯೆ ಹೆಚ್ಚಿದ್ದ ಪ್ರದೇಶಗಳು ಪಾಕಿಸ್ತಾನವಾಗಿ, ಹಿಂದೂಗಳ ಜನಸಂಖ್ಯೆ ಹೆಚ್ಚಿದ್ದ ಪ್ರದೇಶಗಳು ಭಾರತವಾಯ್ತು. ಧರ್ಮದ ಆಧಾರದಲ್ಲಿ ಪ್ರತ್ಯೇಕ ದೇಶ ಮಾಡಿಕೊಂಡವರಿಗೆ ಮತ್ತೆ ಭಾರತಕ್ಕೆ ಬರುವ ಬಯಕೆ ಯಾಕೆ..? ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶ ಅಧಿಕೃತವಾಗಿ ಮುಸ್ಲಿಂ ದೇಶಗಳು. ಅಲ್ಲಿದ್ದ ಅಲ್ಪಸಂಖ್ಯಾತ ಹಿಂದೂಗಳನ್ನ, ಕ್ರಿಶ್ಚಿಯನ್ನರನ್ನ, ಬೌದ್ಧರನ್ನ, ಸಿಖ್ಖರನ್ನ ಮುಸ್ಲಿಮರಲ್ಲ ಅನ್ನೋ ಒಂದೇ ಕಾರಣಕ್ಕೆ ನಿರಂತರ ಹಿಂಸೆ, ಕಿರುಕುಳ, ದೌರ್ಜನ್ಯ ಮಾಡಲಾಯ್ತು... ಇಂಥಾ ಕಿರುಕುಳ ತಾಳಲಾರದೇ ಭಾರತಕ್ಕೆ ಬಂದು ಜೀವ ಉಳಿಸಿಕೊಂಡವರಿಗೆ ದೇಶದ ಪೌರತ್ವ ಕೊಟ್ಟರೆ ತಪ್ಪೇನು..? ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನದಿಂದ ಬರುವ ಮುಸ್ಲಿಮರಿಗೂ ಭಾರತದ ಪೌರತ್ವ ಯಾಕೆ ಕೊಡಬೇಕು..? ಧರ್ಮದ ಆಧಾರದ ಮೇಲೆ ದೇಶ ಮಾಡಿಕೊಂಡು ಆ ದೇಶಗಳನ್ನು ನರಕ ಮಾಡಿಕೊಂಡವರು.. ಈಗ ಅಲ್ಲಿನ ವ್ಯವಸ್ಥೆ ಸರಿಯಿಲ್ಲ... ನಾವು ಭಾರತಕ್ಕೆ ಬರ್ತೀವಿ, ಪೌರತ್ವ ಕೊಡಿ ಅಂದ್ರೆ ಕೊಡೋದಕ್ಕಾಗುತ್ತಾ..?

ಹಿಂದುಗಳ ಸಂಖ್ಯೆ 1947 2023
ಪಾಕಿಸ್ತಾನ 14.6% 1.3%
ಬಾಂಗ್ಲಾದೇಶ 28%  7.5%
ಆಫ್ಘಾನಿಸ್ತಾನ 05%  00

ಇದೊಂದು ಅಂಕಿ ಅಂಶ ನೋಡಿದ್ರೆ ಮುಸ್ಲಿಂ ದೇಶಗಳು ಅಲ್ಲಿನ ಅಲ್ಪಸಂಖ್ಯಾತರನ್ನ ಹೇಗೆ ನಡೆಸಿಕೊಂಡವು ಅನ್ನೋದು ಅರ್ಥವಾಗುತ್ತೆ... 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾದಾಗ ಅವತ್ತಿನ ಪಶ್ಚಿಮ ಪಾಕಿಸ್ತಾನ ಅಂದ್ರೆ ಇವತ್ತಿನ ಪಾಕಿಸ್ತಾನದಲ್ಲಿ ಶೇ.14.6 ರಷ್ಟು ಹಿಂದೂಗಳಿದ್ದರು... ಈಗ ಆ ಸಂಖ್ಯೆ ಕೇವಲ 1.3 ರಷ್ಟು... ಇನ್ನು 1947ರಲ್ಲಿ ಅವತ್ತಿನ ಪೂರ್ವ ಪಾಕಿಸ್ತಾನ ಅಂದ್ರೆ ಇವತ್ತಿನ ಬಾಂಗ್ಲಾದೇಶದಲ್ಲಿ ಶೇ.28ರಷ್ಟು ಹಿಂದೂಗಳಿದ್ದರು... ಆ ಸಂಖ್ಯೆ ಇವತ್ತಿಗೆ ಕೇವಲ ಶೇ. 7.5 ರಷ್ಟು... ಆಫ್ಘಾನಿಸ್ತಾನದ ವಿಷಯಕ್ಕೆ ಬಂದ್ರೆ 1947ರಲ್ಲಿ ಅಲ್ಲಿ ಶೇ.5ಷ್ಟು ಹಿಂದೂಗಳಿದ್ರು... ಈಗ ಅಲ್ಲಿ ಒಬ್ಬ ಹಿಂದೂ ಕಾಣಸಿಗೋದಿಲ್ಲ... ಹಾಗಿದ್ರೆ ಅವರೆಲ್ಲ ಏನಾದರು..? ಒಂದೋ ಇಸ್ಲಾಮಿಕ್‌ ದೇಶಗಳಲ್ಲಿನ ಮುಸ್ಲಿಮರ ದೌರ್ಜನ್ಯಕ್ಕೆ ನಲುಗಿ ಮತಾಂತರವಾದ್ರು... ಅಳಿದುಳಿದ ಕೆಲವರು ಜೀವ ಉಳಿಸಿಕೊಳ್ಳಲು ಬೇರೆ ದೇಶಗಳಿಗೆ ವಲಸೆ ಹೋದರು... ಹಾಗೆ ವಲಸೆ ಹೋದ ಬಹುಪಾಲು ಜನ ಬಂದಿದ್ದು ಭಾರತಕ್ಕೆ... ಅವರಿಗೆ ಭಾರತ ಬಿಟ್ಟರೆ ಹೋಗಲು ಇನ್ಯಾವುದೇ ದೇಶ ಇರಲಿಲ್ಲ...

ಒಂದು ಸಿಂಪಲ್ ಉದಾಹರಣೆ ಕೊಡ್ತೀನಿ. 1971ರಲ್ಲಿ ಅವತ್ತಿನ ಪೂರ್ವ ಪಾಕಿಸ್ತಾನ ಅಂದ್ರೆ ಇವತ್ತಿನ ಬಾಂಗ್ಲಾದೇಶದಲ್ಲಿ 30 ಲಕ್ಷ ಹಿಂದೂಗಳ ಮಾರಣಹೋಮ ನಡೀತು. 2 ಲಕ್ಷಕ್ಕೂ ಹೆಚ್ಚು ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಆಯ್ತು. ಆ ನರಕದಿಂದ ತಪ್ಪಿಸಿಕೊಳ್ಳೋದಕ್ಕೆ ಅಂತ ಮನೆ ಮಠ ಬಿಟ್ಟು ಬಂದವರು ಹೆಚ್ಚೂ ಕಡಿಮೆ 1 ಕೋಟಿಗೂ ಹೆಚ್ಚು ಹಿಂದೂಗಳು. ಈ ರೀತಿಯ ಹಿಂದೂಗಳ ಮಾರಣಹೋಮ ನಡೆದ ಹಲವು ಉದಾಹರಣೆಗಳಿವೆ. ಈ ಮುಸ್ಲಿಂ ದೇಶಗಳಲ್ಲಿದ್ದ ಹಿಂದೂ, ಕ್ರಿಶ್ಚಿಯನ್ನರಿಗೆ, ಬೌದ್ಧ, ಸಿಖ್ಖರಿಗೆ ಭಾರತ ಬಿಟ್ಟು ಬೇರೆ ಯಾವ ದೇಶಕ್ಕೆ ಹೋಗಿ ಜೀವ ಉಳಿಸಿಕೊಳ್ಳೋದಕ್ಕೆ ಸಾಧ್ಯ..? ಇಂಥವರಿಗೆ ಪೌರತ್ವ ಕೊಡಬಾರದಾ..? ಹಾಗೆ ಬಂದವರಿಗೆ ಪೌರತ್ವ ಕೊಡಿ, ಆದ್ರೆ ಮುಸ್ಲಿಮರಿಗೂ ಕೊಡಿ ಅನ್ನೋದು ಕಾಂಗ್ರೆಸ್‌ ಮತ್ತು ವಿಪಕ್ಷಗಳ ವಾದ. ಭಾರತದಲ್ಲಿ ಅಂದಾಜು 1 ಕೋಟಿಗೂ ಮೀರಿದ ಬಾಂಗ್ಲಾದೇಶಿ ಅಕ್ರಮ ಮುಸ್ಲಿಂ ವಲಸಿಗರಿದ್ದಾರೆ. ಬಹುಪಾಲು ಅಕ್ರಮ ವಲಸಿಗರಿರುವುದು ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ. ಅವರಿಗೂ ಪೌರತ್ವ ಕೊಡಿ ಅನ್ನೋದು ಪ್ರತಿಪಕ್ಷಗಳ ವಾದ. ಅಕ್ರಮವಾಗಿ ದೇಶಕ್ಕೆ ನುಗ್ಗಿದವರಿಗೆ ಪೌರತ್ವ ಕೊಟ್ಟು ಸನ್ಮಾನಿಸುವುದು ಜಗತ್ತಿನ ಯಾವ ದೇಶದಲ್ಲೂ ಇಲ್ಲದ ಕಾನೂನು. ಅದು ನಮ್ಮಲ್ಲಿ ಇರಲಿ ಅಂತಿವೆ ವಿಪಕ್ಷಗಳು. ಅದಕ್ಕೆ ಕಾರಣ ಮುಸ್ಲಿಂ ವೋಟ್‌ ಬ್ಯಾಂಕ್‌ ಅಷ್ಟೇ.

ಇಸ್ಲಾಮಿಕ್‌ ದೇಶಗಳ ಹಿಂದೂಗಳಿಗೆ ಇಲ್ಲಿ ಯಾಕೆ ಪೌರತ್ವ ಕೊಡಬೇಕು ಅಂದ್ರೆ..  ಅದು ದೇಶದ ಕಮಿಟ್ಮೆಂಟು... ಬದ್ಧತೆ.. ಸ್ವಾತಂತ್ರಾ ನಂತರ, ದೇಶ ವಿಭಜನೆಯ ನಂತರ ಗಾಂಧೀಜಿ ಏನ್‌ ಹೇಳಿದ್ರು ಗೊತ್ತಾ..?‘ಪಾಕಿಸ್ತಾನದಿಂದ ಭಾರತಕ್ಕೆ ಬರುವ ಹಿಂದೂ ಮತ್ತು ಸಿಖ್ಖರು ಅಲ್ಲಿ ಬದುಕಲು ಬಯಸದಿದ್ದರೆ ಯಾವುದೇ ಸಮಯದಲ್ಲಿ ಭಾರತಕ್ಕೆ ಬರಬಹುದು. ಹಾಗೆ ಬರುವ ಹಿಂದೂ ಮತ್ತು ಸಿಖ್ಖ್ ರಿಗೆ ಭಾರತದಲ್ಲಿ ಪೌರತ್ವ, ನೌಕರಿ, ರಕ್ಷಣೆ, ಶಿಕ್ಷಣ, ಗೌರವ ಪೂರ್ವಕ ಬದುಕು ಕಟ್ಟಿಕೊಡುವುದು ಭಾರತದ ಪ್ರಥಮ ಕರ್ತವ್ಯ’

ಜವಹರಲಾಲ್ ನೆಹರು 1947ರ ಸ್ವಾತಂತ್ರ ಸಂಭ್ರಮದಲ್ಲಿ ಹೇಳಿದ್ದೇನು ಗೊತ್ತಾ..? '' ದೇಶ ವಿಭಜನೆಯಿಂದ ನಮ್ಮಿಂದ ದೂರವಾಗಿರುವ ನಮ್ಮವರು ಈ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಏನೇ ಆದರೂ ಅವರು ನಮ್ಮವರೇ. ಅವರು ಎಂದಿಗೂ ನಮ್ಮವರಾಗಿಯೇ ಇರುತ್ತಾರೆ. ಅವರ ಸುಖ ದುಃಖದಲ್ಲಿ ಸಮವಾಗಿ ನಾವು ಭಾಗಿಯಾಗುತ್ತೇವೆ. ಅವರು ಯಾವಾಗ ಇಲ್ಲಿಗೆ ಬರಲು ನಿರ್ಧರಿಸುತ್ತಾರೆ ಆಗ ನಾವು ಅವರನ್ನ ಸ್ವೀಕಾರ ಮಾಡಿಕೊಳ್ಳಲಾಗುವುದು''

ಇನ್ನು 2008ರಿಂದ 2014ರವರೆಗೆ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಈ ವಿಷಯದಲ್ಲಿ ಏನ್‌ ಹೇಳಿದ್ರು ಅಂದ್ರೆ... 'ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರೋ ಹಿಂದೂಗಳು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ.. ಅಂತವರಿಗೆ ಮಾನವೀಯತೆಯ ಆಧಾರದ ಮೇಲೆ ಭಾರತೀಯ ಪೌರತ್ವ ನೀಡಬೇಕು''.

CAA Explainer: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ; ದೇಶದ ಮಹತ್ವದ ವಿಧೇಯಕದ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ

ಆದ್ರೆ ಈಗಿನ ಕಾಂಗ್ರೆಸ್‌ ನಾಯಕರು ಮತ್ತು ಪ್ರತಿಪಕ್ಷಗಳ ನಾಯಕರು ವೋಟ್ ಬ್ಯಾಂಕ್ ರಾಜಕಾರಣಕ್ಕೋಸ್ಕರ ಅಕ್ರಮವಾಗಿ ದೇಶದೊಳಕ್ಕೆ ನುಗ್ಗಿರೋ ಮುಸ್ಲಿಮರಿಗೂ ಪೌರತ್ವ ಕೊಡಿ ಅಂತಿವೆ. ಅಷ್ಟೇ ಅಲ್ಲ. ಸಿಎಎ ಜಾರಿಯಾದ್ರೆ ಭಾರತದಲ್ಲಿರೋ ಮುಸ್ಲಿಮರ ಪೌರತ್ವ ಹೋಗುತ್ತೆ ಅಂತ ಈ ರಾಜಕೀಯ ಪಕ್ಷಗಳು, ಎಡಪಂಥೀಯರು, ಬುದ್ಧಿಜೀವಿಗಳು ವಾದ ಮಾಡ್ತಿದ್ದಾರೆ... ಕಾರಣ ಮತ್ತದೇ ಮುಸ್ಲಿಂ ವೋಟ್ ಬ್ಯಾಂಕ್ ಪಾಲಿಟಿಕ್ಸ್.

 

'ರಂಜಾನ್‌ಗೂ ಮುನ್ನ ಜಾರಿ ಮಾಡಿದ್ದೀರಿ..' ಸಿಎಎ ನಿಯಮ ಜಾರಿಯ ಟೈಮಿಂಗ್‌ ಪ್ರಶ್ನಿಸಿದ ಕಾಂಗ್ರೆಸ್‌, ಟಿಎಂಸಿ!

Latest Videos
Follow Us:
Download App:
  • android
  • ios