Asianet Suvarna News Asianet Suvarna News

'ರಂಜಾನ್‌ಗೂ ಮುನ್ನ ಜಾರಿ ಮಾಡಿದ್ದೀರಿ..' ಸಿಎಎ ನಿಯಮ ಜಾರಿಯ ಟೈಮಿಂಗ್‌ ಪ್ರಶ್ನಿಸಿದ ಕಾಂಗ್ರೆಸ್‌, ಟಿಎಂಸಿ!

ಸಿಎಎ ನಿಯಮಗಳ ಅಧಿಸೂಚನೆಗಾಗಿ 9 ವಿಸ್ತರಣೆಗಳನ್ನು ಕೋರಿದ ನಂತರ, ಚುನಾವಣೆಗೆ ಮುನ್ನ ಸರಿಯಾದ ಸಮಯವನ್ನು ಚುನಾವಣೆಗಳನ್ನು ಧ್ರುವೀಕರಣಗೊಳಿಸಲು ಬಳಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

CAA implementation Congress Trinamool question timing of ahead of LS polls san
Author
First Published Mar 11, 2024, 8:42 PM IST

ನವದೆಹಲಿ (ಮಾ.11):  ಕೇಂದ್ರ ಗೃಹ ಸಚಿವಾಲಯ ಮಾರ್ಚ್ 11 ರಂದು ಪೌರತ್ವ ತಿದ್ದುಪಡಿ ಕಾಯ್ದೆ (CAA) ನಿಯಮಗಳನ್ನು ಜಾರಿ ಮಾಡಿದ ನಂತರ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಸಮುದಾಯಗಳ ನಡುವೆ ಇದು ತಾರತಮ್ಯ ಮಾಡಿದಲ್ಲಿ ಇದನ್ನು ವಿರೋಧ ಮಾಡುವುದಾಗಿ ತಿಳಿಸಿದ್ದಾರೆ. ಸಿಎಎ ಮತ್ತು ಎನ್‌ಆರ್‌ಸಿ ಪಶ್ಚಿಮ ಬಂಗಾಳ ಮತ್ತು ಈಶಾನ್ಯದ ಪಾಲಿಗೆ ಸೂಕ್ಷ್ಮ ವಿಚಾರವಾಗಿದೆ ಎಂದು ಹೇಳಿದ ಮಮತಾ ಬ್ಯಾನರ್ಜಿ, ಲೋಕಸಭೆ ಚುನಾವಣೆಗೆ ಮುನ್ನ ಅಶಾಂತಿಯನ್ನು ನಾವು ಬಯಸುವುದಿಲ್ಲ ಎಂದಿದ್ದಾರೆ. ಆರು ತಿಂಗಳ ಹಿಂದೆ ನೀವು ಈ ನಿಯಮಗಳನ್ನು ತಿಳಿಸಬೇಕಿತ್ತು. ಇದರಲ್ಲಿ ಒಳ್ಳೆಯ ವಿಚಾರಗಳಿದ್ದರೆ, ನಾವು ಯಾವಾಗಲೂ ಬೆಂಬಲ ನೀಡುತ್ತೇವೆ ಹಾಗೂ ಅದಕ್ಕೆ ಮೆಚ್ಚುಗೆ ಸೂಚಿಸುತ್ತೇವೆ.  ಆದರೆ, ಇದು ದೇಶಕ್ಕೆ ಒಳ್ಳೆಯದಾಗುವ ವಿಚಾರವಲ್ಲ ಎಂದಿದ್ದರೆ, ಟಿಎಂಸಿ ಖಂಡಿತವಾಗಿಯೂ ದನಿ ಎತ್ತುವುದು ಮಾತ್ರವಲ್ಲ ವಿರೋಧವನ್ನೂ ಮಾಡುತ್ತದೆ. ರಂಜಾನ್‌ಗೆ ಮುಂಚಿತವಾಗಿ ದಿನಾಂಕವನ್ನು ಯಾಕೆ ಆಯ್ಕೆ ಮಾಡಲಾಗಿದೆ ಎನ್ನುವುದು ನನಗೆ ಗೊತ್ತಿದೆ. ಜನರು ಶಾಂತವಾಗಿರಲು ಮತ್ತು ಯಾವುದೇ ವದಂತಿಗಳನ್ನು ಹಬ್ಬಿಸಬಾರದು ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ನಡುವೆ ಹಿರಿಯ ಕಾಂಗ್ರೆಸ್ ನಾಯಕ, ಜೈರಾಮ್ ರಮೇಶ್, ಚುನಾವಣೆಗೆ ಮುನ್ನ ಸಿಎಎಗೆ ನಿಯಮಗಳನ್ನು ತಿಳಿಸುವ ಕೇಂದ್ರದ ನಿರ್ಧಾರವು "ಚುನಾವಣೆಗಳನ್ನು ಧ್ರುವೀಕರಣಗೊಳಿಸುವ ನಿಟ್ಟಿನಲ್ಲಿಯೇ ಮಾಡಲಾಗಿದೆ" ಎಂದಿದ್ದಾರೆ. "ನಿಯಮಗಳ ಅಧಿಸೂಚನೆಗಾಗಿ 9 ವಿಸ್ತರಣೆಗಳನ್ನು ಕೋರಿದ ನಂತರ, ಚುನಾವಣೆಯ ಕೆಲವೇ ವಾರಗಳ ಮೊದಲು ಇನ್ನು ಜಾರಿ ಮಾಡಿರುವುದು ಚುನಾವಣೆಗಳನ್ನು ಧ್ರುವೀಕರಿಸುವ ಹುನ್ನಾರ. ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಮತ ಗಳಿಸುವ ನಿಟ್ಟಿನಲ್ಲಿ ಇದನ್ನು ಮಾಡಲಾಗಿದೆ" ಎಂದು ಅವರು ಎಕ್ಸ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

2019ರಲ್ಲಿ ಸಂಸತ್ತಿನಲ್ಲಿ ಈ  ಮಸೂದೆಗೆ ಅಂಗೀಕರಿಸಲಾಗಿತ್ತು. ಇದರ ಬೆನ್ನಲ್ಲಿಯೇ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳದಿಂದಾಗಿ ಭಾರತಕ್ಕೆ ವಲಸೆ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ಈ ಕಾಯ್ದೆಯ ಅಡಿಯಲ್ಲಿ ಸಿಗುತ್ತದೆ. ಆದರೆ, ನೆರೆಯ ದೇಶದ ಮುಸ್ಲಿಮರಿಗೆ ಸಿಎಎ ಅಡಿಯಲ್ಲಿ ಭಾರತದ ಪೌರತ್ವ ಸಿಗೋದಿಲ್ಲ.

ಸಿಎಎ ದೇಶದ ಕಾಯಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಹೇಳಿದ್ದರು. ಕಾನೂನು ಯಾರ ಪೌರತ್ವವನ್ನೂ ಕಿತ್ತುಕೊಳ್ಳುವುದಿಲ್ಲ ಎಂದು ಅಲ್ಪಸಂಖ್ಯಾತರಿಗೆ ಭರವಸೆ ನೀಡಿದ್ದರು. “ಸಿಎಎ ದೇಶದ ಕಾಯಿದೆ... ಇದನ್ನು ಚುನಾವಣೆಗೂ ಮುನ್ನ ಜಾರಿ ಮಾಡಲಿದ್ದೇವೆ. ಅದರ ಸುತ್ತ ಯಾವುದೇ ಗೊಂದಲ ಇರಬಾರದು. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. CAA ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಕಾಯಿದೆಯಲ್ಲಿ ಇದಕ್ಕೆ ಯಾವುದೇ ಅವಕಾಶವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವವನ್ನು ನೀಡುವ ಕಾಯಿದೆ' ಎಂದು ಅಮಿತ್‌ ಶಾ ಹೇಳಿದ್ದರು.
 

Follow Us:
Download App:
  • android
  • ios