ಏರ್‌ಪೋರ್ಟ್‌ನಲ್ಲಿ ಬಿಜೆಪಿ ನೂತನ ಸಂಸದೆ ನಟಿ ಕಂಗನಾ ಕೆನ್ನೆಗೆ ಬಾರಿಸಿದ ಸಿಐಎಸ್ಎಫ್ ಕಾನ್ಸ್‌ಟೇಬಲ್ ಅರೆಸ್ಟ್
ಬಾಲಿವುಡ್ ನಟಿ, ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ವಿಮಾನ ನಿಲ್ದಾಣದಲ್ಲಿ ಕೆನ್ನೆಗೆ ಬಾರಿಸಿದ ಸಿಐಎಸ್‌ಎಫ್ ಕಾನ್ಸ್‌ಟೇಬಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ನವದೆಹಲಿ: ಬಾಲಿವುಡ್ ನಟಿ, ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ವಿಮಾನ ನಿಲ್ದಾಣದಲ್ಲಿ ಕೆನ್ನೆಗೆ ಬಾರಿಸಿದ ಸಿಐಎಸ್‌ಎಫ್ ಕಾನ್ಸ್‌ಟೇಬಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ದೆಹಲಿಗೆ ತೆರಳುವುದಕ್ಕಾಗಿ ಚಂಡಿಗಢ ವಿಮಾನ ನಿಲ್ದಾಣಕ್ಕೆ ನಟಿ ಕಂಗನಾ ರಣಾವತ್ ಆಗಮಿಸಿದ ವೇಳೆ ಈ ಘಟನೆ ನಡೆದಿತ್ತು. ವಿಮಾನ ನಿಲ್ದಾಣದ ಭದ್ರತೆಗೆ ಇರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಅವರು ನಟಿ, ಸಂಸದೇ ಕಂಗಾನ ಮೇಲೆ ವಿಮಾನ ನಿಲ್ದಾಣದಲ್ಲಿಯೇ ಹಲ್ಲೆ ಮಾಡಿದ್ದರು. ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಘಟನೆಯ ಬಳಿಕ ಕಾನ್ಸ್ಟೇಬಲ್ ಕುಲ್ವೀಂದರ್ ಕೌರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಈಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಕಂಗನಾ ರಣಾವತ್ ಅವರು ರೈತರ ಬಗ್ಗೆ ನೀಡಿದ ಹೇಳಿಕೆಯೊಂದರ ಹಳೆ ವೀಡಿಯೋದಿಂದ ಪ್ರಚೋದನೆಗೊಂಡು ಕುಲ್ವಿಂದರ್ ಕೌರ್ ನಟಿಗೆ ಬಾರಿಸಿದ್ದಾರೆ ಎಂದರೆ ಸಂಸದೀಯ ಭದ್ರತಾ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. 2020ರಿಂದಲೂ ಪಂಜಾಬ್‌ನಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದು, ಎರಡು ವರ್ಷಗಳ ಹಿಂದೆ ಪಂಜಾಬ್‌ನಲ್ಲಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ, ಈ ಪ್ರತಿಭಟನೆಯಲ್ಲಿ ವಿದೇಶಿಗರ ಕೈವಾಡ ಇರುವ ಬಗ್ಗೆ ಹಲವಾರು ವರದಿಗಳು ಬಂದಿದ್ದವು. ಅದನ್ನೇ ಆಧರಿಸಿ ನಟಿ ಕಂಗನಾ ಅವರು, ರೈತರ ವಿರುದ್ಧ ಮಾತನಾಡಿದ್ದರು.
ಪಂಜಾಬ್ ಉಗ್ರವಾದವನ್ನು ಪ್ರಶ್ನಿಸುತ್ತಲೇ ಕೆನ್ನೆಗೆ ಹೊಡೆದ ಘಟನೆಗೆ ಪ್ರತಿಕ್ರಿಯೆ ನೀಡಿದ ಕಂಗನಾ
ರೈತರು 100 ರೂಪಾಯಿ ಪಡೆದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಂಗನಾ ದೂರಿದ್ದರು. ಈಕೆ ಅಲ್ಲಿ ಹೋಗಿ ಕೂರುತ್ತಾರಾ? ಆಕೆ ಈ ರೀತಿ ಹೇಳಿಕೆ ನೀಡುವ ವೇಳೆ ನನ್ನ ತಾಯಿಯೂ ಅಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದರು ಎಂದು ಕುಲ್ವಿಂದರ್ ಹೇಳಿಕೆ ನೀಡಿದ್ದರು. 2020 ರಲ್ಲಿ ಕೇಂದ್ರವು ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ಮಾಡುತ್ತಿದ್ದರು.
ಘಟನೆಯ ಬಳಿಕ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ನಟಿ ಕಂಗನಾ , ಏರ್‌ಪೋರ್ಟ್‌ನ ಸೆಕ್ಯೂರಿಟಿ ಚೆಕ್ಇನ್‌ನಲ್ಲಿ ಘಟನೆ ನಡೆಯಿತು. ಮಹಿಳಾ ಕಾನ್ಸ್‌ಟೇಬಲ್ ನಾನು ಪಾಸಾಗುವುದಕ್ಕೆ ಕಾಯುತ್ತಿದ್ದು, ಸೀದಾ ಬಂದು ನನಗೆ ಹೊಡೆದಳು. ಅಲ್ಲದೇ ಕೆಟ್ಟದಾಗಿ ನಿಂದಿಸಿದಳು, ಏಕೆ ನನಗೆ ಹೊಡೆದೆ ಎಂದು ನಾನು ಆಕೆಯನ್ನು ಕೇಳಿದೆ. ಅದಕ್ಕೆ ಆಕೆ ನಾನು ರೈತರನ್ನು ಬೆಂಬಲಿಸುವುದಾಗಿ ಹೇಳಿದಳು, ಸದ್ಯ ನಾನು ಸುರಕ್ಷಿತವಾಗಿದ್ದೇನೆ. ಆದರೆ ನನ್ನ ಕಳವಳ ಎಂದರೆ ಪಂಜಾಬ್‌ನಲ್ಲಿ ಭಯೋತ್ಪಾದನೆ ಹೆಚ್ಚಳವಾಗಿದೆ. ನಾವು ಅದನ್ನು ನಿರ್ವಹಿಸುವುದು ಹೇಗೆ ಎಂಬುದು ಎಂದು ಕಂಗನಾ ಟ್ವಿಟ್ ಮಾಡಿದ್ದಾರೆ.