ನವದೆಹಲಿ(ಮೇ.20): ಭಾರತ ಹಾಗೂ ಚೀನಾ ಮಧ್ಯೆ ಗಡಿಯಲ್ಲಿ ಬಿಕ್ಕಟ್ಟು ಹೆಚ್ಚುತ್ತಲೇ ಇದ್ದು, ಅಕ್ಸಾಯ್‌ ಚಿನ್‌ ಪ್ರದೇಶದ ಗಲ್ವಾನ್‌ ಕಣಿವೆ ಪ್ರದೇಶದಲ್ಲಿ ಚೀನಾ ಹೆಚ್ಚಿನ ಸಂಖ್ಯೆಯ ಸೇನಾ ಟೆಂಟ್‌ಗಳನ್ನು ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಚೀನಾದ ಚಟುವಟಿಕೆಗಳ ಮೇಲೆ ಭಾರತ ಹದ್ದಿನ ಕಣ್ಣಿಟ್ಟಿದೆ.

ನಮ್ಮ ಜಾಗ, ಪಾಕಿಸ್ತಾನದ ಅತಿಕ್ರಮಣ, ಚೀನಾದ ಅಣೆಕಟ್ಟು, ಬೌದ್ಧ ಶಿಲ್ಪಗಳು ಅನಾಥ!

ಇದೇ ವೇಳೆ ಲಡಾಖ್‌ ಮತ್ತು ಉತ್ತರ ಸಿಕ್ಕಿಂ ಗಡಿ ಪ್ರದೇಶ ಹಾಗೂ ಭಾರತದ ಜೊತೆ ಗಡಿ ನಿರ್ಣಯವಾಗದ ಸ್ಥಳಗಳಲ್ಲಿ ಚೀನಾ ಹೆಚ್ಚಿನ ಸಂಖ್ಯೆಯ ಸೇನಾ ತುಕಡಿಗಳನ್ನು ಕಳುಹಿಸಿಕೊಟ್ಟಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಗಡಿ ಪ್ರದೇಶಕ್ಕೆ ಸೇನೆಯನ್ನು ಜಮಾವಣೆ ಮಾಡಿದೆ. ಈ ಬೆಳವಣಿಗೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಇನ್ನಷ್ಟುಹೆಚ್ಚಿಸಿದೆ.

ಗಡಿಯಲ್ಲಿ ಚೀನಾದಿಂದ ಇನ್ನಷ್ಟು ಸೈನಿಕರ ಜಮಾವಣೆ!

ಕಳೆದ ಆರು ದಶಕಗಳಿಂದ ಗಲ್ವಾನ್‌ ಪ್ರದೇಶಕ್ಕೆ ಸಂಬಂಧಿಸಿದಂತೆ ಚೀನಾ ಕ್ಯಾತೆ ತೆಗೆಯುತ್ತಲೇ ಇದೆ. 1962ರಲ್ಲಿ ಭಾರತ ಮತ್ತು ಚೀನಾ ಮಧ್ಯೆ ಇದೇ ವಿಚಾರವಾಗಿ ಯುದ್ಧ ಏರ್ಪಟ್ಟಿತ್ತು. ಇದೀಗ ಅಕ್ಸಾಯ್‌ ಚೀನಾದ ಗಲ್ವಾನ್‌ ಕಣಿವೆಗೆ ಸಂಬಂಧಿಸಿದಂತೆ ಚೀನಾ ಮತ್ತೆ ಕಾಲು ಕೆದರಿ ಜಗಳ ಕಾಯುತ್ತಿದೆ. ಮೇ 5ರಂದು ಗಡಿಯಲ್ಲಿ ಮುಖಾಮುಖಿಯಾಗಿದ್ದ ಭಾರತ ಹಾಗೂ ಚೀನಾ ಯೋಧರು ಕೈ ಕೈ ಮಿಲಾಯಿಸಿ ಘಟನೆ ನಡೆದಿತ್ತು. ಕಬ್ಬಿಣದ ರಾಡ್‌ ಹಾಗೂ ಬಡಿಗೆಯಿಂದ ಹೊಡೆದಾಡಿಕೊಂಡಿದ್ದರು.