ಮತ್ತೆ ಚೀನಾ ಗಡಿ ಕಿರಿಕ್, ಲಡಾಖ್‌ನಲ್ಲಿ 12 ಯುದ್ಧ ವಿಮಾನಗಳ ಹಾರಾಟ!
ಲಡಾಖ್ ಗಡಿ ಬಳಿ ಚೀನಾ ಯುದ್ಧವಿಮಾನ ಹಾರಾಟ| ಗಡಿಯಿಂದ 30 ಕಿ.ಮೀ. ದೂರದಲ್ಲಿ ನಿಯೋಜನೆ| ಭಾರತದದಿಂದ ತೀವ್ರ ನಿಗಾ
ನವದೆಹಲಿ/ಬೀಜಿಂಗ್(ಜೂ.02): ಭಾರತ-ಚೀನಾ ನಡುವೆ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ತ್ವೇಷಮಯ ಸ್ಥಿತಿ ಸೃಷ್ಟಿಯಾಗಿರುವ ನಡುವೆಯೇ ಚೀನಾದ ಯುದ್ಧವಿಮಾನಗಳು ಪೂರ್ವ ಲಡಾಖ್ ಗಡಿಯಿಂದ 30 ಕಿ.ಮೀ. ದೂರದಲ್ಲಿ ಹಾರಾಟ ನಡೆಸಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಲಡಾಖ್ ಗಡಿಯಲ್ಲಿ ಭಾರತ ತೀವ್ರ ನಿಗಾ ಇರಿಸಿದೆ.
ಪೂರ್ವ ಲಡಾಖ್ ಸಮೀಪ ಚೀನಾ ವಾಯುಪಡೆಯು ಹೋಟನ್ ಹಾಗೂ ಗರ್ಗುನ್ಸಾ ಎಂಬಲ್ಲಿ 2 ವಾಯುನೆಲೆ ಹೊಂದಿದೆ. ಈ ವಾಯುನೆಲೆಯಲ್ಲಿ 10-12 ಯುದ್ಧವಿಮಾನಗಳನ್ನು ಚೀನಾ ನಿಯೋಜಿಸಿದೆ. ಇವು ಪೂರ್ವ ಲಡಾಖ್ ಗಡಿಯಿಂದ 30 ಕಿ.ಮೀ. ದೂರದಲ್ಲಿ ಹಾರಾಟ ನಡೆಸಿರುವುದು ಕಂಡುಬಂದಿದೆ.
ಚೀನಾ ಗಡಿಗೆ ನಮೋ ಭೇಟಿ: ಮೋದಿ ಸೀಕ್ರೇಟ್ ಗುಟ್ಟೇನು?
‘ಗಡಿಯಿಂದ ವಿಮಾನಗಳು ಹಾರಿದ ದೂರವನ್ನು ಗಮನಿಸಿದರೆ ಆತಂಕವೇನೂ ಇಲ್ಲ. ಆದರೂ ಭಾರತವು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಏಕೆಂದರೆ ಕೆಲವೇ ನಿಮಿಷಗಳಲ್ಲಿ ಈ ಯುದ್ಧ ವಿಮಾನಗಳು ನಮ್ಮ ಗಡಿವರೆಗೆ ಆಗಮಿಸಬಹುದು’ ಎಂದು ಭಾರತದ ಭದ್ರತಾ ಪಡೆ ಮೂಲಗಳು ತಿಳಸಿವೆ.
‘ಚೀನಾ ವಾಯುನೆಲೆಯ ಮೇಲೆ ಭಾರತ ಹದ್ದಿನ ಕಣ್ಣು ಇರಿಸಿದೆ. ಗಡಿಯಲ್ಲಿ ಭದ್ರತೆಯಲ್ಲಿದ್ದ ಲೋಪದೋಷವನ್ನೆಲ್ಲ ಸರಿಪಡಿಸಲಾಗಿದೆ’ ಎಂದು ಅವು ಹೇಳಿವೆ.
ಲಡಾಖ್ ಗಡಿಯಲ್ಲಿ ಭಾರತ ಹಾಗೂ ಚೀನಾ ಸೇನೆಯ ಹೆಲಿಕಾಪ್ಟರ್‌ಗಳು ಕಳೆದ ತಿಂಗಳು ಅತ್ಯಂತ ಹತ್ತಿರದಲ್ಲೇ ಹಾರಾಡಿದ್ದವು. ಹೀಗಾಗಿ ಮೇ ಮೊದಲ ವಾರದಿಂದಲೇ ಪೂರ್ವ ಲಡಾಖ್‌ನಲ್ಲಿ ಭಾರತವು ಯುದ್ಧವಿಮಾನ ನಿಯೋಜಿಸಿದೆ.
ಮಾತುಕತೆ ಮೂಲಕ ಇತ್ಯರ್ಥ- ಚೀನಾ:
ಈ ನಡುವೆ, ಭಾರತದ ಜತೆಗೆ ಗಡಿ ವಿಚಾರದಲ್ಲಿ ಕಾಲು ಕೆದರಿ ನಿಂತಿರುವ ಚೀನಾ, ‘ಎರಡೂ ದೇಶಗಳ ನಡುವಿನ ಗಡಿಯಲ್ಲಿ ಈಗ ಪರಿಸ್ಥಿತಿ ಸ್ಥಿರವಾಗಿದೆ. ಉಭಯ ದೇಶಗಳು ಗಡಿ ವಿಚಾರವನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸಿಕೊಳ್ಳುತ್ತವೆ’ ಎಂದು ಹೇಳಿದೆ.