ಈಗ ಅರುಣಾಚಲ ಬಳಿ 3 ಚೀನಾ ಹಳ್ಳಿ ಸೃಷ್ಟಿ!| ಲಡಾಖ್‌ ಸಂಘರ್ಷದ ಸಂದರ್ಭವೇ ನಿರ್ಮಾಣ| ಅರುಣಾಚಲ ಮೇಲೆ ಹಕ್ಕು ಸಾಧಿಸಲು ಪ್ರಯತ್ನ

ನವದೆಹಲಿ(ಡಿ.07): ಭೂತಾನ್‌ಗೆ ಸೇರಿದ ಭೂಭಾಗದಲ್ಲಿ ಅಕ್ರಮವಾಗಿ ಗ್ರಾಮವೊಂದನ್ನು ನಿರ್ಮಿಸಿದ್ದ ಚೀನಾ ಈಗ ತನ್ನ ಕುತಂತ್ರ ಬುದ್ಧಿಯನ್ನು ಅರುಣಾಚಲಪ್ರದೇಶ ಗಡಿ ಸಮೀಪವೂ ತೋರಿದ್ದು, ಸದ್ದಿಲ್ಲದೆ 3 ಹಳ್ಳಿಗಳನ್ನು ನಿರ್ಮಾಣ ಮಾಡಿರುವ ಸಂಗತಿ ಉಪಗ್ರಹ ಚಿತ್ರಗಳಿಂದ ಬೆಳಕಿಗೆ ಬಂದಿದೆ.

ಅರುಣಾಚಲ ಟಿಬೆಟ್ ಜೊತೆ ಗಡಿ ಹಂಚಿಕೊಂಡಿದೆ ಹೊರತು ಚೀನಾ ಅಲ್ಲ; ತಿರುಗೇಟು ನೀಡಿದ CM ಖಂಡು!

ಪಶ್ಚಿಮ ಅರುಣಾಚಲಪ್ರದೇಶದಲ್ಲಿರುವ, ಭಾರತ- ಚೀನಾ- ಭೂತಾನ್‌ ಗಡಿಗಳು ಸಂಧಿಸುವ ಬೂಮ್‌ ಲಾ ಪಾಸ್‌ನಿಂದ ಕೇವಲ 5 ಕಿ.ಮೀ. ದೂರದಲ್ಲಿ ಹೊಸ ಹಳ್ಳಿಗಳನ್ನು ಚೀನಾ ನಿರ್ಮಾಣ ಮಾಡಿದೆ. ಈ ಹಳ್ಳಿಗಳಲ್ಲಿ ಕುಡಿಯುವ ನೀರು, ವಿದ್ಯುಚ್ಛಕ್ತಿ, ಇಂಟರ್ನೆಟ್‌ ಸೌಲಭ್ಯ, ಸರ್ವಋುತು ಡಾಂಬರು ರಸ್ತೆಯನ್ನು ಸೃಷ್ಟಿಸಲಾಗಿದೆ. ಕಮ್ಯುನಿಸ್ಟ್‌ ಪಕ್ಷಕ್ಕೆ ಸೇರಿದ ಹ್ಯಾನ್‌ ಚೀನಿಸ್‌ ಹಾಗೂ ಟಿಬೆಟಿಯನ್‌ ಸದಸ್ಯರನ್ನು ಗ್ರಾಮಸ್ಥರನ್ನಾಗಿ ಮಾಡಲಾಗಿದೆ.

ಅರುಣಾಚಲಪ್ರದೇಶದ ಮೇಲೆ ತನ್ನ ಹಕ್ಕು ಮಂಡಿಸಲು ಚೀನಾ ಈ ರೀತಿ ಹಳ್ಳಿಗಳನ್ನು ಸೃಷ್ಟಿಸುವ ತಂತ್ರದಲ್ಲಿ ತೊಡಗಿದೆ. ತನ್ಮೂಲಕ ಗಡಿಯಲ್ಲಿ ಒಳನುಸುಳುವಿಕೆ ಹೆಚ್ಚಿಸುವ ಉದ್ದೇಶವನ್ನು ಹೊಂದಿರುವಂತಿದೆ ಎಂದು ಚೀನಾ ವಿಷಯಗಳ ತಜ್ಞ ಡಾ| ಬ್ರಹ್ಮ ಚೆಲ್ಲನೇ ತಿಳಿಸಿದ್ದಾರೆ.

ಅರುಣಾಚಲಕ್ಕೆ ಚೀನಾ 3.5 ಲಕ್ಷ ರೂ. ಕೋಟಿ ರೈಲ್ವೆ ಮಾರ್ಗ!

ಕಳೆದ ಮೇ ತಿಂಗಳಿನಿಂದ ಪೂರ್ವ ಲಡಾಖ್‌ ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವೆ ಸಂಘರ್ಷ ಏರ್ಪಟ್ಟಿದೆ. ಅದೇ ಸಮಯದಲ್ಲಿ ಇತ್ತ ಅರುಣಾಚಲಪ್ರದೇಶದ ಸಮೀಪ ಚೀನಾ ಹಳ್ಳಿಗಳನ್ನು ನಿರ್ಮಾಣ ಮಾಡಿದೆ. ಪ್ಲಾನೆಟ್‌ ಲ್ಯಾಬ್ಸ್‌ ಸಂಸ್ಥೆ ಹೊಂದಿರುವ 2020ರ ಫೆ.17ರ ಉಪಗ್ರಹ ಚಿತ್ರದ ಪ್ರಕಾರ, ಕೇವಲ ಒಂದು ಗ್ರಾಮವನ್ನು ಆಗ ನಿರ್ಮಾಣ ಮಾಡಲಾಗುತ್ತಿತ್ತು. 20 ಕೆಂಪು ತಡಿಕೆಯ ಮನೆಗಳನ್ನು ಸೃಷ್ಟಿಸಲಾಗಿತ್ತು. ಆದರೆ 2020ರ ನ.28ರಂದು ಸೆರೆಹಿಡಿಯಲಾಗಿರುವ ಉಪಗ್ರಹ ಚಿತ್ರದ ಪ್ರಕಾರ ಕನಿಷ್ಠ 50 ಮನೆಗಳನ್ನು ಒಳಗೊಂಡ ಇನ್ನೂ ಮೂರು ಗ್ರಾಮಗಳನ್ನು ನಿರ್ಮಾಣ ಮಾಡಲಾಗಿದೆ.

ಅರುಣಾಚಲಪ್ರದೇಶ ತನ್ನದೆಂದು ಚೀನಾ ಮೊದಲಿನಿಂದಲೂ ವಾದಿಸಿಕೊಂಡು ಬಂದಿದೆ. ಆದರೆ ಭಾರತ ಮಾತ್ರ ಅರುಣಾಚಲಪ್ರದೇಶ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿಕೊಂಡು ಬಂದಿದೆ.