ಅಮೆರಿಕದೊಂದಿಗಿನ ವ್ಯಾಪಾರ ತಿಕ್ಕಾಟದ ಹಿನ್ನೆಲೆಯಲ್ಲಿ ಚೀನಾ ಭಾರತದೊಂದಿಗೆ ಸಂಬಂಧ ವೃದ್ಧಿಸಲು ಮುಂದಾಗಿದೆ. ೨೦೨೫ರ ಆರಂಭದಿಂದ ಏಪ್ರಿಲ್ ೯ರವರೆಗೆ ೮೫,೦೦೦ ಭಾರತೀಯರಿಗೆ ವೀಸಾ ನೀಡಿ ದಾಖಲೆ ಬರೆದಿದೆ. ವೀಸಾ ನೀತಿ ಸಡಿಲಿಸಿ, ಆನ್‌ಲೈನ್ ಅಪಾಯಿಂಟ್‌ಮೆಂಟ್ ರದ್ದುಗೊಳಿಸಿ, ಬಯೋಮೆಟ್ರಿಕ್ ನಿಯಮ ಸಡಿಲಿಸಿ, ಭಾರತೀಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ನವದೆಹಲಿ(ಏ.16) ಭಾರತ ಹಾಗೂ ಚೀನಾ ನಡುವಿನ ಸಂಬಂಧ ಹೇಳಿಕೊಳ್ಳುವಂತೇನಿಲ್ಲ. ಗಲ್ವಾನ್ ಕಣಿವೆ ಘರ್ಷಣೆ ಬಳಿಕ ಉಭಯ ರಾಷ್ಟ್ರಗಳ ನಡುವೆ ಸಂಘರ್ಷವೇ ಹೆಚ್ಚು. ಹೀಗಾಗಿ ಭಾರತೀಯರಿಗೆ ಚೀನಾ ವೀಸಾ ಸುಲಭದಲ್ಲಿ ಸಿಗುವುದಿಲ್ಲ. ಇಷ್ಟೇ ಅಲ್ಲ ಹಲವು ಬಾರಿ ಭಾರತೀಯರಿಗೆ ಚೀನಾ ವೀಸಾ ನಿರಾಕರಿಸಿ ವಿವಾದ ಸೃಷ್ಟಿಸಿದ ಉದಾಹರಣೆಯೂ ಇದೆ. ಆದರೆ ಇದೀಗ ಚೀನಾಗೆ ಭಾರತದ ಸಖ್ಯ ಬೇಕಿದೆ. ಭಾರತವನ್ನು ಆಪ್ತ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಗಳು ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಡೋನಾಲ್ಡ್ ಟ್ರಂಪ್ ವಿಧಿಸುತ್ತಿರುವ ಒಂದೊಂದು ನೀತಿ. ಟ್ರಂಪ್ ಬೆದರಿಕೆ ಬಳಿಕ ಭಾರತದೊಂದಿದೆ ವ್ಯಾಪಾರ ವಹಿವಾಟನ್ನು ಮತ್ತಷ್ಟು ವೃದ್ಧಿಸಲು ಬಯಸಿರುವ ಚೀನಾ ಇದೀಗ ಕೆಲವೇ ದಿನಗಳಲ್ಲಿ ಬರೋಬ್ಬರಿ 85,000 ಭಾರತೀಯರಿಗೆ ವೀಸಾ ಗ್ರ್ಯಾಂಟ್ ಮಾಡಿದೆ.
ದಾಖಲೆ ಬರೆದ ಚೀನಾ
ನವದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ಕೆಲ ಮಹತ್ವದ ಮಾಹಿತಿ ಬಿಡುಗಡೆ ಮಾಡಿದೆ. ಜನವರಿ 1, 2025ರಿಂದ ಎಪ್ರಿಲ್ 9, 2025ರ ಅವಧಿಯಲ್ಲಿ ಚೀನಾ ಬರೋಬ್ಬರಿ 85,000 ಭಾರತೀಯರಿಗೆ ವೀಸಾ ನೀಡಿದೆ. ಇದು ದಾಖಲೆಯಾಗಿದೆ. ಅಮೆರಿಕದ ತೆರಿಗೆ ನೀತಿ ಸೇರಿದಂತ ಕಠಿಣ ನಿಯಮಗಳಿಂದ ಇದೀಗ ಚೀನಾ, ಭಾರತದ ಜೊತೆ ಆತ್ಮೀಯವಾಗಲು ಬಯಸಿದೆ. ಇದರ ಮೊದಲ ಹೆಜ್ಜೆಯಾಗಿ ಚೀನಾ ಕ್ಷಿಪ್ರ ಕಾರ್ಯಾಚರಣೆ ಮೂಲಕ ವೀಸಾ ನೀಡುತ್ತಿದೆ.
ಚೀನಾದಿಂದ ಅಮೆರಿಕಕ್ಕೆ ಮತ್ತೊಂದು ಶಾಕ್: ಯುಎಸ್‌ನ ಸೆಮಿಕಂಡಕ್ಟರ್, ಐಟಿ ವಲಯಕ್ಕೆ ಭಾರೀ ಹೊಡೆತ
ಭಾರತ-ಚೀನಾ ದ್ವಿಪಕ್ಷೀಯ ಸಂಬಂಧ
ಭಾರತೀಯ ಸ್ನೇಹಿತರನ್ನು ಚೀನಾ ಆತ್ಮೀಯವಾಗಿ ಸ್ವಾಗತಿಸುತ್ತಿದೆ. ಸುರಕ್ಷಿತ, ವೈವಿದ್ಯಮಯ,ಆತ್ಮೀಯ ಹಾಗೂ ಸುಂದರ ಚೀನಾಗೆ ಭಾರತೀಯರಿಗೆ ಸ್ವಾಗತ ಎಂದು ನವದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿಯ ಅಧಿಕಾರಿ ಕ್ಸು ಫೀಹಾಂಗ್ ಹೇಳಿದ್ದಾರೆ. ಈ ವರ್ಷದ ಕೆಲವೇ ತಿಂಗಳಲ್ಲಿ 85,000ಕ್ಕೂ ಹೆಚ್ಚು ಭಾರತೀಯರಿಗೆ ಚೀನಾ ವೀಸಾ ನೀಡಿದೆ. ಇಧು ಭಾರತ ಹಾಗೂ ಚೀನಾ ದ್ವಿಪಕ್ಷೀಯ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಭಾರತೀಯರಿಗೆ ವೀಸಾ ನೀತಿ ಸಡಿಲೀಕರಣ
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀತಿಯಿಂದ ಚೀನಾ ಕೆರಳಿದೆ. ಪ್ರತಿಯಾಗಿ ಚೀನಾ ಕೂಡ ಕೆಲ ತೆರಿಗೆ ಹೆಚ್ಚಳ ಮಾಡಿದೆ. ಇದರ ಪರಿಣಾಮ ಚೀನಾ, ಭಾರತವನ್ನು ಉತ್ತಮ ಸ್ನೇಹಿತನಾಗಿ ಮಾಡಿ ಅಮರಿಕದಿಂದ ಆಗಿರುವ ನಷ್ಟವನ್ನು ಸರಿದೂಗಿಸಲು ನೋಡುತ್ತಿದೆ. ಹೀಗಾಗಿ ಭಾರತದ ಜೊತೆ ಸಖ್ಯ ಬೆಳೆಸುತ್ತಿದೆ. ಭಾರತೀಯರಿಗಾಗಿ ಚೀನಾ ವೀಸಾ ನೀತಿಯಲ್ಲಿ ಸಡಿಲೀಕರಣ ಮಾಡಿದೆ. ಭಾರತೀಯರಿಗೆ ಇದೀಗ ಚೀನಾ ವೀಸಾ ಪಡೆಯಲು ಆನ್‌ಲೈನ್ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕಿಲ್ಲ. ನೇರವಾಗಿ ವೀಸಾ ಕೇಂದ್ರದಲ್ಲಿ ಅಪ್ಲಿಕೇಶನ್ ನೀಡಿದರೆ ಸಾಕು. ಪ್ರಕ್ರಿಯೆ ಆರಂಭಗೊಳ್ಳಲಿದೆ. ಅಲ್ಪಾವಧಿಗೆ ಚೀನಾಗೆ ಭೇಟಿ ನೀಡುವ ಭಾರತೀಯರಿಗೆ ಬಯೋಮೆಟ್ರಿಕ್ ನೀತಿಯಲ್ಲೂ ಸಡಿಲೀಕರಣ ಮಾಡಲಾಗಿದೆ. ಇನ್ನು ಚೀನಾ ವೀಸಾ ಇದೀಗ ಕೈಗೆಟುಕುವ ಬೆಲೆಯಲ್ಲಿ ಸಿಗುವಂತೆ ಮಾಡಲಾಗಿದೆ. ಈ ಮೂಲಕ ಹೆಚ್ಚಿನ ಭಾರತೀಯರು ಚೀನಾ ಪ್ರವಾಸ ಮಾಡುವಂತೆ ಚೀನಾಗೆ ಭೇಟಿ ನೀಡುವಂತೆ ಮಾಡಲಾಗಿದೆ.
ಅಮೆರಿಕದಲ್ಲಿ 30 ದಿನಕ್ಕಿಂತ ಹೆಚ್ಚು ವಾಸಿಸುವ ವಿದೇಶಿ ಪ್ರಜೆಗೆ ನೋಂದಣಿ ಕಡ್ಡಾಯ
