Asianet Suvarna News Asianet Suvarna News

ಭಾರತಕ್ಕೆ ಚೀನಾ ಭಾರಿ ಅಪಾಯ: ಸೇನಾಪಡೆಗಳ ಮುಖ್ಯಸ್ಥ ರಾವತ್‌!

* ಚೀನಾವನ್ನು ನಂಬಲಾಗದು, ಗಡಿಯಿಂದ ನಮ್ಮ ಸೇನೆ ವಾಪಸ್‌ ಕರೆಸಲ್ಲ

* ಭಾರತಕ್ಕೆ ಚೀನಾ ಭಾರಿ ಅಪಾಯ: ಸೇನಾಪಡೆಗಳ ಮುಖ್ಯಸ್ಥ ರಾವತ್‌

Chief Of Defence Staff Gen Rawat Says China Is Biggest Security Threat pod
Author
Bangalore, First Published Nov 13, 2021, 6:39 AM IST

ನವದೆಹಲಿ(ನ.13): ಸುತ್ತಮುತ್ತಲಿನ ರಾಷ್ಟ್ರಗಳ ಜತೆ ಕಾಲು ಕೆರೆದು ಕದನಕ್ಕಿಳಿಯುವ ನೆರೆಯ ಚೀನಾ ("China) ಭಾರತದ ಭದ್ರತೆಗಿರುವ ಅತಿದೊಡ್ಡ ಅಪಾಯ ಎಂದು ಭಾರತದ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥ ಜ| ಬಿಪಿನ್‌ ರಾವತ್‌ (Defence Chief General Bipin Rawat) ಹೇಳಿದ್ದಾರೆ. ಆದರೆ ಭೂಗಡಿ ಮತ್ತು ಸಮುದ್ರದ ಮುಖಾಂತರ ಚೀನಾದಿಂದ ಎದುರಾಗುವ ಯಾವುದೇ ದುಸ್ಸಾಹಸಗಳನ್ನು ಎದುರಿಸಲು ಭಾರತ ಸೇನೆ ಸರ್ವಸನ್ನದ್ಧವಾಗಿದೆ ಎಂದು ಗುಡುಗಿದ್ದಾರೆ.

 

ಚೀನಾ ನಡುವಿನ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಾತನಾಡಿದ ಅವರು, ‘ಚೀನಾದಿಂದ ಹಿಮಾಲಯದ (Himalayas) ಗಡಿಯನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕಳೆದ ವರ್ಷ ಸಾವಿರಾರು ಶಸ್ತ್ರಸಜ್ಜಿತ ಯೋಧರು ಮತ್ತು ಶಸ್ತ್ರಾಸ್ತ್ರಗಳನ್ನು ರವಾನಿಸಲಾಗಿದೆ. ಆದರೆ ಸದ್ಯಕ್ಕೆ ಅವರನ್ನು ವಾಪಸ್‌ ಕರೆಸಿಕೊಳ್ಳುವ ಸ್ಥಿತಿ ಇಲ್ಲ. ಚೀನಾ ನಡೆಗಳು ನಂಬಿಕೆಗೆ ಅರ್ಹವಾಗಿಲ್ಲ ಹಾಗೂ ಅವು ಸಂದೇಹಾಸ್ಪದವಾಗಿವೆ’ ಎಂದರು. ಈ ಮೂಲಕ ಚೀನಾದಿಂದ ದಾಳಿ ಭೀತಿ ಇದೆ ಎಂದು ಪರೋಕ್ಷವಾಗಿ ಹೇಳಿದರು.

ನಂಬಿಕೆಯ ಕೊರತೆ:

‘ಕಳೆದ ತಿಂಗಳಷ್ಟೇ ಉಭಯ ಗಡಿಗಳಲ್ಲಿರುವ ಸೇನೆಗಳನ್ನು ವಾಪಸ್‌ ಕರೆಸಿಕೊಳ್ಳುವ ನಿಟ್ಟಿನಲ್ಲಿ ಭಾರತ (India) ಮತ್ತು ಚೀನಾ ಸೇನಾ ಕಮಾಂಡರ್‌ಗಳ ಮಧ್ಯೆ 13ನೇ ಸುತ್ತಿನ ಮಾತುಕತೆ ನಡೆಯಿತು. ಆದರೆ, ಉಭಯ ಪಕ್ಷಗಳು ತಮ್ಮ ಸೇನೆಯನ್ನು ಗಡಿಯಿಂದ ಹಿಂಪಡೆಯಲು ನಿರಾಕರಿಸಿದವು. ಪರಸ್ಪರ ಸಂದೇಹ ಮತ್ತು ನಂಬಿಕೆ ಕೊರತೆಯಿಂದಾಗಿ ಅಣ್ವಸ್ತ್ರ ಹೊಂದಿದ ಉಭಯ ದೇಶಗಳ ನಡುವಿನ ಗಡಿ ಬಿಕ್ಕಟ್ಟು ಪರಿಹಾರ ಸಾಧ್ಯವಾಗುತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

ನಮ್ಮ ಜತೆಗಿನ ಮುಷ್ಟಿಯುದ್ಧದ ಬಳಿಕ ಚೀನಾ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ತನ್ನ ಪ್ರಜೆಗಳು ಅಥವಾ ಸೇನಾ ಯೋಧರಿಗಾಗಿ ಹಳ್ಳಿಗಳನ್ನು ನಿರ್ಮಿಸುತ್ತಿದೆ ಎಂದೂ ರಾವತ್‌ ಅಸಮಾಧಾನ ವ್ಯಕ್ತಪಡಿಸಿದರು.

ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ (Taliban) ಸರ್ಕಾರದಿಂದ ಕಾಶ್ಮೀರ ಉಗ್ರರಿಗೆ (Kashmir Terrorists) ಶಸ್ತ್ರಾಸ್ತ್ರ ಪೂರೈಕೆ ಭೀತಿ ಇದೆ ಎಂದೂ ಇದೇ ವೇಳೆ ಅವರು ಕಳವಳ ವ್ಯಕ್ತಪಡಿಸಿದರು.

ರಾವತ್‌ ಹೇಳಿದ್ದೇನು?

1. ಚೀನಾ ನಂಬಿಕೆಗೆ ಅರ್ಹ ರಾಷ್ಟ್ರವಲ್ಲ, ಅದರ ನಡೆಗಳು ಅನುಮಾನಾಸ್ಪದವಾಗಿವೆ

2. ಭಾರತ-ಚೀನಾ ಮಧ್ಯೆ ನಂಬಿಕೆ ಕೊರತೆಯಿಂದ ಗಡಿ ಸಮಸ್ಯೆ ಇತ್ಯರ್ಥವಾಗುತ್ತಿಲ್ಲ

3. ಗಡಿಯಲ್ಲಿ ತನ್ನ ಜನರು ಹಾಗೂ ಯೋಧರಿಗಾಗಿ ಚೀನಾ ಹಳ್ಳಿಗಳನ್ನು ನಿರ್ಮಿಸುತ್ತಿದೆ

4. ಕಳೆದ ವರ್ಷ ಗಡಿಗೆ ಕಳುಹಿಸಿದ ನಮ್ಮ ಯೋಧರು, ಶಸ್ತ್ರಾಸ್ತ್ರ ಹಿಂದಕ್ಕೆ ಕರೆಸೋದಿಲ್ಲ

Follow Us:
Download App:
  • android
  • ios