ಭೋಪಾಲ್(ಡಿ.13)‌: ಸಂಬಂಧ ಹಳಸಿದ ಬಳಿಕ ಮಹಿಳೆಯರು ಅತ್ಯಾಚಾರ ಆರೋಪ ಮಾಡಿ ದೂರು ನೀಡುತ್ತಾರೆ ಎಂದು ಛತ್ತೀಸ್‌ಗಢ ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದ್ದಾರೆ. ಅವರ ಹೇಳಿಕೆ ಇದೀಗ ಆಕ್ರೋಶಕ್ಕೆ ಎಡೆ ಮಾಡಿ ಕೊಟ್ಟಿದೆ.

ಮಹಿಳೆಯರ ಮೇಲಿನ ದಬ್ಬಾಳಿಕೆ ಬಗ್ಗೆ ಬಿಲಾಸ್‌ಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕಿರಣ್‌ಮಯಿ ನಾಯಕ್‌, ಹೆಚ್ಚಿನ ಪ್ರಕರಣದಲ್ಲಿ ಮಹಿಳೆಯರು ಒಮ್ಮತದ ಸಂಬಂಧ ಅಥವಾ ಲಿವ್‌ ಇನ್‌ ಸಂಬಂಧ ಇಟ್ಟುಕೊಂಡಿರುತ್ತಾರೆ. ಆದರೆ ಸಂಬಂಧ ಹಾಳಾದ ಬಳಿಕ ಬಂದು ಅತ್ಯಾಚಾರ ನಡೆದಿದೆ ಎಂದು ದೂರು ನೀಡುತ್ತಾರೆ ಎಂದು ಹೇಳಿದ್ದಾರೆ.

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಏರಿಕೆಯಾಗುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ವೇಳೆಯಲ್ಲೇ, ಮಹಿಳಾ ಆಯೋಗದ ಅಧ್ಯಕ್ಷೆಯ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.