ಭಾರತದಲ್ಲಿ ಚೀತಾ ಸಂತತಿ ಮರು ಅಭಿವೃದ್ಧಿ!
* ಭಾರತದಲ್ಲಿ ಚೀತಾ ಸಂತತಿ ಮರು ಅಭಿವೃದ್ಧಿ
* ಆಫ್ರಿಕಾದ ಚೀತಾಗಳು ನವೆಂಬರ್‌ನಲ್ಲಿ ಭಾರತಕ್ಕೆ ಆಗಮನ
* ಮಧ್ಯ ಪ್ರದೇಶದ ಕುನೋ ನ್ಯಾಷನಲ್ ಪಾರ್ಕ್ನಲ್ಲಿ ಸಾಕಣೆ
ಭೋಪಾಲ್(ಮೇ.24): 1952ರಲ್ಲಿ ಭಾರತದಲ್ಲಿ ಅವಸಾನಗೊಂಡ ಚೀತಾ ಸಂತತಿಯನ್ನು ಮರಳಿ ಅಭಿವೃದ್ಧಿಗೊಳಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ 5 ಗಂಡು ಮತ್ತು 5 ಹೆಣ್ಣು ಚೀತಾಗಳು ಮುಂದಿನ ನವೆಂಬರ್‌ನಲ್ಲಿ ಭಾರತಕ್ಕೆ ಆಗಮಿಸಲಿವೆ. ಆಫ್ರಿಕಾದಿಂದ ತರಲಾಗುವ ಇವುಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಅಭಯಾರಣ್ಯದಲ್ಲಿ ಇಟ್ಟು ಸಂತತಿ ಅಭಿವೃದ್ಧಿಗೆ ಯತ್ನಿಸಲಾಗುವುದು. ಭಾರತದ ಕಟ್ಟಕಡೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 1952ರಲ್ಲಿ ಚೀತಾ ಸಂತತಿ ಭಾರತದಲ್ಲಿ ಅವಸಾನಗೊಂಡಿದೆ ಎಂದು ಘೋಷಿಸಲಾಗಿತ್ತು. ಭಾರತದಲ್ಲಿ ಚೀತಾ ಸಂತತಿಯನ್ನು ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಆಫ್ರಿಕಾದಿಂದ ಚೀತಾವನ್ನು ಆಮದು ಮಾಡಿಕೊಳ್ಳುವುದಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಹೀಗಾಗಿ ಚೀತಾಗಳನ್ನು ತರಲು ವ್ಯವಸ್ಥೆ ಮಾಡಲಾಗುತ್ತಿದೆ.
ಇದೇ ಅರಣ್ಯದಲ್ಲಿ ಏಕೆ?
ಮಧ್ಯಪ್ರದೇಶ ಶಿರೋಪುರ್ ಜಿಲ್ಲೆಯ ಚಂಬಲ್ ಪ್ರಾಂತ್ಯದಲ್ಲಿರುವ ಕುನೋ ನ್ಯಾಷನಲ್ ಪಾರ್ಕ್, 750 ಚದರ್ ಕಿ.ಮೀ.ಗೆ ಹರಡಿಕೊಂಡಿದ್ದು, ಚೀತಾಗಳ ಬೇಟೆಗಳಾದ ಚಿಂಕಾರ, ನೀಲಗೈ, ಕಾಡುಹಂದಿ, ಚುಕ್ಕೆ ಜಿಂಕೆ, ಸಂಬಾರ್ ಜಿಂಕೆಗಳ ಆವಾಸ ತಾಣವಾಗಿದೆ. ಈ ಪಾರ್ಕ್ನಲ್ಲಿ ಆಫ್ರಿಕಾದಿಂದ ತಂದ ಚೀತಾಗಳನ್ನು ಸಾಕಲಾಗುತ್ತದೆ
ವಿಶೇಷ ತರಬೇತಿ
ಜುಲೈನಲ್ಲಿ ಭಾರತದ ಅಧಿಕಾರಿಗಳು ಆಫ್ರಿಕಾಕ್ಕೆ ತೆರಳಿ ಭಾರತೀಯ ಪರಿಸ್ಥಿತಿಗೆ ತಕ್ಕಂತೆ ಚೀತಾಗಳ ಸಂತತಿಯನ್ನು ಅಭಿವೃದ್ಧಿಪಡಿಸುವ ಕುರಿತಂತೆ ತರಬೇತಿ ಪಡೆದು ಅಕ್ಟೋಬರ್ ನವೆಂಬರ್ ವೇಳೆಗೆ ಭಾರತಕ್ಕೆ ಚೀತಾಗಳನ್ನು ಕರೆತರಲಿದ್ದಾರೆ ಎಂದು ವಿಜಯ್ ಶಾ ತಿಳಿಸಿದ್ದಾರೆ.