ಪಂಜಾಬ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದಲಿತ ಮುಖಂಡ ಮತ್ತು ಹಾಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ  ಅವರನ್ನು ಪಕ್ಷದ ‘ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಅಧಿಕೃತ ಘೋಷಣೆ ಮಾಡಿದ್ದಾರೆ.

ಲೂಧಿಯಾನ (ಫೆ.07): ಪಂಜಾಬ್‌ ವಿಧಾನಸಭೆ ಚುನಾವಣೆ (Punjab Election) ಹಿನ್ನೆಲೆಯಲ್ಲಿ ದಲಿತ ಮುಖಂಡ ಮತ್ತು ಹಾಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (Charanjit Singh Channi) ಅವರನ್ನು ಪಕ್ಷದ ‘ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ಭಾನುವಾರ ಅಧಿಕೃತ ಘೋಷಣೆ ಮಾಡಿದ್ದಾರೆ. ತನ್ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿನ ಸಿಎಂ ಸ್ಥಾನ ಕುರಿತಾದ ತಿಕ್ಕಾಟಕ್ಕೆ ಅಂತಿಮ ತೆರೆ ಬಿದ್ದಿದೆ. 

ಆದರೆ, ಈ ಪಟ್ಟಕ್ಕಾಗಿ ಭಾರೀ ಪೈಪೋಟಿ ಒಡ್ಡಿದ್ದ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರಿಗೆ ಇದು ಭಾರೀ ಹಿನ್ನಡೆ ಎಂದೇ ವಿಶ್ಲೇಷಿಸಲಾಗಿದೆ. ಭಾನುವಾರ ಇಲ್ಲಿ ನಡೆದ ಪಕ್ಷದ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ‘ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಯನ್ನು ನಾವು ಪಂಜಾಬ್‌ ಜನತೆಗೆ ಕೇಳಿದ್ದೆವು. ಅವರು ಚನ್ನಿ ಅವರ ಪರ ಒಲವು ವ್ಯಕ್ತಪಡಿಸಿದ್ದಾರೆ. 

ಹೀಗಾಗಿ ಚನ್ನಿ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗುತ್ತಿದೆ. ಬಡವರು ಅನುಭವಿಸುವ ಆತಂಕ ಮತ್ತು ಕಳವಳಗಳನ್ನು ಅರ್ಥ ಮಾಡಿಕೊಳ್ಳುವ ನಾಯಕ ಪಂಜಾಬ್‌ ಜನತೆಗೆ ಬೇಕಿದೆ. ಹೀಗಾಗಿ ಬಡವರ ಮನೆಯ ಚನ್ನಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಾಗುತ್ತಿದೆ’ ಎಂದರು. ಈ ನಡುವೆ, ಚನ್ನಿ ಅವರು ಸಿಧು ಅವರ ಪಾದ ಮುಟ್ಟಿನಮಸ್ಕರಿಸಿದ ಪ್ರಸಂಗವೂ ನಡೆಯಿತು.

Punjab Elections: ನಾನು ಸೂರ್ಯ ಕತ್ತಲನ್ನು ಸೀಳಿ ಉದಯಿಸುತ್ತೇನೆ, ಚನ್ನಿಗೆ ಸಿಧು ಟಾಂಗ್!

ಚನ್ನಿ ಸಂತಸ: ಈ ಬಗ್ಗೆ ಪ್ರತಿಕ್ರಿಯಿಸಿದ ಚನ್ನಿ ಅವರು, ‘ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಕ್ಕೆ ರಾಜ್ಯದ ಜನತೆ ಮತ್ತು ಹೈಕಮಾಂಡ್‌ಗೆ ಕೃತಜ್ಞತೆಗಳು. 111 ದಿನಗಳ ನನ್ನ ಆಡಳಿತವನ್ನು ನೀವು ನೋಡಿದ್ದೀರಿ. ಮುಂದಿನ ದಿನಗಳಲ್ಲಿ ಪಂಜಾಬ್‌ ಮತ್ತು ಪಂಜಾಬಿಗರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವೆ’ ಎಂದು ಹೇಳಿದರು.

ತಾರಕಕ್ಕೇರಿದ ಸಿಧು-ಚನ್ನಿ ಜಟಾಪಟಿ: ಮುಂಬರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್ ರಾಜ್ಯವನ್ನು ಉಳಿಸಿಕೊಳ್ಳಲೇಬೇಕು ಎನ್ನುವ ಹಠದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಇಬ್ಬರು ಪ್ರಮುಖ ನಾಯಕರುಗಳ ನಡುವಿನ ಭಿನ್ನಾಭಿಪ್ರಾಯವೇ ಹಿನ್ನಡೆ ಆಗುವ ಸಾಧ್ಯತೆ ಇದೆ. ಪಂಜಾಬ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಪಕ್ಷ ಭಾನುವಾರ ಪ್ರಕಟ ಮಾಡಲಿದೆ ಎಂದು ರಾಹುಲ್ ಗಾಂಧಿ ಹೇಳಿರುವ ಬೆನ್ನಲ್ಲಿಯೇ, ಉಭಯ ನಾಯಕರುಗಳ ನಡುವೆ ಮಾತಿನ ಸಮರ ಜೋರಾಗಿ ನಡೆಯುತ್ತಿದೆ.

ಪಂಜಾಬ್ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ರಾಹುಲ್ ಗಾಂಧಿ ಇನ್ನೆರಡೇ ದಿನದಲ್ಲಿ ತೆರೆ ಎಳೆಯಲಿರುವ ನಡುವೆಯೇ, ಶುಕ್ರವಾರ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ತಮ್ಮ ಪ್ರತಿಸ್ಪರ್ಧಿ ಹಾಗೂ ಹಾಲಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ವಿರುದ್ಧ ನೇರವಾಗಿ ಮಾತಿನ ದಾಳಿ ನಡೆಸಿದ್ದಾರೆ. ಚರಂಜಿತ್ ಸಿಂಗ್ ಚನ್ನಿಯ ಸಂಬಂಧಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟ ಬೆನ್ನಲ್ಲಿಯೇ ಪದಗಳ ಆಯ್ಕೆಯಲ್ಲಿ ಬಹಳ ಎಚ್ಚರ ವಹಿಸಿ ಮಾತನಾಡಿರುವ ಸಿಧು, "ಪ್ರಾಮಾಣಿಕ ಹಾಗೂ ಕ್ಲೀನ್ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ವ್ಯಕ್ತಿ" ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಬೇಕು ಎಂದು ಹೇಳಿದ್ದಾರೆ. 

Christian Conversions ಪ್ರೀತಿ ಸಿಗದೆ ಸಿಖ್ಖರು ಕ್ರಿಶ್ಚಿಯನ್‌ಗೆ ಮತಾಂತರ, ಸಿಎಂ ಚರಣಜಿತ್ ಹೇಳಿಕೆಗೆ ವ್ಯಾಪಕ ಖಂಡನೆ!

ಅದಲ್ಲದೆ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ನಾಯಕ ಕನಿಷ್ಠ 60 ಶಾಸಕರ ಬೆಂಬಲವನ್ನಾದರೂ ಹೊಂದಿರಬೇಕು ಎಂದು ನವಜೋತ್ ಸಿಧು ಅಭಿಪ್ರಾಯಪಟ್ಟಿದ್ದಾರೆ. "ನೀವು ನೈತಿಕ ಅಧಿಕಾರವಿಲ್ಲದ, ನೈತಿಕತೆಯಿಲ್ಲದ ಅಥವಾ ಅಪ್ರಾಮಾಣಿಕ ಮತ್ತು ಕೆಲವು ಭ್ರಷ್ಟಾಚಾರ ಮತ್ತು ಮಾಫಿಯಾದ ಭಾಗವಾಗಿರುವ ಯಾರನ್ನಾದರೂ ಆರಿಸಿದರೆ, ಜನರು ಬದಲಾವಣೆಗಾಗಿ ಮತ ಚಲಾಯಿಸುತ್ತಾರೆ" ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ತಿಳಿಸಿದ್ದಾರೆ.