ಉತ್ತರಕಾಶಿಯಲ್ಲಿ ಚಾರ್‌ಧಾಮ್ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ಪೈಲಟ್ ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ.
ಡೆಹ್ರಾಡೂನ್: ಹಿಂದೂಗಳ ಪವಿತ್ರ ತೀರ್ಥಯಾತ್ರೆಯಾದ ಚಾರ್‌ಧಾಮ್ ಯಾತ್ರೆಗೆ ಯಾತ್ರಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರೊಂದು ಅಪಘಾತಕ್ಕೀಡಾಗಿದ್ದು, ಈ ದುರಂತದಲ್ಲಿ ಹೆಲಿಕಾಪ್ಟರ್‌ನ ಪೈಲಟ್ ಸೇರಿದಂತೆ ಆರು ಜನ ಸಾವನ್ನಪ್ಪಿದ್ದಾರೆ. ಉತ್ತರಾಖಂಡದ ಉತ್ತರಕಾಶಿಯ ಗಂಗ್ನಾನಿ ಬಳಿ ಈ ಹೆಲಿಕಾಪ್ಟರ್ ಪತನಗೊಂಡಿದ್ದು, ಪೈಲಟ್ ಕ್ಯಾಪ್ಟನ್ ರಾಬಿನ್ ಸಿಂಗ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡು ಬದುಕುಳಿದ ಓರ್ವ ಯಾತ್ರಿಯನ್ನು ರಿಷಿಕೇಶದ ಏಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಚಾರ್‌ಧಾಮ್ ಯಾತ್ರಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಪತನಗೊಂಡ ಹೆಲಿಕಾಪ್ಟರ್ 200ರಿಂದ 59 ಅಡಿ ಆಳದ ಕಮರಿಗೆ ಬಿದ್ದಿದೆ.
ಏರೋ ಟ್ರಾನ್ಸ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಹೆಲಿಕಾಪ್ಟರ್ ಇದಾಗಿತ್ತು. ಮೃತರಲ್ಲಿ ಮೂವರು ಮುಂಬೈಗರಾಗಿದ್ದು, ಮತ್ತಿಬ್ಬರು ಯುಪಿ ಹಾಗೂ ಆಂಧ್ರಪ್ರದೇಶದವರಾಗಿದ್ದಾರೆ. ಇಂದು ಮುಂಜಾನೆ ಈ ಘಟನೆ ಸಂಭವಿಸಿದೆ. ಇಂದು ಬೆಳಗ್ಗೆ, ಡೆಹ್ರಾಡೂನ್‌ನ ಸಹಸ್ರಧಾರದಿಂದ ಹೊರಟ ಏರೋಟ್ರಾನ್ಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಹೆಲಿಕಾಪ್ಟರ್ (VT-QXF)ಖರ್ಸಾಲಿ ಹೆಲಿಪ್ಯಾಡ್‌ನಲ್ಲಿ ಪ್ರಯಾಣಿಕರನ್ನು ಇಳಿಸಿದೆ. ಸ್ವಲ್ಪ ಸಮಯದ ನಂತರ, ಈ ಹೆಲಿಕಾಪ್ಟರ್ ಖರ್ಸಾಲಿಯಿಂದ, ಹರ್ಸಿಲ್ ಹೆಲಿಪ್ಯಾಡ್‌ಗೆ ಹೋಗುವ ಹೊಸ ಪ್ರಯಾಣಿಕರನ್ನು ಕರೆದುಕೊಂಡು ಹೊರಟಿತ್ತು. ಆದರೆ ದುರಾದೃಷ್ಟವಶಾತ್ ಬೆಳಗ್ಗೆ 8:40 ರ ಸುಮಾರಿಗೆ, ಹೆಲಿಕಾಪ್ಟರ್ ಗಂಗಾನಣಿ ನಾಗರಾಜ ದೇವಾಲಯದ ಬಳಿ ಪತನಗೊಂಡು ಕಮರಿಗೆ ಉರುಳಿದೆ.
ಈ ಅಪಘಾತಕ್ಕೆ ನಿಖರವಾದ ಕಾರಣಗಳು ಇನ್ನೂ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತ ನಡೆದ ಸ್ಥಳವು ಹಳ್ಳಿಯಾಗಿದ್ದು, ಅಲ್ಲಿನ ಬೆಟ್ಟದ ಇಳಿಜಾರಿನಲ್ಲಿ 200ರಿಂದ 250 ಮೀಟರ್ ಕಮರಿಗೆ ಹೆಲಿಕಾಪ್ಟರ್ ಬಿದ್ದಿದೆ. ಪ್ರಸ್ತುತ ಎಸ್‌ಡಿಆರ್‌ಎಫ್, ಸೇನೆ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದವರನ್ನು ಮುಂಬೈನ ಮೂವರು ಯಾತ್ರಿಕರಾದ ಕಲಾ ಸೋನಿ (61), ವಿಜಯ ರೆಡ್ಡಿ (57), ಮತ್ತು ರುಚಿ ಅಗರ್ವಾಲ್ (56 ) ಹಾಗೂ ಉತ್ತರ ಪ್ರದೇಶದ ರಾಧಾ ಅಗರ್ವಾಲ್ (79) ಹಾಗೂ ಆಂಧ್ರಪ್ರದೇಶದ ವೇದಾವತಿ ಕುಮಾರಿ (48) ಹಾಗೂ ಹೆಲೆಕಾಪ್ಟರ್‌ನ ಪೈಲಟ್ ಗುಜರಾತ್ ಮೂಲದ ಕ್ಯಾಪ್ಟನ್ ರಾಬಿನ್ ಸಿಂಗ್ (60) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಭಾಸ್ಕರ್ (51) ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಘಟನೆಗೆ ಉತ್ತರಾಖಂಡ್ ಸಿಎಂ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದೊಂದು ಅತ್ಯಂತ ದುಃಖಕರ ಸುದ್ದಿ,, ರಕ್ಷಣಾ ಮತ್ತು ಪರಿಹಾರ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಲಾಗಿದ್ದು, ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಆಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.
ಉತ್ತರಕಾಶಿಯ ಗಂಗ್ನಾನಿ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಕೆಲವರು ಸಾವನ್ನಪ್ಪಿದ್ದಾರೆ ಎಂಬ ಅತ್ಯಂತ ದುಃಖಕರ ಸುದ್ದಿ ಬಂದಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಎಸ್‌ಡಿಆರ್‌ಎಫ್ ಮತ್ತು ಜಿಲ್ಲಾಡಳಿತದ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ. ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಮತ್ತು ಮೃತರ ಕುಟುಂಬಕ್ಕೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.


