ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಚಾರ್‌ಧಾಮ್ ಯಾತ್ರೆಯನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಭೂಕುಸಿತದಿಂದ ಹಲವು ಮಾರ್ಗಗಳು ಬಂದ್ ಆಗಿವೆ.
ಉತ್ತರಾಖಂಡ: ಡೆಹ್ರಾಡೂನ್ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದ ಹಿನ್ನೆಲೆ, ಏಪ್ರಿಲ್ 30ರಂದು ಆರಂಭವಾದ ಚಾರ್‌ಧಾಮ್ ಯಾತ್ರೆ (Char Dham Yatra 2025)ಗೆ ಗಣನೀಯ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರೂ, ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ.
ಈ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಶಾಂತ್ ಕುಮಾರ್ ಆರ್ಯ ಹೇಳಿದ್ದಾರೆ: “ಡೆಹ್ರಾಡೂನ್ ಹವಾಮಾನ ಕೇಂದ್ರದ ಭಾರೀ ಮಳೆಯ ಎಚ್ಚರಿಕೆ ಹಾಗೂ ಗರ್ವಾಲ್ ಆಯುಕ್ತರ ನಿರ್ದೇಶನದಂತೆ, ಚಾರ್‌ಧಾಮ್ ಯಾತ್ರೆಯನ್ನು ಮುಂದಿನ 24 ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭಕ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಪೊಲೀಸರು ಮತ್ತು ಸಂಬಂಧಿತ ಎಸ್‌ಡಿಎಂಗಳಿಗೆ ಸೂಚನೆ ನೀಡಲಾಗಿದೆ.”
ಬದ್ರಿನಾಥ ಮತ್ತು ಕೇದಾರನಾಥಕ್ಕೆ ತೆರಳುತ್ತಿರುವ ಯಾತ್ರಾರ್ಥಿಗಳನ್ನು ಶ್ರೀನಗರ ಮತ್ತು ರುದ್ರಪ್ರಯಾಗ ನಲ್ಲಿ ತಡೆಯಲಾಗುತ್ತಿದೆ. ಅದೇ ರೀತಿ, ಯಮುನೋತ್ರಿ ಮತ್ತು ಗಂಗೋತ್ರಿಗೆ ತೆರಳುತ್ತಿರುವ ಯಾತ್ರಾರ್ಥಿಗಳನ್ನು ವಿಕಾಸನಗರ ಮತ್ತು ಬಾರ್ಕೋಟ್ ನಲ್ಲಿ ತಡೆಹಿಡಿಯಲಾಗುತ್ತಿದೆ ಎಂದು ಗರ್ವಾಲ್ ಆಯುಕ್ತ ವಿನಯ್ ಶಂಕರ್ ಪಾಂಡೆ ಅವರು ಎಎನ್‌ಐಗೆ ತಿಳಿಸಿದ್ದಾರೆ. ಈಗಾಗಲೇ ದೇವಾಲಯ ಪ್ರದೇಶಗಳಲ್ಲಿ ಇರುವ ಭಕ್ತರನ್ನು ಕಡ್ಡಾಯವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಪ್ರಸ್ತುತ ಯಾತ್ರೆಯ ಸಂದರ್ಭಗಳಲ್ಲಿ ಪ್ರವಾಸ ತೀವ್ರ ಅಸ್ತವ್ಯಸ್ತಗೊಂಡಿದೆ.
ಕೇದಾರನಾಥಕ್ಕೆ ತೆರಳುವ ಪ್ರಮುಖ ಮಾರ್ಗಗಳಲ್ಲಿ ಒಂದಾದ ನಂದಪ್ರಯಾಗ ಮತ್ತು ಭನೇರೋಪಾನಿ ಬಳಿ ರಾಷ್ಟ್ರೀಯ ಹೆದ್ದಾರಿ, ಮಣ್ಣಿನ ಅವಶೇಷಗಳಿಂದ ಮುಚ್ಚಿ ಹೋಗಿದ್ದು, ಸಾಗಣೆ ಸ್ಥಗಿತವಾಗಿದೆ. ರುದ್ರಪ್ರಯಾಗದಲ್ಲಿ ನಿರಂತರ ಭೂಕುಸಿತಗಳಿಂದ ಸೋನ್‌ಪ್ರಯಾಗ-ಮುಂಕಟಿಯಾ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಸೋನ್‌ಪ್ರಯಾಗ್ ಮತ್ತು ಗೌರಿಕುಂಡ್ ಪ್ರದೇಶದಲ್ಲಿ ಮಾರ್ಗವನ್ನು ಭಾಗಶಃ ತೆರವುಗೊಳಿಸುವವರೆಗೆ ತಾತ್ಕಾಲಿಕ ನಿಲುಗಡೆ ಕ್ರಮಗಳು ಜಾರಿಗೊಂಡಿವೆ. ಅಧಿಕಾರಿಗಳು ಸ್ಥಳೀಯ ಸಾಗಣೆಯನ್ನು ಈಗ ಎಚ್ಚರಿಕೆಯಿಂದ ಮತ್ತು ನಿಯಂತ್ರಿತ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ.
ಇನ್ನೊಂದೆಡೆ, ಉತ್ತರಕಾಶಿ ಜಿಲ್ಲೆಯ ಬಾರ್ಕೋಟ್‌ನ ಸಿಲೈ ಬ್ಯಾಂಡ್ ಬಳಿ ಶನಿವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟದಿಂದ ಭೂಕುಸಿತ ಉಂಟಾಗಿ ಹೋಟೆಲ್ ನಿರ್ಮಾಣ ಸ್ಥಳವು ಹಾನಿಗೊಳಗಾಗಿದೆ. ಘಟನೆಯಲ್ಲಿ ಒಂಬತ್ತು ಕಾರ್ಮಿಕರು ಇನ್ನೂ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕುವ ಕಾರ್ಯದಲ್ಲಿ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ರಾಜ್ಯಾದ್ಯಂತ ಭಾರೀ ಮಳೆ ಮುಂದುವರಿಯಲಿದ್ದು, ಇನ್ನಷ್ಟು ಭೂಕುಸಿತಗಳು ಮತ್ತು ರಸ್ತೆ ಬಂದ್ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹೀಗಾಗಿ, ಹವಾಮಾನ ಪರಿಸ್ಥಿತಿ ಸ್ಥಿರವಾಗುವವರೆಗೆ ಯಾತ್ರಾರ್ಥಿಗಳಿಗೆ ತಮ್ಮ ಪ್ರಯಾಣ ಮುಂದುವರಿಸದಂತೆ ಸರ್ಕಾರವು ಸೂಚನೆ ನೀಡಿದೆ.
ಡೆಹ್ರಾಡೂನ್ ಹವಾಮಾನ ಇಲಾಖೆಯ ವರದಿ ಪ್ರಕಾರ, ಡೆಹ್ರಾಡೂನ್, ತೆಹ್ರಿ, ಪೌರಿ, ಹರಿದ್ವಾರ, ಚಂಪಾವತ್, ನೈನಿತಾಲ್ ಹಾಗೂ ಉಧಮ್ ಸಿಂಗ್ ನಗರ ಜಿಲ್ಲೆಯ ಕೆಲವೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಂಭವವಿದೆ. ಹಿಮಾಲಯದ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯೊಂದಿಗೆ ಗುಡುಗು, ಮಿಂಚಿನ ಮುನ್ಸೂಚನೆ ನೀಡಲಾಗಿದೆ.
ಡೆಹ್ರಾಡೂನ್, ತೆಹ್ರಿ, ಪೌರಿ, ಹರಿದ್ವಾರ, ನೈನಿತಾಲ್, ಚಂಪಾವತ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳ ಕೆಲವೆಡೆ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಮತ್ತೊಂದೆಡೆ, ಬಾಗೇಶ್ವರ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಮಿಂಚಿನ ಸಾಧ್ಯತೆ ಇದ್ದು, ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇದೆ.
