ಮುಂಬೈ(ಡಿ.24): ಬ್ರಿಟನ್‌ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ಉದಯಿಸಿರುವ ಹೊಸ ರೂಪದ ಕೊರೋನಾ ಪ್ರಭೇದ ತಡೆಗೆ ದೇಶದಲ್ಲಿ ಹೇರಲಾಗಿರುವ ನಿರ್ಬಂಧಗಳು ವಿದೇಶಗಳಿಂದ ತಾಯ್ನಾಡಿಗೆ ಮರಳುತ್ತಿರುವವರ ಗೊಂದಲ, ದ್ವಂದ್ವ ಮತ್ತು ಅಸಮಾಧಾನಗಳಿಗೆ ಕಾರಣವಾಗಿದೆ.

ಬ್ರಿಟನ್‌ ಸೇರಿದಂತೆ ಇನ್ನಿತರ ರಾಷ್ಟ್ರಗಳಿಂದ ವಾಪಸ್ಸಾಗುತ್ತಿರುವವರಿಗೆ ಕೊರೋನಾ ಪರೀಕ್ಷೆಗೊಳಪಡಿಸಿ, ಅವರನ್ನು ಸಾಮುದಾಯಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಆದರೆ ಕೊರೋನಾ ಪರೀಕ್ಷೆಗೆ ಮುಂಚಿತವಾಗಿಯೇ ಬುಕ್‌ ಮಾಡಿದ್ದರೂ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗಾಗಿ ಉದ್ದದ ಸಾಲುಗಳಲ್ಲಿ 7-8 ಗಂಟೆಗಳ ದೀರ್ಘಕಾಲ ಕಾಯುವ ದುಃಸ್ಥಿತಿ ಏರ್ಪಟ್ಟಿದೆ. ಜೊತೆಗೆ ಅಧಿಕಾರಿಗಳ ಮಧ್ಯೆ ಸಮನ್ವಯತೆಯೇ ಇಲ್ಲ ಎಂದು ಬ್ರಿಟನ್‌ ಮತ್ತು ಮಧ್ಯಪೂರ್ವ ರಾಷ್ಟ್ರಗಳಿಂದ ಭಾರತದ ಮುಂಬೈ ಮತ್ತು ದಿಲ್ಲಿ ಏರ್‌ಪೋರ್ಟ್‌ಗಳಿಗೆ ಮಂಗಳವಾರ ಮಧ್ಯರಾತ್ರಿ ಬಂದಿಳಿದ ಪ್ರಯಾಣಿಕರು ದೂರಿದ್ದಾರೆ.

ವಿದೇಶಗಳಿಂದ ಬರುವವರಿಂದ ಸೋಂಕು ಹಬ್ಬದಿರಲಿ ಎಂಬ ಉದ್ದೇಶ ಸರಿಯೇ. ಆದರೆ ವ್ಯವಸ್ಥೆಯೇ ಇಲ್ಲದಿದ್ದರೆ ಹೇಗೆ ಎಂದು ಅನಿವಾಸಿ ಭಾರತೀಯರು ಗೋಳಾಡುತ್ತಿದ್ದಾರೆ.