ಸಾಮಾನ್ಯವಾಗಿ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಮಾತ್ರ ಲಭ್ಯವಿರುವ ಪಹಣಿ ಪತ್ರಗಳನ್ನು ಇನ್ನು ಮುಂದೆ ರಾಜ್ಯಭಾಷೆಯ ಜೊತೆಗೆ ಇಂಗ್ಲಿಷ್‌, ಹಿಂದಿ ಸೇರಿದಂತೆ 22 ಅಧಿಕೃತ ಭಾಷೆಯಲ್ಲೂ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

ನವದೆಹಲಿ (ಅ.07): ಸಾಮಾನ್ಯವಾಗಿ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಮಾತ್ರ ಲಭ್ಯವಿರುವ ಪಹಣಿ ಪತ್ರಗಳನ್ನು ಇನ್ನು ಮುಂದೆ ರಾಜ್ಯಭಾಷೆಯ ಜೊತೆಗೆ ಇಂಗ್ಲಿಷ್‌, ಹಿಂದಿ ಸೇರಿದಂತೆ 22 ಅಧಿಕೃತ ಭಾಷೆಯಲ್ಲೂ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅನ್ಯ ರಾಜ್ಯದವರು ಭೂವ್ಯವಹಾರ ಮಾಡುವಾಗ ಆಗುವ ಭಾಷೆಯ ತೊಡಕು ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ರೆಕಾರ್ಡ್‌ ಆಫ್‌ ರೈಟ್ಸ್‌ ಅಥವಾ ಜಮಾಬಂದಿ ಎಂದು ಕರೆಸಿಕೊಳ್ಳುವ ಈ ದಾಖಲೆಗೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿದೆ. ಕರ್ನಾಟಕದಲ್ಲಿ ಆರ್‌ಟಿಸಿ ಅಥವಾ ಪಹಣಿ ಎಂದು ಕರೆಯಲಾಗುತ್ತದೆ. ‘ಭೂಮಿ’ ವೆಬ್‌ಸೈಟಿನಲ್ಲಿ ಮಾಲಿಕತ್ವದ ವಿವರ ನಮೂದಿಸಿದರೆ ಪಹಣಿ ಸಿಗುತ್ತದೆ. ಆದರೆ ಈ ದಾಖಲೆ ಕನ್ನಡದಲ್ಲಿ ಮಾತ್ರ ಇರುತ್ತದೆ. ಅದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಇದನ್ನು ದೇಶದ ಎಲ್ಲಾ 22 ಅಧಿಕೃತ ಭಾಷೆಗಳಿಗೆ ಭಾಷಾಂತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪಿಎಫ್‌ಐ ಕುಕೃತ್ಯ ಹಿಂದೆ ಸರ್ವೀಸ್‌ ತಂಡದ ಕೈವಾಡ: ಸಂಘಟನೆಯ ಮುಖಂಡರ ಭದ್ರತೆಗೆಂದು ಸ್ಥಾಪನೆ

‘ಆರಂಭದಲ್ಲಿ, ಎಲ್ಲಾ ರಾಜ್ಯಗಳಿಗೂ ಕಡ್ಡಾಯವಾಗಿ ತಮ್ಮ ರಾಜ್ಯದ ಭಾಷೆ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಪಹಣಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಿದೆ. ಜೊತೆಗೆ ರಾಜ್ಯಗಳಿಗೆ ಅನುಕೂಲ ಎನ್ನಿಸುವ ಇನ್ನೂ ಮೂರು ಭಾಷೆಗಳಿಗೆ ಅನುವಾದಿಸಲು ಸೂಚಿಸಲಾಗುತ್ತದೆ. ನಂತರ ಕ್ರಮೇಣ ಎಲ್ಲಾ 22 ಭಾಷೆಗಳಲ್ಲಿ ಸಿಗುವಂತೆ ಮಾಡಲಾಗುತ್ತದೆ’ ಎಂದು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೇಳಿದೆ.

ಈಗಾಗಲೇ ಈ ಕುರಿತ ಪ್ರಾಯೋಗಿಕ ಯೋಜನೆ ಮಹಾರಾಷ್ಟ್ರ, ಬಿಹಾರ, ಗುಜರಾತ್‌, ಪಾಂಡಿಚೇರಿ, ಉತ್ತರ ಪ್ರದೇಶ, ತಮಿಳುನಾಡು, ತ್ರಿಪುರ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಯಶಸ್ವಿಯಾಗಿದೆ. ಪಹಣಿ ಪತ್ರಗಳ ಭಾಷಾಂತರಕ್ಕೆಂದು ಶೀಘ್ರದಲ್ಲೇ ಸಾಫ್ಟ್‌ವೇರ್‌ ಒಂದನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ.

ಪಹಣಿಯಲ್ಲಿ ಸಾಮಾನ್ಯವಾಗಿ ಭೂಮಾಲಿಕರ ಹೆಸರು, ಎಲ್ಲ ಹಕ್ಕುದಾರರ ಹೆಸರು, ಭೂಮಿಯ ವಿಸ್ತೀರ್ಣ, ಅಲ್ಲಿ ಬೆಳೆಯುವ ಬೆಳೆ, ಸಾಲದ ವಿವರ ಹಾಗೂ ಸರ್ಕಾರದ ಮಾಲಿಕತ್ವವಿದ್ದರೆ ಅದರ ವಿವರ ಇತ್ಯಾದಿಗಳು ಇರುತ್ತವೆ. ಭೂಮಿ ಖರೀದಿ ಹಾಗೂ ಮಾರಾಟ ಮಾಡುವವರು ಮೊದಲಿಗೆ ಇದೇ ದಾಖಲೆಯನ್ನು ಪರಿಶೀಲಿಸುತ್ತಾರೆ.

National Herald Case: ಡಿಕೆ ಬ್ರದರ್ಸ್‌ಗೆ ಇಂದು ಇ.ಡಿ. ವಿಚಾರಣೆ ಬಿಸಿ

- ಎಲ್ಲ ಭಾಷೆಗೂ ತರ್ಜುಮೆಗೆ ಶೀಘ್ರ ಸಾಫ್ಟ್‌ವೇರ್‌

- ರೆಕಾರ್ಡ್‌ ಆಫ್‌ ರೈಟ್ಸ್‌ ಅಥವಾ ಪಹಣಿ ಸದ್ಯ ಆಯಾ ರಾಜ್ಯದ ಭಾಷೆಗಳಲ್ಲಿ ಲಭ್ಯವಿದೆ

- ಒಂದು ರಾಜ್ಯದವರು ಮತ್ತೊಂದು ರಾಜ್ಯದಲ್ಲಿ ಭೂಮಿ ಖರೀದಿಸಿದಾಗ ಓದಲು ಸಮಸ್ಯೆ

- ಪಹಣಿಯಲ್ಲಿ ಏನಿದೆ ಎಂದು ಅರಿಯಲು ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕು

- ಇದನ್ನು ತಪ್ಪಿಸಲು ಎಲ್ಲ ಭಾಷೆಗಳಲ್ಲೂ ಭೂ ದಾಖಲೆ ನೀಡಲು ಕೇಂದ್ರ ಸರ್ಕಾರ ಕ್ರಮ

- ಆರಂಭದಲ್ಲಿ ಸ್ಥಳೀಯ ಭಾಷೆ, ಹಿಂದಿ, ಇಂಗ್ಲಿಷ್‌ನಲ್ಲಿ ಲಭ್ಯ. ಬಳಿಕ ಇನ್ನೂ 3 ಭಾಷೆಗೆ ತರ್ಜುಮೆ

- ಕ್ರಮೇಣ 22 ಭಾಷೆಗಳಲ್ಲಿ ಸಿಗುವಂತೆ ವ್ಯವಸ್ಥೆ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ