Asianet Suvarna News Asianet Suvarna News

Note Ban: 500, 1000 ರೂಪಾಯಿಯ ನೋಟು ಬಳಕೆ ಏರಿದ್ದಕ್ಕೆ ನಿಷೇಧ!

ನೋಟ್‌ ಬ್ಯಾನ್‌ ಕುರಿತಾಗಿ ಸುಪ್ರೀಂ ಕೋರ್ಟ್‌ ಕೇಳಿದ್ದ ಮಾಹಿತಿಗೆ ಉತ್ತರ ನೀಡಿರುವ ಕೇಂದ್ರ ಸರ್ಕಾರ, ಆರ್‌ಬಿಐ ಶಿಫಾರಸಿನಂತೆ ನೋಟು ಬ್ಯಾನ್‌ ಮಾಡಲಾಗಿತ್ತು. ಕಪ್ಪುಹಣ, ಉಗ್ರ ಕೃತ್ಯಕ್ಕೆ ಹಣ ಪೂರೈಕೆ ನಿಲ್ಲಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಸುಪ್ರೀಂ ಕೋರ್ಟ್‌ನ  ಸಂವಿಧಾನ ಪೀಠಕ್ಕೆ ಕೇಂದ್ರದ ಹೇಳಿಕೆಯಲ್ಲಿ ತಿಳಿಸಿದೆ.
 

Centre tells Supreme Court Note ban was to counter black money terror finance san
Author
First Published Nov 18, 2022, 9:00 AM IST

ನವದೆಹಲಿ (ನ.18): ಭಾರತೀಯ ರಿಸರ್ವ್‌ ಬ್ಯಾಂಕಿನ ಕೇಂದ್ರೀಯ ಮಂಡಳಿಯ ಶಿಫಾರಸಿನಂತೆ ದೇಶದಲ್ಲಿ ಕಪ್ಪುಹಣ, ನಕಲಿ ಹಣ, ಉಗ್ರ ಕೃತ್ಯಕ್ಕೆ ಹಣಕಾಸು ಪೂರೈಕೆ ಹಾಗೂ ತೆರಿಗೆ ವಂಚನೆಯನ್ನು ತಪ್ಪಿಸಲು ಅಪನಗದೀಕರಣ ಮಾಡಲಾಗಿತ್ತು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಆರು ವರ್ಷಗಳ ಹಿಂದೆ ಮಾಡಿದ್ದ ಡಿಮಾನಿನೈಜೇಷನ್‌ ತೀರ್ಮಾನವನ್ನು ಸಮರ್ಥಿಸಿಕೊಂಡಿದೆ. 2016ರಲ್ಲಿ 500 ರು. ಹಾಗೂ 1000 ರು. ನೋಟ್‌ಗಳನ್ನು ನಿಷೇಧಿಸಿದ ಕ್ರಮವು ಸಾಕಷ್ಟುಯೋಚನೆ ಹಾಗೂ ಪರಾಮರ್ಶೆಗಳ ನಂತರ ಕೈಗೊಂಡ ಕ್ರಮವಾಗಿದೆ. ಇದು ದೇಶದಲ್ಲಿ ಕಪ್ಪುಹಣದ ಚಲಾವಣೆ, ಉಗ್ರವಾದಕ್ಕೆ ಹಣ ಪೂರೈಕೆ, ನಕಲಿ ಹಣದ ಚಲಾವಣೆ ಹಾಗೂ ತೆರಿಗೆ ವಂಚನೆಯನ್ನು ತಪ್ಪಿಸಲು ಕೈಗೊಂಡ ಆರ್ಥಿಕ ನೀತಿಗೆ ಸಂಬಂಧಿಸಿದ ನಿರ್ಧಾರವಾಗಿದೆ. ಆರ್‌ಬಿಐ ಕಾಯ್ದೆ ಹಾಗೂ ನಿರ್ದಿಷ್ಟಬ್ಯಾಂಕ್‌ ನೋಟುಗಳ ನಿಷೇಧ ಕಾಯ್ದೆಗಳ ಮೂಲಕ ಸಂವಿಧಾನಬದ್ಧವಾಗಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತನ್ನ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ಹೇಳಿದೆ.

ಅಪನಗದೀಕರಣವನ್ನು ಪ್ರಶ್ನಿಸಿ ಸಲ್ಲಿಕೆಯಾದ ಹಲವಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಪಂಚಸದಸ್ಯರ ಸಂವಿಧಾನ ಪೀಠ ವಿಚಾರಣೆ ನಡೆಸುತ್ತಿದೆ. ಈ ವೇಳೆ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು ಅಫಿಡವಿಟ್‌ ಸಲ್ಲಿಸಿದೆ. ಅರ್ಜಿಯ ಮುಂದಿನ ವಿಚಾರಣೆ ನ.24ರಂದು ನಡೆಯಲಿದೆ.

ಅಪನಗದೀಕರಣದ ಉದ್ದೇಶ: 500 ಹಾಗೂ 1000 ರು.ಗಳ ನೋಟು ನಿಷೇಧಿಸಲು ಆರ್‌ಬಿಐನ ಕೇಂದ್ರೀಯ ಮಂಡಳಿಯೇ ಶಿಫಾರಸು ಮಾಡಿತ್ತು. ಜೊತೆಗೆ ನೋಟು ನಿಷೇಧವನ್ನು ಹೇಗೆ ಮಾಡಬೇಕು ಎಂಬ ಕ್ರಮಗಳನ್ನು ಕೂಡ ಸೂಚಿಸಿತ್ತು. ಅದರಂತೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಆ ವೇಳೆ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಕೆಲ ದಿನಗಳ ಕಾಲ ಬಸ್‌, ರೈಲ್ವೆ ಹಾಗೂ ವಿಮಾನ ಟಿಕೆಟ್‌ ಬುಕಿಂಗ್‌, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಎಲ್‌ಪಿಜಿ ಸಿಲಿಂಡರ್‌ ಖರೀದಿ ಮುಂತಾದವುಗಳಿಗೆ ಈ ನೋಟುಗಳನ್ನು ಬಳಸಲು ಅವಕಾಶ ನೀಡಲಾಗಿತ್ತು. ಕಪ್ಪುಹಣ ಹಾಗೂ ತೆರಿಗೆ ವಂಚನೆಯನ್ನು ತಪ್ಪಿಸುವುದಲ್ಲದೆ ದೇಶದ ಔಪಚಾರಿಕ ಕ್ಷೇತ್ರಗಳ ಬೆಳವಣಿಗೆ, ಆರ್ಥಿಕತೆಯನ್ನು ಡಿಜಿಟಲೀಕರಣಗೊಳಿಸುವುದು, ತೆರಿಗೆ ಮೂಲದ ವಿಸ್ತರಣೆ ಇತ್ಯಾದಿ ಇನ್ನೂ ಸಾಕಷ್ಟುಉದ್ದೇಶಗಳು ಅಪನಗದೀಕರಣದ ಹಿಂದಿದ್ದವು ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ನೋಟು ಅಮಾನ್ಯೀಕರಣಕ್ಕೂ ಮುನ್ನ ಆರ್‌ಬಿಐ ಸಭೆಯಲ್ಲಿ ಆಗಿದ್ದೇನು? ಇದರ ಸಮಗ್ರ ವರದಿ ಸಲ್ಲಿಸಿ: ಸುಪ್ರೀಂ ಕೋರ್ಟ್‌!

"ಆರ್‌ಬಿಐ ತನ್ನ ಶಿಫಾರಸಿನ ಅನುಷ್ಠಾನಕ್ಕೆ ಕರಡು ಯೋಜನೆಯನ್ನು ಸಹ ಪ್ರಸ್ತಾಪಿಸಿತ್ತು. ಶಿಫಾರಸು ಮತ್ತು ಕರಡು ಯೋಜನೆಯನ್ನು ಕೇಂದ್ರ ಸರ್ಕಾರವು ಸರಿಯಾಗಿ ಪರಿಗಣಿಸಿದೆ ಮತ್ತು ಅದರ ಆಧಾರದ ಮೇಲೆ, ನಿಗದಿತ ಬ್ಯಾಂಕ್ ನೋಟುಗಳು ಎಂದು ಘೋಷಿಸುವ ಅಧಿಸೂಚನೆಯನ್ನು ಭಾರತೀಯ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ" ಎಂದು ಅದು ಹೇಳಿದೆ. ಜನರು ಎದುರಿಸುತ್ತಿರುವ ಕಷ್ಟಗಳನ್ನು ಕಡಿಮೆ ಮಾಡಲು ಮತ್ತು ತಗ್ಗಿಸಲು ವ್ಯಾಪಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರತಿಪಾದಿಸಿದ ಕೇಂದ್ರವು, ಬಸ್, ರೈಲು ಮತ್ತು ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸುವುದು, ಆಸ್ಪತ್ರೆಗಳು, ಎಲ್‌ಪಿಜಿ ಸಿಲಿಂಡರ್‌ಗಳ ಖರೀದಿ, ಸರ್ಕಾರದ ಚಿಕಿತ್ಸೆ ಮುಂತಾದ ಕೆಲವು ವಹಿವಾಟುಗಳಿಗೆ ನಿರ್ದಿಷ್ಟ ಬ್ಯಾಂಕ್ ನೋಟುಗಳಿಗೆ ವಿನಾಯಿತಿ ನೀಡಿದೆ ಎಂದು ಹೇಳಿದೆ.

Black & White ಅಮಾನ್ಯ ನೋಟುಗಳಿಗೆ ಹೊಸ ನೋಟು ನೀಡುವ ದಂಧೆ, ಬೆಂಗಳೂರಲ್ಲಿ ಇನ್ನೂ ಜೀವಂತ!

ನವೆಂಬರ್ 9 ರಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಸಮಗ್ರ ಅಫಿಡವಿಟ್ ಸಿದ್ಧಪಡಿಸಲು ಸಾಧ್ಯವಾಗದ ಪೀಠಕ್ಕೆ ಕ್ಷಮೆಯಾಚಿಸಿದರು ಮತ್ತು ಒಂದು ವಾರ ಕಾಲಾವಕಾಶವನ್ನು ಕೋರಿದ್ದರು.

Follow Us:
Download App:
  • android
  • ios