Asianet Suvarna News Asianet Suvarna News

ನೋಟು ಅಮಾನ್ಯೀಕರಣಕ್ಕೂ ಮುನ್ನ ಆರ್‌ಬಿಐ ಸಭೆಯಲ್ಲಿ ಆಗಿದ್ದೇನು? ಇದರ ಸಮಗ್ರ ವರದಿ ಸಲ್ಲಿಸಿ: ಸುಪ್ರೀಂ ಕೋರ್ಟ್‌!

ನರೇಂದ್ರ ಮೋದಿ ಸರ್ಕಾರದ 2016 ರ ನೋಟು ಅಮಾನ್ಯೀಕರಣದ ನಿರ್ಧಾರದ ಸಾಂವಿಧಾನಿಕ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಹೆಜ್ಜೆ ಇಟ್ಟಿದೆ. ನೋಟು ರದ್ದತಿ ನಿರ್ಧಾರದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿರುವ ನ್ಯಾಯಾಲಯ ಕೇಂದ್ರ ಸರ್ಕಾರ ಮತ್ತು ಆರ್‌ಬಿಐನಿಂದ ಪ್ರತಿಕ್ರಿಯೆ ಕೇಳಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 9 ರಂದು ನಡೆಯಲಿದೆ.
 

Supreme Court wants to know Decision Of Pm Modi Govt on 2016 Demonetisation will review it san
Author
First Published Oct 13, 2022, 12:35 PM IST

ನವದೆಹಲಿ (ಅ.13): ನರೇಂದ್ರ ಮೋದಿ ಸರ್ಕಾರದಲ್ಲಿ ವ್ಯಾಪಕವಾಗಿ ಚರ್ಚೆಯಾಗಿರುವ ವಿಚಾರವಾದ ನೋಟು ಅಮಾನ್ಯೀಕರಣದ ನಿರ್ಧಾರ ಬಗ್ಗೆ ಸುಪ್ರೀಂ ಕೋರ್ಟ್‌ ತನ್ನ ಮಹತ್ವದ ನಿರ್ಧಾರ ಪ್ರಕಟಿಸಿದೆ. ಬುಧವಾರ ನೋಟು ಅಮಾನ್ಯೀಕರಣ ಅಥವಾ ಡಿಮಾನಿಟೈಜೇಷನ್‌ ವಿಚಾರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಈ ಕುರಿತಾಗಿ ಕೇಂದ್ರ ಸರ್ಕಾರ ಹಾಗೂ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ಅಫಡವಿಟ್‌ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ.  ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಪಿ.ಚಿದಂಬರಂ, ಈ ವಿಚಾರವಾಗಿ ಕೇಂದ್ರ ಸರ್ಕಾರ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ಬರೆದ ಪತ್ರಗಳು, ಆರ್‌ಬಿಐ ಶಿಫಾರಸುಗಳು ಈ ಎಲ್ಲಾ ದಾಖಲೆಗಳನ್ನೂ ಕೋರ್ಟ್‌ಗೆ ಸಲ್ಲಿಕೆ ಮಾಡಬೇಕು ಎಂದು ಹೇಳಿದ್ದಾರೆ. ಅಲ್ಲದೆ ಆರ್‌ಬಿಐ ಕಾಯ್ದೆಯಡಿ ಸಂಪೂರ್ಣ ಕರೆನ್ಸಿ ನೋಟು ರದ್ದು ಮಾಡುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಹೇಳಿದೆ. ಈ ವಿವಾದದ ಹಿನ್ನೆಲೆಯಲ್ಲಿ ಅಫಿಡವಿಟ್ ಸಲ್ಲಿಸುವಂತೆ ಕೋರಲಾಗಿದೆ. ಅಫಿಡವಿಟ್ ಸಲ್ಲಿಸಲು ಮತ್ತು ಅಗತ್ಯವಿರುವ ದಾಖಲೆಗಳ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ಕೇಳಿದೆ. ನೋಟು ಅಮಾನ್ಯೀಕರಣಕ್ಕೂ ಮುನ್ನ ನಡೆದ ಆರ್‌ಬಿಐ ಮಂಡಳಿ ಸಭೆಯ ದಾಖಲೆಗಳನ್ನು ನೋಡಲು ಬಯಸುವುದಾಗಿ ನ್ಯಾಯಾಲಯ ಹೇಳಿದೆ. ಈ ಪ್ರಕರಣದ ವಿಚಾರಣೆಯನ್ನು ನವೆಂಬರ್ 9ಕ್ಕೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ.

ವಿಚಾರ ಸಾಂವಿಧಾನಿಕ ಪೀಠಕ್ಕೆ ತಲುಪಿದ್ದು ಹೇಗೆ?: ನವೆಂಬರ್ 2016 ರಲ್ಲಿ ನೋಟು ಅಮಾನ್ಯೀಕರಣದ ನಂತರ, ದೇಶಾದ್ಯಂತ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದವು. ನಂತರ ಸುಪ್ರೀಂ ಕೋರ್ಟ್ ದೇಶಾದ್ಯಂತ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ನೋಟು ಅಮಾನ್ಯೀಕರಣ ಪ್ರಕರಣಗಳ ವಿಚಾರಣೆಯನ್ನು ತಡೆಹಿಡಿಯಿತು ಮತ್ತು ವಿಷಯವನ್ನು ಐದು ನ್ಯಾಯಾಧೀಶರ ಪೀಠಕ್ಕೆ ವರ್ಗಾವಣೆ ಮಾಡಿತ್ತು.

ನೋಟ್ ಬ್ಯಾನ್ ವಿಚಾರಣೆಯಲ್ಲಿ ನ್ಯಾಯಾಲಯದ ಮುಂದಿರುವ ಪ್ರಶ್ನೆಗಳು: ಸುಪ್ರೀಂ ಕೋರ್ಟ್‌ನ ಆಗಿನ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರ ಪೀಠವು ನೋಟ್‌ ಬ್ಯಾನ್‌ ವಿಚಾರವಾಗಿ 9 ಪ್ರಶ್ನೆಗಳನ್ನು ರೂಪಿಸಿತು. ಅದರ ವಿಚಾರಣೆಗೆ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವನ್ನು ರಚನೆ ಮಾಡಲಾಗಿತ್ತು.

- ನೋಟು ಅಮಾನ್ಯೀಕರಣದ ನವೆಂಬರ್ 8 ರ ಅಧಿಸೂಚನೆ ಮತ್ತು ನಂತರದ ಅಧಿಸೂಚನೆಯು ಅಸಾಂವಿಧಾನಿಕವೇ?
- ನೋಟು ಅಮಾನ್ಯೀಕರಣವು ಸಂವಿಧಾನದ 300 (ಎ) ವಿಧಿ ಅಂದರೆ ಆಸ್ತಿಯ ಹಕ್ಕಿನ ಉಲ್ಲಂಘನೆಯೇ?
- ನೋಟು ಅಮಾನ್ಯೀಕರಣದ ನಿರ್ಧಾರವು ಆರ್‌ಬಿಐನ ಸೆಕ್ಷನ್-26(2)ರ ಅಡಿಯಲ್ಲಿ ಅಧಿಕಾರ ಮೀರಿದ ನಿರ್ಧಾರವಾಗಿದೆಯೇ?
- ನೋಟು ಅಮಾನ್ಯೀಕರಣವು ಮೂಲಭೂತ ಹಕ್ಕುಗಳ ಉಲ್ಲಂಘನೆಯೇ? ಉದಾಹರಣೆಗೆ, ಆರ್ಟಿಕಲ್ 14 ಅಂದರೆ ಸಮಾನತೆಯ ಹಕ್ಕು ಮತ್ತು ಆರ್ಟಿಕಲ್ 19 ಅಂದರೆ ಸಂವಿಧಾನದ ಸ್ವಾತಂತ್ರ್ಯದ ಹಕ್ಕು ಇದರ ಉಲ್ಲಂಘನೆಯಾಗಿದೆಯೇ?
- ನೋಟು ಅಮಾನ್ಯೀಕರಣದ ನಿರ್ಧಾರವನ್ನು ಪೂರ್ವಸಿದ್ಧತೆ ಇಲ್ಲದೆ ಜಾರಿಗೆ ತರಲಾಗಿದೆಯೇ? ಕರೆನ್ಸಿಗೆ ವ್ಯವಸ್ಥೆ ಇರಲಿಲ್ಲ ಮತ್ತು ಜನರಿಗೆ ನಗದು ತಲುಪಿಸುವ ವ್ಯವಸ್ಥೆ ಸರ್ಕಾರದ ಬಳಿ ಇದ್ದಿರಲಿಲ್ಲವೇ?
- ಸರ್ಕಾರದ ಆರ್ಥಿಕ ನೀತಿ ವಿರುದ್ಧ ಸಲ್ಲಿಸಲಾದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬಹುದೇ?
- ಬ್ಯಾಂಕ್ ಮತ್ತು ಎಟಿಎಂಗಳಿಂದ ಹಣ ತೆಗೆಯುವುದನ್ನು ಮಿತಿಗೊಳಿಸುವುದು ಜನರ ಹಕ್ಕುಗಳ ಉಲ್ಲಂಘನೆಯೇ?
- ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ ಹಳೆ ನೋಟು ಜಮಾ ಮತ್ತು ಹೊಸ ನೋಟು ಹಿಂಪಡೆಯಲು ನಿಷೇಧವಿದೆಯೇ?

ಯಾವ ಆಧಾರದ ಮೇಲೆ ಸವಾಲು ನೀಡಲಾಗಿದೆ?: ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರರಾದ ಪಿ.ಚಿದಂಬರಂ (P. Chidambaram) ಪರ ವಕೀಲರು, ನೋಟು ರದ್ದತಿಯಿಂದಾಗಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ, ಹಲವರು ನಿರುದ್ಯೋಗಿಗಳಾಗಿದ್ದಾರೆ. ನೋಟು ಅಮಾನ್ಯೀಕರಣ (Note demonetisation) ಮಾಡಬೇಕಾದರೆ ಮೀಸಲು ನಗದು ಇರಬೇಕಿತ್ತು. ಈ ನಿರ್ಧಾರಕ್ಕೆ ವಿವೇಚನೆಯನ್ನು ಬಳಸಲಾಗಿದೆಯೇ? ಈ ದಾಖಲೆಗಳನ್ನು ಪರಿಶೀಲಿಸಬೇಕು. ಆರ್ ಬಿಐಗೆ ಸರ್ಕಾರ ನೀಡಿರುವ ಸಲಹೆಗೆ ಸಂಬಂಧಿಸಿದ ದಾಖಲೆಗಳನ್ನು ನೋಡಬೇಕು. ಈ ದಾಖಲೆಗಳನ್ನು ಸಂಸತ್ತಿನಲ್ಲೂ ತೋರಿಸಿಲ್ಲ.  ಸುಪ್ರೀಂ ಕೋರ್ಟ್‌ ದೇಶದ ಮುಖ್ಯ ನ್ಯಾಯಾಲಯ, ಅದನ್ನು ನೀವಾದರೂ ಕೇಳಬೇಕು ಎಂದು ವಾದ ಮಾಡಲಾಗಿದೆ.

3 ವರ್ಷಗಳ ಬಳಿಕ ನೋಟ್ ಬ್ಯಾನ್ ಪರಿಣಾಮ ಹೇಳಿದ ಮೋದಿ!

RBI ಕಾಯಿದೆ ಹೇಳೋದೇನು: ಅರ್ಜಿದಾರರ ಪ್ರಕಾರ, ಆರ್‌ಬಿಐ ಕಾಯಿದೆಯ ಸೆಕ್ಷನ್ 26 (2) ರ ಅಡಿಯಲ್ಲಿ, ಕೇಂದ್ರವು ಕೆಲವು ಸರಣಿಯ ನೋಟುಗಳನ್ನು ರದ್ದುಗೊಳಿಸಬಹುದು, ಆದರೆ ಸಂಪೂರ್ಣ ಕರೆನ್ಸಿ ನೋಟು ರದ್ದುಗೊಳಿಸುವ ಅಧಿಕಾರವಿಲ್ಲ. ಈ ಕಾರಣಕ್ಕಾಗಿಯೇ ಅರ್ಜಿದಾರರು ಆರ್‌ಬಿಐ ಮಂಡಳಿ ಸಭೆಯ ದಾಖಲೆಗಳನ್ನು ಸಾರ್ವಜನಿಕಗೊಳಿಸುವಂತೆ ಕೋರಿದ್ದಾರೆ.

ನೋಟ್ ಬ್ಯಾನ್ ಪರಿಣಾಮ: 5 ಮಿಲಿಯನ್ ಉದ್ಯೋಗ ಕಡಿತ!

ಆರು ವರ್ಷಗಳ ಹಿಂದಿನ ಪ್ರಕರಣದ ವಿಚಾರಣೆಯೇಕೆ: ಕೇಂದ್ರ ಸರ್ಕಾರದ (Central Government) ಪರವಾಗಿ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರು ನೋಟು ಅಮಾನ್ಯೀಕರಣದ (Demonetisation) ವಿಚಾರಣೆ ಕೇವಲ ಅಕಾಡೆಮಿಕ್‌ ಎಂದು ಹೇಳಿದ್ದಾರೆ. ಐದಾರು ವರ್ಷಗಳ ಹಿಂದೆ ಒಂದು ನಿರ್ಧಾರ ಮಾಡಲಾಗಿತ್ತು ಮತ್ತು ಅದರಲ್ಲಿ ಈಗ ಏನೂ ಉಳಿದಿಲ್ಲ. ಈ ವಿಷಯವು ಕೇವಲ ಅಕಾಡೆಮಿಕ್‌  ಅಲ್ಲ ಎಂದು ಸುಪ್ರೀಂ ಕೋರ್ಟ್(Supreme Court)  ಕೂಡ ಹೇಳಿದೆ. ನಮಗೆ ಉಲ್ಲೇಖಿಸಿದ ಪ್ರಶ್ನೆಗಳಿಗೆ ಉತ್ತರಿಸುವುದು ನಮ್ಮ ಕರ್ತವ್ಯ. ಏನಾಗಿದೆ ಎನ್ನುವುದನ್ನು ಬದಲಾಯಿಸಲು ಸಾಧ್ಯವಿಲ್ಲ ಆದರೆ ಭವಿಷ್ಯದಲ್ಲಿ ಅದು ಮತ್ತೆ ಸಂಭವಿಸಬಹುದೇ ಎಂದು ನೋಡಬೇಕಾಗಿದೆ ಎಂದು ನ್ಯಾಯಮೂರ್ತಿ ಬೋಪಣ್ಣ ಹೇಳಿದ್ದಾರೆ. ಸರ್ಕಾರದ ನೀತಿ ನಿಯಮಮಾವಳಿಗಳ ಲಕ್ಷ್ಮಣ ರೇಖೆಯ ಬಗ್ಗೆ ನಮಗೆ ಅರಿವಿದೆ. ಆದರೆ, ಅದರ ಪರಾಮರ್ಶೆ ಮಾತ್ರ ಮಾಡಲಿದ್ದೇವೆ ಎಂದಿದೆ.

Follow Us:
Download App:
  • android
  • ios