ರಾಜ್ಯಗಳಿಗೆ ಸಡ್ಡು ಹೊಡೆಯಲು ಸಿಎಎ ಅಡಿ ಆನ್‌ಲೈನ್ ಪೌರತ್ವ?
ರಾಜ್ಯಗಳಿಗೆ ಸಡ್ಡು ಹೊಡೆಯಲು ಸಿಎಎ ಅಡಿ ಆನ್‌ಲೈನ್ ಪೌರತ್ವ?| ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ರಾಜ್ಯಗಳ ಹಿಂದೇಟು| ಹೊಸ ದಾರಿ ಹುಡುಕಲು ಮುಂದಾದ ಕೇಂದ್ರ ಸರ್ಕಾರ
ನವದೆಹಲಿ[ಜ.02]: ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಜಾರಿ ಮಾಡುವುದಿಲ್ಲ ಎಂದು ಬಿಜೆಪಿಯೇತರ ಹಲವು ರಾಜ್ಯಗಳು ಘೋಷಿಸಿರುವ ಹಿನ್ನೆಲೆಯಲ್ಲಿ ಆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಟಾಂಗ್ ನೀಡುವ ಸಂಭವವಿದೆ. ಸಿಎಎ ಅಡಿ ಆನ್‌ಲೈನ್ ಮೂಲಕವೇ ಪೌರತ್ವ ನೀಡಲು ಮುಂದಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗ ಇರುವ ನಿಯಮಗಳ ಪ್ರಕಾರ, ಪೌರತ್ವ ಪಡೆಯಲು ಬಯಸುವವರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಆನಂತರ ಅದು ಮುಂದಿನ ಹಂತಕ್ಕೆ ಹೋಗಲಿದೆ. ಸಿಎಎ ಅಡಿ ಇದೇ ನಿಯಮ ಪಾಲನೆ ಮಾಡಲು ರಾಜ್ಯ ಸರ್ಕಾರಗಳ ಅಸಹಕಾರ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ಸ್ವೀಕಾರ, ದಾಖಲೆ ಪರಿಶೀಲನೆ, ಪೌರತ್ವ ಮಂಜೂರು ಪ್ರಕ್ರಿಯೆಯನ್ನು ಆನ್‌ಲೈನ್‌ಗೊಳಿಸುವ ಅಲೋಚನೆ ಇದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೀಗಾದಲ್ಲಿ, ಪೌರತ್ವ ನೀಡುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಯಾವುದೇ ಹಂತದಲ್ಲೂ ಮಧ್ಯಪ್ರವೇಶ ಮಾಡಲು ಆಗುವುದಿಲ್ಲ ಎಂಬ ಲೆಕ್ಕಾಚಾರವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದೇ ವೇಳೆ, ಸಂವಿಧಾನದ 7ನೇ ಪರಿಚ್ಛೇದದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರೂಪಿಸಲಾಗಿದೆ. ಪೌರತ್ವ ವಿಚಾರ ಸಂಪೂರ್ಣವಾಗಿ ಕೇಂದ್ರ ಸರ್ಕಾರ ಪರಿಧಿಗೆ ಬರುತ್ತದೆ. ಹೀಗಾಗಿ ರಾಜ್ಯ ಸರ್ಕಾರಗಳಿಗೆ ಸಿಎಎ ತಿರಸ್ಕರಿಸುವ ಅಧಿಕಾರವಿಲ್ಲ ಎಂದೂ ಹೇಳಿದ್ದಾರೆ.
ಈಗಿನ ಪ್ರಕ್ರಿಯೆ ಏನು?
- ಪೌರತ್ವ ಬಯಸುವವರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು
- ಜಿಲ್ಲಾಧಿಕಾರಿಗಳು ಅರ್ಜಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ
ಹೊಸ ಪ್ರಸ್ತಾವ ಏನು?
- ಪೌರತ್ವ ಬಯಸುವವರು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
- ಆನ್‌ಲೈನ್ ವ್ಯವಸ್ಥೆಯಿಂದ ಯಾವುದೇ ಹಂತದಲ್ಲಿ ರಾಜ್ಯಗಳ ಮಧ್ಯಪ್ರವೇಶಕ್ಕೆ ಅವಕಾಶ ಇಲ್ಲ